ಊರೆಂದರೆ ಅಲ್ಲೊಂದು ಅರಳಿ ಕಟ್ಟೆ ಇರುವುದು ಸಾಮಾನ್ಯ. ಇದು ಹತ್ತಾರು ಹಳ್ಳಿಯವರು ಸಂಜೆ ಹೊತ್ತು ಕಾಲ ಕಳೆಯುವ ತಾಣ. ಇಂತಹ ಸ್ಥಳ ಇಲ್ಲದೆ ಇರುವ ಊರು ಅದು ಊರೇ ಅಲ್ಲ ಅನ್ನಬಹುದು.
ಹತ್ತಾರು ವರ್ಷಗಳ ಹಿಂದೆ ಈ `ಕಟ್ಟೆಕತೆ' ಬಹುತೇಕ ಊರುಗಳಲ್ಲಿ ಚಾಲ್ತಿಯಲ್ಲತ್ತು. ಇಂದು ಬಹಳಷ್ಟು ಊರುಗಳಲ್ಲಿ ಇದು ಬರಕಸ್ತಾಗಿದೆ. ಇದಕ್ಕೆ ಕಾರಣವು ಇದೆ. ಹಳ್ಳಿಗಳಲ್ಲಿ ಯುವಕರ ಸಂಖ್ಯೆ ಕಡಿಮೆಯಾಗಿರುವುದು. ಅಂದಿನ ಯುವಕರೆಲ್ಲ ಇಂದು ಮುದುಕರಾಗಿದ್ದಾರೆ. ಹತ್ತು ವರ್ಷದ ಹಿಂದೆ ಹಳ್ಳಿಗಳಲ್ಲಿ ಇದ್ದ ಕಟ್ಟಯ ಕಳೆ ಇಂದು ಕುಂದಿದೆ.
ಕಟ್ಟೆ, ಪ್ರಪಂಚದ ಎಲ್ಲಾ ವಿಷಯಗಳನ್ನು ವಿಸ್ತ್ರತವಾಗಿ, ಕುಲಂಕೂಷವಾಗಿ, ವಿಮರ್ಶಾತ್ಮಕವಾಗಿ, ವ್ಯಂಗ್ಯವಾಗಿ ಚರ್ಚೆ ಮಾಡುವ, ಹೊತ್ತು ಹೋಗದೆ, ಮನೆಯಲ್ಲಿ ಕೆಲಸ ಮಾಡದೆ ಇರುವವರೆ ಹೆಚ್ಚು ಮಂದಿ ಇರುವ ಸ್ಥಳ ಎಂದು ವ್ಯಾಖ್ಯಾನಿಸ ಬಹುದು.
ಹಬ್ಬ ಹರಿದಿನಗಳು ಬಂದರೆ ಕಟ್ಟೆಗೊಂದಷ್ಟು ಮೆರಗು ಬರುತ್ತದೆ. ಊರಿಂದ ಪರ ಊರಿಗೆ ಹೋದ ವಿದ್ಯಾವಂತ ದಡ್ಡರೆಲ್ಲ ಅಲ್ಲಿ ಸೇರುತ್ತಾರೆ. ಊರಿಗೆ ಬಂದವ ಕಟ್ಟೆಗೆ ಬರದೆ ಇರುತ್ತಾನೆಯೇ? ಬಂದೆ ಬರುತ್ತಾನೆ. ಕಟ್ಟೆಯ ಆಕರ್ಷಣೆಯೇ ಅಂದದ್ದು. ಸುತ್ತ ಹತ್ತು ಊರುಗಳ ಗಾಸಿಪ್ ಗೊತ್ತಾಗುವುದು ಅಲ್ಲಿಯೇ.
ಕಟ್ಟೆ ಪಂಚಾಯ್ತಿಯಲ್ಲಿ ಬರುವ ಕತೆಗಳ ಭಿನ್ನತೆ ಹೀಗಿರುತ್ತದೆ ಎನ್ನಬಹುದು. ಜಾರ್ಜ ಬುಷ್ ಏನೂ ಪ್ರಯೋಜನಕ್ಕೆ ಬರದೆ ಇರುವವನು. ಕ್ಲಿಂಟನ್ ಆದ್ರೆ ಮನೆಯಲ್ಲಿ ಹೆಂಡ್ತಿ ಇದ್ರು ಮೋನಿಕಾ ಗೀನಿಕಾ ಅಂತ ಮಜಾ ಮಾಡಿ ಕೊಂಡು ಇದ್ದ. ಇವನಿಗೆ ಯಾವಾಗಲೂ ಮತ್ತೊಂದು ದೇಶಕ್ಕೆ ತಾಪತ್ರಯ ಮಾಡುವ ಚಿಂತೆಯಲ್ಲಿಯೇ ಇರುತ್ತಾನೆ. ರಸಿಕತನ ಇಲ್ಲದೆ ಇರುವ ಮುಂಡೆದು. ಅದೇ ನಮ್ಮ ಪಾಟೀಲ್ರು ಅದೇ ಜೆ. ಹೆಚ್. ಪಾಟೀಲ್ರು ಹೆಣ್ಣು, ಹೆಂಡ ಇದ್ರೆ ಸಾಕಾಗಿತ್ತು ದೇಶ ಏನೇ ಆದ್ರು ತಮ್ಮ ರಸಿಕತನ ಬಿಟ್ಟವರಲ್ಲ.
ಅಲ್ಲ ಕಣಲೇ ನಮ್ಮೂರು ಎಂಎಲ್ಎ ಸಾಧಾರಣದವನಾ ಬೆಂಗಳೂರಲ್ಲಿ ಒಂದು ಹೆಣ್ಣು ಇಟ್ಟು ಕೊಂಡಿದಾನಂತೆ?
ಅದೆಲ್ಲಾ ಸಾಯ್ಲಿ ನಮ್ಮ ಪಂಚಾಯ್ತಿ ಅಧ್ಯಕ್ಷನಿಗೆ ಒಂದು ಸ್ಟೆಪ್ಣಿ ಇಟ್ಟು ಕೊಂಡಿದ್ದಾನೆ. ಕ್ಲಿಂಟನ್ ಒಂದು ನಾಲ್ಕು ಜನರನ್ನು ಇಟ್ಕೊಂಡರನು ಹೆಚ್ಚಲ್ಲ.
ಅಮೆರಿಕಾದಿಂದ ಪ್ರಾರಂಭವಾದ ಗಾಸಿಪ್ ಕತೆ ಪಂಚಾಯ್ತಿ ಅಧ್ಯಕ್ಷನವರೆಗೆ ಬರುತ್ತದೆ. ಅಲ್ಲಿಂದ ಕತೆಯ ಹಂದರ ಇಂದಿನ ವಿದ್ಯಮಾನಕ್ಕೆ ಬರುತ್ತದೆ.
ನಿನ್ನೆ ಯಕ್ಷಗಾನಕ್ಕೆ ನೀನು ಹೋಗಿದ್ಯಾ? ಹಾಳಬಿದ್ಹೊಗ್ಲಿ ಕಣ್ಣಿದೆಂತ ಸರ್ಕಸ್ಸು. ಚಿಟ್ಟಾಣಿ ಮೀರಸಲೆ ಯಾರಿಗೂ ಸಾಧ್ಯ ಇಲ್ಲ. ಆದರೆ ಸಾತ್ವಿಕ ಪಾತ್ರಕ್ಕೆ ಶಂಭುನೇ ಸೈ. ನಿನಾಸಂ ನಾಟಕ ಇದೆಯಂತೆ? ಯಾರಿಗೂ ಅರ್ಥ ಆಗದ ನಾಟಕಕ್ಕಿಂತ ಹಳ್ಳಿ ನಾಟಕನೇ ಅಡ್ಡಲ್ಲಾ.
ವಿಷಯ ಕೃಷಿಕಡೆ ಹೋರಳುತ್ತದೆ, ಅಲ್ಲಿಂದ ಕಾಲೇಜು ಹೋಗುವ ಹೆಣ್ಣು ಮಕ್ಕಳಿಂದ ಪ್ರಾರಂಭಗೊಂಡು, ಯಾವ ಹುಡುಗರ ಹಿಂದೆ ಅವಳಿದ್ದಾಳೆ ಅಥವಾ ಅವಳ ಹಿಂದೆ ಯಾವ ಜಾತಿಯ ಹುಡುಗ ಇದ್ದಾನೆ ಎನ್ನುವ ಎನ್ಕ್ವಾಯಿರಿ ನಡೆದು, ಸಾಬ್ರ ಪೈಕಿಯವನು ಇದ್ರೆ ಅವನಿಗೆ ನಾಲ್ಕು ತದಕಬೇಕು ಎನ್ನುವಲ್ಲಿಗೆ ಒಂದು ಹಂತ ಮಾತುಕತೆ ನಿಲ್ಲುತ್ತದೆ. ಅಲ್ಲಿಂದ ಒಬ್ಬೊಬ್ಬರೆ ಮನೆಕಡೆ ದಾರಿ ಹಿಡಿಯುತ್ತಾರೆ.
ಮರುದಿನ ಯಾಥಾ ಪ್ರಕಾರ ಸುದ್ದಿ, ಕತೆ, ಗಾಸಿಪ್. ಆದರೆ ಈ ಕಟ್ಟೆಯ ಆಕರ್ಷಣೆ ಮಾತ್ರ ಯಾರನ್ನು ಬಿಡುವುದಿಲ್ಲ. ಊರಿನ ಏಲ್ಲಾ ರಾಜಿಕೀಯ ಕ್ಷೇತ್ರ ಇದು. ಕಟ್ಟೆ ಸಂಸ್ಕೃತಿಯನ್ನು ಕಳೆದು ಕೊಂಡರೆ ಹಳ್ಳಿಯ ಸಂಸ್ಕೃತಿಯೇ ಕಳೆದಂತೆ ಎನ್ನಬಹುದು.
Thursday, October 23, 2008
ಊರಿಗೊಂದು ಕಟ್ಟೆ: ಅಲ್ಲೊಂದಿಷ್ಟು ಕತೆ
Subscribe to:
Post Comments (Atom)
1 comment:
’ವಿದ್ಯಾವಂತ ದಡ್ಡರೆಲ್ಲ’. ಹ್ಹ ಹ್ಹ ಹ್ಹ. ಮಸ್ತಾಗಿದೆ ಕಟ್ಟೆಪುರಾಣ. ನೀವು ಸ್ವಲ್ಪ ಗಡಿಬಿಡಿಯಲ್ಲಿ ’ಮಂಗಳಂ’ ಹಾಡಿದ ಹಾಗಿದೆ.
’ಪ್ರಿಂಟಿಂಗ್ ಮಿಸ್ಟೀಕು’ಗಳಿವೆ ಸ್ವಲ್ಪ. ಸರಿ ಮಾಡಿ. ಪ್ಯಾರಾ ನಡುವೆ ಒಂದು ಗೆರೆ ಬಿಡಿ.
Post a Comment