ಶಿಕ್ಷಕರ ದಿನಾಚರಣೆ ಬಂತೆಂದರೆ ಸುಮಾರು ಇಪ್ಪತ್ತು ವಷ೯ದ ಹಿಂದೆ ನೆನಪು ಓಡುತ್ತದೆ. ಅಂದು ಅಲ್ಲಿ ಎಷ್ಟು ಸಂಭ್ರಮವಿತ್ತು. ಹೊಳೆಯಂಚಿನಲ್ಲಿ ಚಿಗುರೊಡೆದು ನಿಂತಿದ್ದ ಮಾವಿನ ಗಿಡ ಹಾಳಾದರೂ ಪರವಾಗಿಲ್ಲ ಶಾಲೆಗೆ ಭಜ೯ರಿ ತೋರಣ ಕಟ್ಟಲಾಗುತ್ತಿತ್ತು. ಹರಿದ ಅಂಗಿಯನ್ನೇ ಹೊಲಿದು. ಅಪ್ಪನೂ ಹಾಕಿಕೊಳ್ಳಬಹುದಾದ, ಸಕಾ೯ರ ಕೊಡುತ್ತಿದ್ದ ಕಾಕಿ ಚೆಡ್ಡಿಯನ್ನು ಧಾರದಿಂದ ಬಿಗಿಯಾಗಿ ಕಟ್ಟಿಕೊಂಡು ಶಿಕ್ಷಕರ ದಿನಾಚರಣೆಗೆ ಹಾಜರಾಗುತ್ತಿದ್ದ ಕಾಲ.
ಧ್ವಜಾರೋಹಣ, ಮಳೆ ಇಲ್ಲದಿದ್ದರೆ ಒಂದು ಫಲಾ೯ಂಗ್ ಪ್ರಭಾತಪೇರಿ. ನಂತರ ಸಭೆ, ಅಲ್ಲಿ ಮಕ್ಕಳ ಭಾಷಣ. ಮಾನ್ಯ ಅಧ್ಯಕ್ಷರೇ, ಪೂಜ್ಯ ಗುರುಗಳೇ ಹಾಗೂ ನನ್ನ ಸಹಪಾಠಿಗಳೇ ಮತ್ತು ಮಿತ್ರರೇ ... ಇಂದು ಶಿಕ್ಷಕರ ದಿನಾಚರಣೆ. ಒಂದು ಅಕ್ಷರವನ್ನು ಕಲಿಸಿದವರನ್ನು ಗುರುವಾಗಿ ಸ್ವೀಕರಿಸಬೇಕಂತೆ .....ಇತ್ಯಾದಿ ಇತ್ಯಾದಿ ಹೇಳಿ ಮಧ್ಯದಲ್ಲಿ ಒಮ್ಮೆ ಗಾಂಧಿ ತಾತನನ್ನು ನೆನೆದು ಭಾಷಣ ಮುಗಿಯುತ್ತಿತ್ತು. ಇದರ ಅಥ೯ ಬರೆದು ಕೊಟ್ಟ ಅಣ್ಣನಿಗೋ, ಅಕ್ಕನಿಗೋ ಅಥವಾ ಅಪ್ಪನಿಗೆ ಮಾತ್ರ ಗೊತ್ತಾಗಿರುತ್ತಿತ್ತು ಬಿಟ್ಟರೆ ಭಾಷಣ ಮಾಡಿದವರಿಗೆ ಅಲ್ಲ.
ಇದೆಲ್ಲವನ್ನು ಮಕ್ಕಳು ಮಾಡುತ್ತಿದ್ದದ್ದು ಒಂದೇ ಕಾರಣಕ್ಕಾಗಿ ಅಕ್ಕೋರು (ಟೀಚರ್) ಹೇಳಿದ್ದಾರೆ. ಮನೆಯಲ್ಲಿ ಹೆತ್ತ ತಾಯಿ ಆದರೆ ಶಾಲೆಯಲ್ಲಿ ಅಕ್ಕೋರೆ ಅಮ್ಮ. ಅವರು ಹೊಡೆಯುತ್ತಿದ್ದರು ಆದರೆ ಮರುಕ್ಷಣದಲ್ಲೇ ಅವರು ಮುದ್ದಿಸುತ್ತಿದ್ದರು. ಹೊಸ ಆಟವನ್ನು ಹೇಳಿಕೊಡುತ್ತಿದ್ದರು. ಆಗಿನ ಹುಡುಗರು ಈಗಿನ ಮಕ್ಕಳಷ್ಟು ಶಾಪ್್೯ ಅಲ್ಲ, ಬೊಡ್ಡು. ಅಕ್ಕೊರು ಏನೇ ಹೇಳಿದರೂ ಅದು ಸತ್ಯ. ಗುರೂಜಿ (ಮೇಷ್ಟ್ರು) ಹೇಳಿದರೂ ನಂಬುತ್ತಿರಲಿಲ್ಲ ಕಾರಣ ಅಕ್ಕೋರು ಅಂದ್ರೆ ಸತ್ಯದ ಮತ್ತೊಂದು ರೂಪ ಎನ್ನುವ ಕಲ್ಪನೆ ಮಕ್ಕಳಲ್ಲಿ ಇತ್ತು. ಅಕ್ಕೋರು ಒಂದು ಪೆಟ್ಟು ಕೊಟ್ಟರೂ ಮನೆಗೆ ಬಂದು ಹೇಳುತ್ತಿರಲಿಲ್ಲ. ಆದರೆ ಗುರೂಜಿ ಹೊಡೆದರೆ ಅಳುತ್ತ ಮನೆಯವರೆಗೂ ಓಡಿದ ದಾಖಲೆಗಳಿವೆ.
ಅಕ್ಕೋರ ಮೇನೆ ಯಾಕೀಷ್ಟು ಪ್ರೀತಿ
ಇದಕ್ಕೂ ಕಾರಣಗಳವೆ. ಬಹುತೇಕ ಹಳ್ಳಿಗಳಲ್ಲಿ ಅಂಗನವಾಡಿಗಳಿರಲಿಲ್ಲ. ಮಗು ನಾಲ್ಕನೇ ವಷ೯ಕ್ಕೆ ಕಾಲಿಟ್ಟ ಕೂಡಲೇ, ಮನೆಯಲ್ಲಿ ಕೆಟ್ಟ ಕಿಲಾಡಿ ಶಾಲಿಗಾದ್ರೂ ಕಳಿಸಿ ಎನ್ನುವ ಫಮಾ೯ನು ಮನೆಯಲ್ಲಿ ಹೊರಡುತ್ತಿತ್ತು. ಊರಿಂದ ಶಾಲೆಗೆ ಹೋಗುವ ದೊಡ್ಡ ಮಕ್ಕಳ ಜೊತೆಗೆ ಈ ಮಕ್ಕಳು ಹೋಗುತ್ತಿದ್ದರು. ಆ ತರಗತಿಗೆ ಒಂದು ಹೆಸರು ಭಿನ್ನೆತಿ. ಅಂದರೆ ಇಂಗ್ಲಿಷ್ ಭಾಷೆಯಲ್ಲಿ ಹೇಳಬೇಕೆಂದರೆ ಎಲ್ಕೆಜಿ, ಯುಕೆಜಿ ಇದ್ಹಾಂಗೆ. ಈ ಚಿಳ್ಳೆ ಪಿಳ್ಳೆಗಳನ್ನು ಸಂಭಾಳಿಸುವ ಹೊಣೆಗಾರಿಕೆ ಅಕ್ಕೋರ ತಲೆ ಮೇಲೆ.
ನಾಲ್ಕು, ಐದು ವಷ೯ದ ಮಕ್ಕಳಿಗೆ ಏನು ಗೊತ್ತಾಗ ಬೇಕು? ಹಸಿವಾದರೆ ಅಕ್ಕೋರೆ ಹಸ್ವಾತು... ಎನ್ನುತ್ತಿದ್ದವು. ಅಕ್ಕೋರು ಬಹಳ ಹುಷಾರು ಇವರಿಗಾಗೆಯೇ ಬಿಸ್ಕತ್್ ತಂದಿಟ್ಟು ಕೊಳ್ಳುತ್ತಿದ್ದರು. ಇನ್ನು ಈ ಮಕ್ಕಳೋ ಒಂದಾ, ಎರಡನ್ನು ಸಹ ಶಾಲೆಯ ಪಡಸಾಲೆಯಲ್ಲಿ ಮಾಡಿ ಬಿಡುತ್ತಿದ್ದವು. ಅದನ್ನು ಚೊಕ್ಕ ಮಾಡುವ ಸರದಿ ಅಕ್ಕೋರದಾಗಿರುತ್ತಿತ್ತು. ಹೀಗೆ ತಾಯಿಯಂತೆ ಅಕ್ಕೋರು ಮಕ್ಕಳನ್ನು ಬೆಳೆಸುತ್ತಿದ್ದರು. ಈ ಮಕ್ಕಳಿಗೂ ಅಕ್ಕೋರು ಅಂದರೆ ದೇವರ ಪ್ರತಿ ರೂಪದಂತೆ ಭಾಸವಾಗುತ್ತಿತ್ತು.
ಅಕ್ಕೋರ ಮೇಲೆ ಪ್ರೀತಿ ಎಷ್ಟಿರುತ್ತಿತ್ತು ಎಂದರೆ ಮನೆಯಲ್ಲಿ ಒಂದೇ ಒಂದು ದಾಸವಾಳದ ಹೂ ಬಿಟ್ಟಿರಲಿ ದೇವರ ಮುಡಿ ಸೇರುವ ಮೊದಲು ಅಕ್ಕೋರ ತಲೆಯಲ್ಲಿ ಇರುತ್ತಿತ್ತು. ಮನೆಯಲ್ಲಿ ವಿಶೇಷ ಅಡುಗೆ ಮಾಡಿದರು ಅಕ್ಕೋರಿಗೆ, ಮಾವಿನ ಮಿಡಿ ಉಪ್ಪಿನಕಾಯಿ ಮಾಡಿದರೆ ಒಂದು ಬಾಟಲಿ ಉಪ್ಪಿನಕಾಯಿ ಅವರಿಗೆ ಸಂದಾಯಿತವಾಗುತ್ತಿತ್ತು. ಆದರೆ ಇದು ಲಂಚವಾಗಿರಲಿಲ್ಲ ಪ್ರೀತಿಯ, ಗೌರವದ ಕಾಣಿಕೆಯಾಗಿರುತ್ತಿತ್ತು.
ಕೀಟಲೆಯೂ ತಪ್ಪುತ್ತಿರಲಿಲ್ಲ
ಅಕ್ಕೋರು ಶಾಲೆ ಬರುತ್ತಿದ್ದಂತೆ ಕೆಲವು ಮಕ್ಕಳ ಹಾಡು ಶುರುವಾಗುತ್ತಿತ್ತು. ಅಕ್ಕೋರ್ ಅಕ್ಕೋರೆ ನಾಗಮ್ಮಕ್ಕೋರೆ ಕಬ್ಬಿನ ಗದ್ದೆಗೆ ದಿಬ್ಬಣ ಬಂತು ನೋಡ್ ಅಕ್ಕೋರೆ ಎನ್ನುವ ಹಾಡು. ಕೋಪ ಬಂದ ಅಕ್ಕೋರು ನೆಲ್ಲಿ ಕೋಲು ಪುಡಿಯಾಗುವರೆಗೆ ಹೊಡೆಯುತ್ತಿದ್ದರು. ನಂತರ ಯಾಕ್ರೋ ಹೀಗೆ ಗೋಳು ಹೋಯ್ತಿರಾ? ಎನ್ನುತ್ತ ನೋವಾಯ್ತೆನ್ರೋ? ಛೇ ಹೊಡಿಬಾರದಿತ್ತು ಎಂದು ಪಶ್ಚಾತಾಪ ಪಟ್ಟುಕೊಳ್ಳುತ್ತಿದ್ದ ಪರಿ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿತ್ತು. ತಿಂಗಳು ಕಾಲ ಅಕ್ಕೋರಿಗೆ ವಿಧೇಯರಾಗಿ ಯಥಾ ಪ್ರಕಾರ ಮತ್ತೆ ಹಾಡು, ಹಾಗೆ ಹೊಡೆತ, ಮತ್ತೆ ಸಮಾಧಾನ. ಅಷ್ಟೇ ಅಲ್ಲ, ಈಗಿನ ಹುಡುಗರ ರೀತಿ ಸ್ಟಾಂಡರ್ಡ್ ಮಕ್ಕಳು ಅಂದಿರಲಿಲ್ಲ. ಹೊಡೆದಾಟ, ಹೆಣ್ಣು ಮಕ್ಕಳಿಗೆ ರಗಳೆ ಕೊಡುವ ಹುಡುಗರು. ಆಟಕ್ಕೆ ಬಿಟ್ಟು ಮತ್ತೆ ಕ್ಲಾಸಿಗೆ ಸೇರಿಸಿಕೊಳ್ಳುವ ರೀತಿಯಲ್ಲಿ ಮಕ್ಕಳು ಇರುತ್ತಿರಲಿಲ್ಲ. ಮಳೆಗಾಲವಾದರೆ ಅರಲು, ಬೇಸಿಗೆಯಾದರೆ ಧೂಳು ಮೈಮೆತ್ತಿಕೊಂಡಿರುತ್ತಿತ್ತು. ಇದನ್ನೇಲ್ಲ ಸಹಿಸಿಕೊಂಡು ಪಾಠ ಮಾಡುತ್ತಿದ್ದರಲ್ಲ ಆ ಅಕ್ಕೋರುಗಳು ಮೆಚ್ಚಲೇ ಬೇಕು.
ಪರ ಊರ ಅಕ್ಕೋರು
ಇನ್ನೂರು, ಮೂನ್ನೂರು ಮೈಲು ದೂರದ ಊರಿಂದ ಈ ಅಕ್ಕೋರುಗಳು ಹಳ್ಳಿಗಳಿಗೆ ಬಂದಿರುತ್ತಿದ್ದರು. ಯಾರದ್ದೋ ಮನೆಯಲ್ಲಿ ವಾಸ್ತವ್ಯ. ಊರಿಗೆ ಹೋಗುವುದು ಅಂದರೆ ವಷ೯ಕ್ಕೆ ನಾಲ್ಕು ಬಾರಿ. ಈಗಿನ ತರಹ ಮೊಬೈಲ್್, ದೂರವಾಣಿ ಇರಲಿಲ್ಲ. ಇಂಗ್ಲೆಂಡ್ ಪತ್ರವೊಂದೇ ಸಂಪಕ೯ ಸೇತುವೆ. ನಾಲ್ಕು ದಿನ ಹಿಂದೆ ಬಂದ ಪತ್ರವನ್ನು ಐದನೇ ದಿನ ತಂದು ಕೊಡುವ ಪೋಸ್ಟ್್ಮನ್. ಅವನಿಗೆ ಬೈದಿರೆ ಮುಂದಿನ ಪತ್ರ ಇವರಿಗೆ ತಲುಪುದು ಮತ್ತು ತಡ. ಇದನ್ನೇಲ್ಲ ಸಹಿಸಿಕೊಂಡು, ಊರನ್ನು ಮರೆತು ಇರುವ ಊರನ್ನೇ ತಮ್ಮ ಊರೆಂದು ಹೊಂದಿಕೊಂಡು ಪಾಠ ಮಾಡುತ್ತಿದ್ದರಲ್ಲ ಆ ಶಿಕ್ಷಕರನ್ನು ಮರೆಯುವುದಕ್ಕೆ ಅಸಾಧ್ಯ
ಇನ್ನು ಇವರಿಗೆ ನಗರ ಸಂಪಕ೯ ತಿಂಗಳಿಗೊಮ್ಮೆ ಮಾತ್ರ. ಅದೂ ಬಿಇಓ ಮೀಟಿಂಗ್ ಕರೆದರೆ ಮಾತ್ರ ಸುಖಾಸುಮ್ಮನೆ ಹೋಗಿಬರಲಿಕ್ಕೆ ನೆರವು ಯಾರು ಇವರಿಗೆ. ಬಸ್ ಹತ್ತಿ ಪೇಟೆಗೆ ಹೋಗಬೇಕೆಂದರೆ ನಾಲ್ಕು ಮೈಲಿ ನಡೆದು ಬಸ್ ಹತ್ತಿ ಶಹರ ಸೇರಬೇಕಿತ್ತು. ಮೇಷ್ಟ್ರಾದರೆ ಸೈಕಲ್ ಹತ್ತಿ ಹೋಗುತ್ತಿದ್ದರು. ತಮ್ಮ ಅಗತ್ಯಗಳನ್ನು ಯಾರು ಪೇಚೆಗೆ ಹೋಗುತ್ತಾರೋ ಅವರ ಹತ್ತಿರ ಹೇಳಿ ಪೂರೈಸಿಕೊಳ್ಳ ಬೇಕಿತ್ತು ಹಳ್ಳಿ ಟೀಚರ್ಗಳಿಗೆ.
ಬದಲಾಗಿದೆ ಕಾಲ
ಹಳ್ಳಿಗೆ ಹೋಗಿ ಪಾಠ ಮಾಡಲಿಕ್ಕೆ ಈಗಿನ ಮೇಡಂಗಳು ಮನಸ್ಸು ಮಾಡಲ್ಲ. ಒಮ್ಮೆ ಮಾಡಿದರೂ ಶಾಲೆಯವರೆಗೆ ಟಾರ್ ರೋಡ್ ಇರಬೇಕು. ಇವರು ಸ್ಕೂಟಿ ತಗೊಂಡಿರುತ್ತಾರೆ. ಶಾಲೆ ಗಂಟೆ ಹೊಡೆಯುವ ಅವಧಿಗೆ ಹೋಗಿ ತಲುಪುತ್ತಾರೆ. ಮುಗಿದ ಕೊಡಲೇ ಹೊರಡುತ್ತಾರೆ. ಬಿನ್ನೆತಿ ಈಗಿಲ್ಲ. ಅಂಗನವಾಡಿಯಾಗಿದೆ. ಆಗಿನ ಹಾಗೇ ಕಿಲಾಡಿ ಮಕ್ಕಳು ಈಗಿಲ್ಲ. ಮೇಸ್ಟ್ರ ಮಂದಿಗೆ ಇವರು ಪಾಠ ಮಾಡಿ ಬರುತ್ತಾರೆ. ಹೊಡೆಯುವ ಹಾಗಿಲ್ಲ. ಕಾನೂನು ಪ್ರಕಾರ ತಪ್ಪು. ಅರಲು, ಧೂಳು ಮೈಕೈಗೆ ಮೆತ್ತಿಕೊಳ್ಳದ ಮಕ್ಕಳು ಯಾಕೆಂದರೆ ಇವರ ಆಟದ ಅವಧಿಯೇ ಕಡಮೆಯಾಗಿದೆ. ಲಗೋರಿ, ಕಬ್ಬಡಿ, ಕೋ.ಕ್ಕೋ ಇವರಾಡುವು ಕ್ರೀಡಾ ಕೂಟದ ಸಮಯದಲ್ಲಿ ಮಾತ್ರ. ಅಕ್ಕೋರು ಕಾಣೆಯಾಗಿ ಮೇಡಂಗಳು ಬಂದಿದ್ದಾರೆ.
ಜಮಾನ ಬದಲಾಗಿದೆ ಆದರೆ ಅಂದು ಅಕ್ಕೋರು ಎಂದು ಬಾಯ್ತುಂಬ ಕರೆಯುತ್ತಿದ್ದವರಿಗ ಅಕ್ಕೋರನ್ನು ಮರೆಯುವುದಕ್ಕೆ ಸಾಧ್ಯವಿಲ್ಲ. ಏನೇ ಇರಲಿ, ಹಳ್ಳಿ ಶಾಲೆಯಲ್ಲಿ ಅಂದು ಪಾಠ ಮಾಡಿದ್ದ ಅಕ್ಕೋರಿಗೆ, ಕಾಲಕ್ಕೆ ತಕ್ಕಂತೆ ಬದಲಾಗಿ ಇಂದು ಪಾಠ ಮಾಡುತ್ತಿರುವ ಮೇಡಂಗಳಿಗೆ ನಿಮ್ಮ ಪ್ರಿತಿಯ ವಿದ್ಯಾಥಿ೯ಗಳ ನಮನಗಳು.
(ಕನ್ನಡಪ್ರಭ ಸಖಿ ಪಾಕ್ಷಿಕದಲ್ಲಿ ಪ್ರಕಟವಾದ ಲೇಖನ)