Saturday, September 19, 2009

“ಸಾಲ ’ದ ಕತೆ

ಬೆಂಗಳೂರಿನ ಜಂಜಾಟ, ಏಕಾಂಗಿತನ ಸಾಕಾಗಿ ಹೋಗಿತ್ತು. ಅಂಖಡ ಒಂದು ವಾರ ರಜೆ ಹಾಕಿ ಊರಿಗೆ ಹೋಗಿದ್ದೆ. ಶಿವಮೊಗ್ಗ ದಾಟುತ್ತಿದ0ತೆ ಮಳೆಗಾಲದ ಇಫೆಕ್ಟ್ ಪ್ರಾರಂಭವಾಗಿತ್ತು.ಊರಿಗೆ ಹೋಗಿ ಇಳಿದೆ. ಜಡಿ ಮಳೆಯಲ್ಲ ಜಬ್ಬರ್ ಮಳೆ ನನ್ನನ್ನು ಸ್ವಾಗತಿಸಿತು. ಮಳೆ ನಿಲ್ಲಬಹುದೆಂಬ ನಂಬಿಕೆ ಇತ್ತು.
ನನ್ನ ನಂಬಿಕೆ ನೂರಕ್ಕೆ ನೂರು ಸುಳ್ಳಾಯಿತು. ಎಡಬಿಡದೆ ಜಡಿಮಳೆ ಸುರಿಯುತ್ತಲೇ ಇತ್ತು. ಯಾವ ಕಾರಣಕ್ಕೂ ಮನೆಯಿಂದ ಹೊರಬರಲಾರದ ಸ್ಥಿತಿ. ಹೊತ್ತು ಕಳೆಯಬೇಕಲ್ಲ?! ಹೆಬ್ಬಾಗಿಲ ಬಾಂಕನ್ನು ಬಿಸಿ ಮಾಡುವ ಯೋಚನೆ ಮಾಡಿದೆ.
ಸಾಮಾನ್ಯವಾಗಿ ನಮ್ಮ ಮನೆಯ ಬಾಂಕಿನ ಮೇಲೆ ಒಂದು ಕಡೆ ಅಮ್ಮಮ್ಮ( ಅಜ್ಜಿ), ಮತ್ತೊಂದು ಕಡೆ ನನ್ನ ಅಪ್ಪ ಕುಳಿತುಕೊಳ್ಳುವುದು ರೂಢಿ. ಆದರೆ ಅಮ್ಮಮ್ಮನಿಗೆ ಚಿಕೂನ್ ಗುನ್ಯ ಅಟಕಾಯಿಸಿಕೊಂಡಿತ್ತು. ಅದಕ್ಕಾಗಿ ಬಾಂಕೆ ಅಪ್ಪನೊಬ್ಬನೇ ವಾರಸುದಾರನಾಗಿದ್ದ. ನಾನು ಅಮ್ಮಮ್ಮನ ಜಾಗವನ್ನು ಆಕ್ರಮಿಸಿಕೊಂಡು ಅಪ್ಪನ ಜೊತೆ ಹರಟೆ ಹೊಡೆಯಲು ಕುಳಿತೆ. ನನ್ನ ಅಪ್ಪನ ಮಧ್ಯೆ ಎಲೆಅಡಿಕೆ ತಬಕು ಸ್ಥಾನ ಪಡೆದಿತ್ತು.
ನನ್ನ ಬೆಂಗಳೂರು ಜೀವನದ ಕಥೆಯನ್ನು ಹೇಳಲಿಕ್ಕೆ ಪ್ರಾರಂಭಿಸಿದೆ. ಯಾಕೋ ಅಪ್ಪನಿಗೆ ಇಷ್ಟವಾಗಲಿಲ್ಲ. ನನು ಬಿಡಬೇಕಲ್ಲ?`ಮೊದಲೇ ಆರಿಂಚಿನ ಮೊಳೆ ನಾನು' ಹೊಡೆಯದೇ ಬಿಟ್ಟೆನೆ? `ಅಪ್ಪ ಏನೇ ಹೇಳು, ಈ ಪೇಪರ್ ಕೆಲ್ಸಾ ಮಾತ್ರ ಬಾಳಾ ಗಮ್ಮತ್ತು ಇರ್ತು' ಎಂದು ಇಲ್ಲಿನ ಕೆಲವು ಪೋಲಿ ಜೋಕುಗಳನ್ನು ಹೇಳಿದೆ. ಆದರೆ ಅಪ್ಪ ನಗೆಯಾಡಲಿಲ್ಲ. ಹತ್ತಿರ ಹೋಗಿ ಕುಳಿತೆ. `ಎಂತಾ ಯೋಚನೆ ಮಾಡ್ತಾ ಇದ್ದೆ ಅಪ್ಪ' ಎಂದೆ.
ಅವನು ಖಿನ್ನ¬ನಾಗಿ ` ಆ ಇಂವ ಆತ್ಮಹತ್ಯೆ ಮಾಡ್ಕ್ಯ ಬಿಡ್ನಲಾ' ಎಂದ ನನಗೆ ಯಾರು ಎಂದು ಗೊತ್ತಾಗಲಿಲ್ಲ. `ಯಾರು' ಎಂದೆ. `ಅವ್ನೆ.. ಗಮಿನಗುಡ್ಡದಂವ', `ಓ.. ಸರಿ ಸರಿ ನಾನು ಸುದ್ದಿ ನೋಡಿದ್ದಿ. ನಂಗವು ಮೊದಲನೇ ಪುಟಕ್ಕೆ ಸುದ್ದಿ ಹಾಕಿದ್ಯ' ಎಂದೇ. ` ಹೌದಾ!.. ಆದ್ರೆ ಸಾಯಕಾಯಿತ್ತಿಲೆ, ಐದು ಲಕ್ಷ ಲೋನ್ಗೆ ಹೆದರಿ ಸತ್ತರೆ ಹೆಂಡತಿ ಮಕ್ಕಳ ಗತಿ ಎಂತು?. ಮತ್ತೊಂದು ಈ ಬಾರಿ ಇಂವ ಸ್ಯಾಂಪಲ್, ಮುಂದಿನ ವರ್ಷ ಅಡಿಕೆ ಸ್ಥಿತಿ ಹಿಂಗೆ ಇದ್ರೆ ಸುಮಾರಷ್ಟು ಜನ ಆತ್ಮಹತ್ಯೆ ಮಾಡಿಕೊಂಬದ್ರಲ್ಲಿ ಅನುಮಾನವೇ ಇಲ್ಲೆ' ಎಂದು
ಅಪ್ಪನ ಮಾತು ನನಗೆ ಹೊಟ್ಟೆಯಲ್ಲಿ ಬೆಂಕಿಯನ್ನು ಇಟ್ಟ ಹಾಗೇ ಆಯಿತು. `ಷೇ... ಅನ್ನದಾತನ ಸ್ಥಿತಿಯೇ ಹಿಂಗಾದ್ರೆ ದೇಶದ ಕತೆ ಎಂ. ಐಟಿ ಉದ್ಯಮ ಬೆಳೆದರೆ ಹೊಟ್ಟೆ ತುಂಬ್ತ.. ಸ್ಥಿತಿವಂತರು ಎಂದುಕೊಳ್ಳುವ ಅಡಿಕೆ ಬೆಳೆಗಾರರೇ ಸತ್ತರೆ, ಇನ್ನೂ ಭತ್ತ, ರಾಗಿ, ಬೆಳೆಯುವವರ ಕತೆ ಎನಾಗಬಹುದು.. ಹೀಗೆ ನಮ್ಮ ಕತೆ ಸಾಗಿತ್ತು. ಅಷ್ಟೋತ್ತಿಗೆ ಬಕ್ಕೇಮನೆ ಮಧಣ್ಣ ಬಂದ. ಅವನು ಬಂದರೆ ಒಂದಷ್ಟು ಗಮ್ಮತ್ತು ನಿಕ್ಕಿ.
ಮಧಣ್ಣನಿಗೆ 38 ವರ್ಷ ಆಗಿರಬಹುದು. ಆದರೆ ಕತೆ ಹೇಳು ಸ್ಟೈಲು 60 ಪ್ರಾಯದವರ ತರಹ. ತುಂಬಾ ವಿಡಂಭಣೆ ಇರುತ್ತದೆ. ಇರಲಿ, ಬಂದವರಿಗೆ ಆಸ್ರಿಗೆ (ಉಪಚಾರ) ಕೇಳುವ ಪದ್ಧತಿ ಬಿಡಲಿಕ್ಕೆ ಆಗುತ್ಯೆ? `ಚಹಾನೆ' ಈ ಸಮಯಕ್ಕೆ ಬೆಚ್ಚಗೆ. ಮಳೆ ಬೇರೆ ಬರುತ್ತಿದೆ ಎಂದು ತಿರ್ಮಾನಿಸಿ ಚಹಾನೆ ಓಕೆ ಎಂದಾಯಿತು. ಚಹಾ ಸೇವನೆ ಮಾಡುತ್ತಾ ಮಧಣ್ಣ ` ನೆಂಟರ ಮನೆಗೆ ಹೋದಲ್ಲಿ ಈ ಬಾಯಾರಿಕೆ ಕೇಳುವ ಪದ್ಧತಿ ಏಷ್ಟು ಉತ್ತಮವಾದದ್ದು. ಅಲ್ಲಾ ಅವರು ಕೇಳುವುದುದ ಪದ್ದತಿ. ಬೇಡ ಬೇಡ ಎನ್ನುವುದು ಸೌಜನ್ಯ. ಆಸ್ರಿಗೆ ಕೊಟ್ಟ ಮೇಲೆ ಕುಡಿಯುವುದು ಕರ್ತವ್ಯ' ಎನ್ನುವ ಮಾತಿನೊ0ದಿಗೆ ಕತಾಪೂರ್ವ ಪಿಠೀಕೆ ಹಾಕಿದ. ಹಾಗೇ ಕತೆ ಹೇಳುತ್ತಾ.. ಹೇಳುತ್ತಾ..`ಅಚ್ಚಣ್ಣ' ಎನ್ನುವ ಹಿರಿ¬ಯನ ಕತೆ ಪ್ರಾರಂಭವಾಯಿತು.
ಈ ಅಚ್ಚಣ್ಣ ಹಾಲ್ಕಣಿಯವನು. ತುಂಬಾ ಒಳ್ಳೆಯವ ಮತ್ತು ಅಷ್ಟೇ ಜಿಪುಣ. ಇವನ ಜಿಪುಣತನಕ್ಕೆ ಒಂದು ಉದಾಹರಣೆ ಎಂದರೆ `ಇವನು ಪ್ಲಾಸ್ಟಿಕ್ ಪಾದರಕ್ಷೆ ಹಾಕುತ್ತಿದ್ದರಂತೆ. ಎರಡನೇ ವರ್ಷಕ್ಕೆ ಇದು ನಾರಿನ ಪಾದರಕ್ಷೆಯಾಗಿರುತ್ತಿತ್ತಂತೆ. ಅದೇ ಚಪ್ಪಲಿ ಹರಿದ ಹಾಗೆ ಹೊಲಿಗೆ ಹಾಕಿ ಹಾಕಿ ಮೂರ್ನಾಲ್ಕು ವರ್ಷ ಅದೇ ಚಪ್ಪಲಿ ಬಳಸಿತ್ತಿದ್ದರಂತೆ. ಇನ್ನೂ ಇವರು ಉಟ್ಟುಕೊಳ್ಳುವ ಪಾಣಿ ಪಂಜೆ ಬಿಳಿಯ ಬಣ್ಣದ ಬದಲು ಕಪ್ಪು ಬಣ್ಣದಾಗಿರುತ್ತಂತೆ. ಇಂತಿಪ್ಪ ಅಚ್ಚಣ್ಣ ತುಂಬಾ ಹಣವನ್ನು ಕೂಡಿ ಹಾಕಿಟ್ಟಿದ್ದನಂತೆ. ಈ ಹಣವನ್ನೆಲ್ಲ ಹಿಂದುರಿಗಿಸದ ವ್ಯಕ್ತಿಳಿಗೆ ಬಡ್ಡಿಗೆ ನೀಡಿ ದಿವಾಳಿಯಾದನಂತೆ. ಒಳ್ಳೆಯವರಿಗೆ ಎಂದೂ ಹಣ ನೀಡಿ ಗೊತ್ತಿರಲಿಲ್ವಂತೆ. ದೊಡ್ಡ ಮನೆ ಇದ್ದದ್ದು ಹಿಸ್ಸೆ ಆಗಿ ನಾಲ್ಕು ಮನೆಯಾಯ್ತಂತೆ.
ಇವನ ಕತೆ ಹೇಳಿ ಮುಗಿಸುವವರೆಗೆ ಬಾವಯ್ಯ ಬಂದ. ಇವನು ನನ್ನ ಅಪ್ಪನಿಗೆ ಬಾವಯ್ಯ. ಆದರೆ ಎಲ್ಲರಿಗೂ ಬಾವಯ್ಯನೆ ಆಗಿದ್ದ. ಅದು ಇದು ಕತೆ ಆದ ನಂತರ ಕೇರಿ ಊರುಗಳ ಕತೆ ಪ್ರಾರಂಭವಾಯಿತು.
ಹರೀಶೆ ಒಂದೇ ಕೋಳಲ್ಲಿ ಐವತ್ತು ಮನೆ ಇದ್ದಿಕ್ಕೂ ಅಲ್ದನಾ? ಎಂಬ ಪ್ರಶ್ನೆಯನ್ನು ಬಾವಯ್ಯ ಬಿಸಾಕಿದ.
ಕೋಡಳ್ಳಿ( ಹೆಸರು ಬದಲಿಸಿದೆ)ನು ಹಾಂಗೆಯಲಾ. ಇಪ್ಪತ್ತೈದು ಮನೆ ಸಾಲಾಗಿ. ಎದುರಿಗೆ ತೋಟ. ಆ ಊರು ಮಜಾ ಇದ್ದು. ಆದ್ರೆ ಈ ಊರಲ್ಲಿ ಎಲ್ಲರ ಮನೆ ಬಚ್ಚಲು (ಬಾತ್ ರೂಂ ) ತೋಟ! ಸಾಲಾಗಿ ಮನೆ, ಸಾಲಾಗಿ ಬಚ್ಚಲು. ಊರಿಗೆ ಯಾರೇ ನೆಂಟರು ಬಂದರೂ ಮಧ್ಯಾಹ್ನ ಜಗುಲಿ ಮೇಲೆ ಕುಳಿತ್ಕತ್ತಿದ್ದರು. ಯಂತಕೆ ಹೇಳು? ಎಂಬ ಪ್ರಶ್ನೆಯನ್ನು ಮಧಣ್ಣ ಇಟ್ಟ. ಎಲ್ಲರ ಮುಖದಲ್ಲೂ ಕೊಶ್ಚನ್ ಮಾರ್ಕ್.
ಅಲ್ದಾ ಹೆಂಗಸರೂ ಸ್ನಾನಕ್ಕೆ ಹೋಪ ಟೈಮ್ ಅದೇ ಅಲ್ದನಾ' ಎಂದ. ಎಲ್ಲರೂ ಹೊಟ್ಟೆ ಹುಣ್ಣಾಗುವವರೆಗೆ ನಕ್ಕೆವು. ತೋಟದಲ್ಲಿ ಬಚ್ಚಲು ಇದ್ರೆ ಯಾರ್ಯಾರೂ ಹೆಂಗಸರು ಸ್ನಾನ ಮಾಡದು ನೋಡಿ ಮಜಾ ತಗತ್ವನ ಎಂಬ ಶರಾವನ್ನು ಬರೆದ.
ಹೀಗೆ ಕತೆ ಸಾಗುತ್ತಾ ಸಾಗುತ್ತಾ ಪುನಃ ಸಾಲದ ವಿಚಾರಕ್ಕೆ ಬಂದು ನಿಂತಿತು.
`ಸಾಲ' ಎಂಬುದು ಇಷ್ಟು ಭಯಾನಕವಾಗಿ ಕಾಡ ತೊಡಗಿದೆ ಎನ್ನುವುದು ಅರಿವಾದಾಗ ಬಹಳ ಬೇಸರವಾಯಿತು. ಆದ್ರೆ ಎನ್ಮಾಡೋದು ಸಾಲ ಮಾಡದೇ ಬದುವ ಮಂದಿ ಊರಿಗೆ ಒಬ್ಬರೋ.. ಇಬ್ಬರೋ.. ಅಷ್ಟೇ ಉಳಿದವರೆಲ್ಲ ಸಾಲದಲ್ಲೇ ಸಾಯ ಬೇಕಲ್ಲ.
ಸಾಲ... ಸಾಲ.. ಸದಾ ಹಸನ್ಮುಖಿಯಾಗಿ ಅನ್ನ ನೀಡುವ ರೈತನ ಊಟದ ಬಟ್ಟಲಿನಲ್ಲಿ ವಿಷ , ಹಗ್ಗ ಬಂದು ಕುಳಿತಿದೆ. ಅದನ್ನು ಬದಿಗಿಟ್ಟು ಅನ್ನವನ್ನೇ ನೀಡುವ ಕೆಲಸ ಆಗಬೇಕಿದೆ ಪರಿಹಾರವೇನು.

FEEDJIT Live Traffic Feed