Wednesday, December 28, 2011

ಬೆಂಗಳೂರಿಗೆ ವಿದಾಯ

ಬದಲಾವಣೆಯ ಸೆಳತಕ್ಕೆ ಸಿಗುವವರಲ್ಲಿ ನಾನು ಹೊರತಲ್ಲ. ಈ ಟಿವಿ ಅನ್ನದಾತ, ಉದಯವಾಣಿ, ಕನ್ನಡಪ್ರಭದಲ್ಲಿ ಉಪಸಂಪಾದಕನಾಗಿ ಮಾಡಿದ ಕೆಲಸ, ಅಲ್ಲಿನ ಅನುಭವ ಜೀವನವನ್ನು ಕಟ್ಟಿಕೊಡುತ್ತಿದೆ. ಈಗ ರಾಜಧಾನಿ ಬೆಂಗಳೂರಿಗೆ ವಿದಾಯ ಹೇಳುತ್ತಿದ್ದೇನೆ...ಹುಬ್ಬಳ್ಳಿಗೆ ಪಯಣ ಮಾಡುತ್ತಿದ್ದೇನೆ.....
------
ಯಾವ ಊರಿಂದ ಯಾರೇ ಬರಲಿ ತನ್ನ ಒಡಲಿನಲ್ಲಿ ಬಚ್ಚಿಟ್ಟು ಸಾಕುವ ಬೆಂಗಳೂರಿಗೆ ನನ್ನ ಮನಃ ಪೂವ೯ಕ ವಂದನೆ ಮತ್ತು ಧನ್ಯವಾದ.
ಇರಲಿ ಎಂದು ಒಂದು ಮೆಲಕು....
ಬರೆಯುವ ಹವ್ಯಾಸವಿತ್ತು. ಅಚಾನಕ್ಕಾಗಿ ಈ ಟಿವಿಯ ಅನ್ನದಾತ ವಿಭಾಗದಲ್ಲಿ ಕೆಲಸ ಮಾಡುವ ಅವಕಾಶ ಬಂತು. ಬಗಲಲ್ಲಿ ಜೋಳಿಗೆ ಬಾಯಲ್ಲಿ ಕವಳ ಹಾಕಿ ಏಳು ಜಿಲ್ಲೆಯ ಬೇಸಾಯ ಮಾಹಿತಿ ಹುಡುಕುವ ಕೆಲಸದಲ್ಲಿ ತೊಡಗಿದೆ. ಎರಡು ವಷ೯, ಅದ್ಭುತ ಅನುಭವ. ಈ ಸಂದಭ೯ದಲ್ಲಿ ರಾಧಣ್ಣ(ಭಡ್ತಿ), ರಾಜಣ್ಣ( ರಾಜಶೇಖರ ಹೆಗಡೆ ಜೋಗಿನ್ಮನೆ), ವೈ.ಗ. ಜಗದೀಶ್ ಪರಿಚಯವಾಯ್ತು, ಸ್ನೇಹ ಬೆಳೆಯಿತು. ಈ ಮೂವರು ಮುಖ್ಯವಾಹಿನಿಗೆ ಬಾ ಎನ್ನುವ ಆಗ್ರಹ ಪೂವ೯ಕ ಸಲಹೆ ನೀಡಿದರು. ಆ ಸಮಯದಲ್ಲಿ ವಿಕೆ ಗೆ ಹೋದರೆ ಕೆಲಸ ಸಿಗುತ್ತಿರಲಿಲ್ಲ. ಕಾರಣ ಎಲ್ಲಿ ಕೆಲಸ ಖಾಲಿ ಇರಲಿಲ್ಲ. ಉದಯವಾಣಿಯಲ್ಲಿ ತಗೊತಾ ಇದ್ದಾರೆ ಒಂದು ಅಜಿ೯ ಹಾಕು ಎನ್ನುವುದಾಗಿ ರಾಜಣ್ಣ ಒತ್ತಾಯಿಸಿದರು. ಹಾಕಿದೆ, ಆಗ ಅಲ್ಲಿ ಡಾ. ಆರ್. ಪೂಣಿ೯ಮಾ ಸಂಪಾದಕರಾಗಿದ್ದರು. ಕೆಲಸ ಕೊಟ್ಟರು. ಅಕ್ಷರಲೋಕ ಹ್ಯಾಗಿರುತ್ತದೆ ಎಂಬ ಕಲ್ಪನೆ ಇಲ್ಲದಿರುವ ನನಗೆ ಕೆಲ್ಸ ಕೊಟ್ಟವರು ಮೇಡಂ. ಕೆಲ್ಸ ಕಲಿಸಿದರು. ಪ್ರಾಥಮಿಕ ಶಾಲೆಯಲ್ಲಿ ಹೇಳಿಕೊಡುವಂತೆ ಹೇಳಿಕೊಟ್ಟರು. ಮೇಡಂ ಅಲ್ಲೊಂದು ವಿಷಯ ಇದೆಯಂತೆ ಎಂದರೆ ಸಾಕು, ಮತ್ಯಾಕೆ ತಡ ಮಾಡ್ತೀರಿ ಹೋಗಿ ಬನ್ನಿ, ಓಡಾಟದ ಖಚು೯ ಕೊಡುತ್ತಿದ್ದರು. ಸಿನೇಮಾ ವರದಿ ಮಾಡಲು ಕಳುಹಿಸಿದರು. ಬರೆದ ಕಾಪಿ ತಿದ್ದಿದರು. ಎಲ್ಲ ತರಹದ ಕೆಲಸ ಕಲಿಸಿದರು. ಅಲ್ಲಿ ಮುಖ್ಯಸ್ಥರಾಗಿದ್ದ ಪ್ರಭುದೇವ್ ಶಾಸ್ತ್ರೀಮಠ, ಇಸ್ಮಾಯಲ್, ರಾಜಣ್ಣ, ಸಹೋದ್ಯೋಗಿಗಳಾದ ಮಲ್ಲಿಕಾಚರಣ್ ವಾಡಿ, ಗುರುಮೂತಿ೯, ರುದ್ರಣ್ಣ, ಕಂಕ ಮೂತಿ೯, ಎಚ್. ಮೂತಿ೯, ಪರಮೇಶ್ವರ್ ಗುಂಡ್ಕಲ್, ಸುರೇಶ್.ಕೆ, ರಾಜಶೇಖರಮೂತಿ೯, ಧರಣೀಶ್ ಬೂಕನಕೆರೆ, ವೀರೇಶ್ , ಮಣಿಪಾಲದಲ್ಲಿದ್ದ (ಈಗ ಹುಬ್ಬಳ್ಳಿ) ವೆಂಕಟೇಶ್ ಪ್ರಭು.....ತುಂಬಾ ಜನರಿದ್ದಾರೆ ಇವರೆಲ್ಲರಿಂದಲೂ ಕಲಿತೆ. ನನಗೆ ಗೊತ್ತಿಲ್ಲದ್ದನ್ನು ಕೇಳಿದೆ ಹೇಳಿಕೊಟ್ಟರು. ಉದಯವಾಣಿ ನನ್ನ ಪಾಲಿಗೆ ಒಂದು ರೀತಿ ಪ್ರಾಥಮಿಕ ಶಾಲೆ ತರಹ ಆಗಿತ್ತು. ಇಲ್ಲಿನ ಪ್ರತಿಯೊಂದು ವಿಭಾಗದವರು ಉತ್ತಮ ದೋಸ್ತಿಗಳಾಗಿದ್ದರು.
ಯಾವುದೋ ಸಂದಭ೯ ಬದಲಾವಣೆಗೆ ಅವಕಾಶ ಬಂತು ಕನ್ನಡಪ್ರಭಕ್ಕೆ ಸೇರಿದೆ. ಕನ್ನಡಪ್ರಭದಿಂದ ನಾನು ತುಂಬಾ ಕಲಿತೆ. ತುಂಬಾ ಬರೆದೆ. ಅಂದಿನ ಸಂಪಾದಕ ಶಿವಸುಬ್ರಹ್ಮಣ್ಯ ನನಗೆ ತುಂಬಾ ಅವಕಾಶ ಕಲ್ಪಸಿಕೊಟ್ಟರು. ಬರೆಸಿದರು..ನಾನು ಬರೆದೆ. ಮುಖಬೆಲೆ ತಂದು ಕೊಟ್ಟರು. ಎಲ್ಲಾ ತರಹದ ಕೆಲಸವನ್ನು ಮಾಡಿಸಿದರು. ಗೆಳೆಯರಾದ ರಾಮಚಂದ್ರ, ಅಜಿತ್, ಸದಾಶಿವ, ಸಿ.ಜೆ ಸೋಮಶೇಖರ್ ಸಹಕರಿಸಿದರು. ನನ್ನ ಬರವಣಿಗೆಯನ್ನು ತಿದ್ದಿದ್ದರು. ಇದು ಒಂದು ಕಡೆಯಾದರೆ ಮ್ಯಾಗಜಿನ್ ವಿಭಾಗದಲ್ಲಿದ್ದ ಡಾ. ವೆಂಕಟೇಶ್ ರಾವ್, ಚೇತನಾ ತೀಥ೯ಹಳ್ಳಿ ಅವರು ಬರಿ ಎಂದು ಬರೆಸಿದರು. ಕನ್ನಡಪ್ರಭದಲ್ಲಿ ಮತ್ತೊಮ್ಮೆ ಬದಲಾವಣೆಯಾಯಿತು. ವಿಶ್ವೇಶ್ವರ ಭಟ್ಟರು ಪ್ರಧಾನ ಸಂಪಾದಕರಾದರು. ನನ್ನ ಬರವಣಿಗೆ ಮೊದಲಿನಂತೆ ಸಾಗಿತು. ತ್ಯಾಗರಾಜ್, ರಾಧಾಕೖಷ್ಣ ಭಡ್ತಿ ನನ್ನ ಬರವಣಿಗೆಗೆ ಸಹಕರಿಸಿದರು. ಕೖಷಿಪ್ರಭದಲ್ಲಿ ನನಗೊಂದು ಅಂಕಣ ಬರೆಯಲು ಅವಕಾಶ ನೀಡಿದರು.
ಕನ್ನಡಪ್ರಭ ನನಗೆ ತುಂಬ ಕೆಲಸ ಕಲಿಸಿತು..ಇಲ್ಲಿ ತುಂಬಾ ಜನ ಗೆಳೆಯರಾದರು.ಹಿತೈಷಿಗಳಾದರು, ಸಲಹೆ ನೀಡಿದರು, ಬೈದರು, ಹೀಗಲ್ಲ ಹಾಗೇ ಎಂದರು, ಬೆನ್ನು ತಟ್ಟದರು..ಡಾ. ವಾಸುದೇವ ಶೆಟ್ಟಿ, ನಟರಾಜ್, ರೇಣುಕಾಪ್ರಸಾದ್ ಹಾಡ್ಯ,ರವಿಮಾಳೇನಳ್ಳಿ, ಗಿರೀಶ್ ಬಾಬು, ವಿಜಯಮಲಗಿಹಾಳ, ಸುಧಾಕರ್ ದಬೆ೯, ಸಂತೋಷ್ ಸಸಿಹಿತ್ಲು, ಪ್ರವೀಣ್, ಎಸ್. ವಿ. ಪದ್ಮನಾಭ, ಗಣೇಶಪ್ರಸಾದ್, ಬ್ರಹ್ಮಾನಂದ, ಕೀತಿ೯ಕೋಲ್ಗಾರ್, ಸಾಅದೀಯಾ, ಚಿತ್ರ, ಅನುರಾಧಾ, ಮೂಲಿಮನಿ, ಡಿ. ಎಂ. ಭಟ್, ಶಿವಮಾದು, ದೇವರಾಜ್, ಪ್ರಕಾಶ್, ಕೆ.ವಿ. ಪ್ರಭಾಕರ್, ರಾಘವೇಂದ್ರಭಟ್, ಪ್ರತಾಪ್, ಚೈತನ್ಯ....ತುಂಬ ಜನರಿದ್ದಾರೆ. ಎಲ್ಲರೂ ಪ್ರೀತಿಯಿಂದ ಮಾತಾಡಿದರು ಪ್ರೀತಿಯಿಂದ ಕೆಲಸ ಕಲಿಸಿದರು...
ಸೋಮಶೇಖರ್ ಪಡುಕರೆ, ಗಣಪತಿ ಅಗ್ನಿಹೋತ್ರಿ, ಉಗಮ, ಅಂಶಿ ಪ್ರಸನ್ನಕುಮಾರ್ ನನ್ನ ಲೇಖನ ಬಂದಾಗ ಮೆಚ್ಚಿ ಬೆನ್ನು ತಟ್ಟಿದರು.
ಬೆಂಗಳೂರು ಬದುಕಿನಲ್ಲಿ ಬಂದ ಎಲ್ಲರು ಕೊನೆಯವರೆಗೂ ನನ್ನೊಳಗೆ ಇರುತ್ತಾರೆ. ಉದಯವಾಣಿ, ಕನ್ನಡಪ್ರಭದ ಎಲ್ಲ ಸಿಬ್ಬಂದಿಗೂ ನಾನು ವಂದನೆಗಳು. ಪ್ರೀತಿ ಇರಲಿ.

Sunday, December 18, 2011

ಶಾಲೆ ಲಹರಿ

ಎಂತನಪ್ಪಾ ಈಗಿನ ಹುಡ್ಗ್ರು!? ಚಳಿ ಬಿಳಲಿಲ್ಲೇ ಜ್ವರ. ಬೇಸಿಗೆ ಬಿದ್ದರೆ ಉಷ್ಣ ಹೇಳಿ ಡಾಕ್ಟ್ರ ಮನೆಗೆ.ಅವ್ರಿಗೆ ದುಡ್ಡು. ಎಂತಾ ಮಾಡಲೆ ಬತ್ತು ಈಗಿನವು ಹುಟ್ಟುದೇ ಔಷಧಿಂದ. ಯಂಗವೆಲ್ಲ ಹತ್ತು ಮಕ್ಳು ಹೆತ್ತರು ಔಷಧಿಗೆ ಒಂದಿನ ಡಾಕ್ಟ್ರ ಮನೆ ಬಾಗಿಲಿಗೆ ಹೋಜ್ವಿಲ್ಲೆ. ಈಗ ಹೆರದೆ ಒಂದೆರಡು ಮಕ್ಳು ಮೂವತ್ತು ಹಡದರಾಂಗೆ ತ್ರಾಸ ಪಡ್ತ್ವಪ್ಪ. ಅವಾಗಲೆಲ್ಲ ಶಾಲೆಗೆ ಹೋದಾಗ ಐದನೇತ್ತಿ ಆರನೇತ್ತಿ ಸಕಾ೯ರಿ ದಾದ್ಯಕ್ಕ ಒಂದು ಮೈಲಿ ಹಾಕಿಕ್ಕೆ ಹೋಪದ್ದು ಬಿಟ್ರೆ ಮತ್ಯಂತದೆ ಔಷಧಿನೆ ಇಲ್ಲೇ ,ಎಲ್ಲರೂ ಬದ್ಕಿದ,ಎಲ್ಲಾರೂ ಗಟ್ಟು ಮುಟ್ಟಾಗಿದ್ದ... ಎಂಬುದಾಗಿ ತೊಂಬತ್ತ್ನಾಲ್ಕು ನೌಟಟ್. ಅಮ್ಮಮ್ಮ ಹೇಳುತ್ತಿರುವಾಗ ಅಲ್ಲಲ್ಲ.......... ವಟಗುಟ್ಟುತ್ತಿರುವಾಗ, ವಯಸ್ಸಾದ ಪ್ರಾಯದವರು ಹೇಳಿದ ಮಾತು ನೂರಕ್ಕೆ ನೂರಾ ಎರಡು ಸತ್ಯ. ಎನ್ನುವುದರಲ್ಲಿ ಎರಡು ಮಾತಿಲ್ಲ. ಯಾಕೆಂದ್ರೆ ಹಿಂದಿನವರು ಬಹಳ ಗಟ್ಟಿ. ಓಲ್ಡ್ ಮಾಡೆಲ್ ನ್ಯಾಷನಲ್ ಇಂಜಿನ್ ಇದ್ಹಾಂಗೆ ಪವರ್ ಫುಲ್. ಒಂದು ಡಜನ್ ಒಂದುವರೆ ಡಜನ್. ಎರಡು ಡಜನ್ ಮಕ್ಕಳನ್ನು ಹೆತ್ತರು. (ಹಿಂದಿನವರಲ್ಲಿ ಕೆಲವರಿಗೆ ಹಿರಿಯ ಮಗನ ಮಗ ಅವ್ನಿಗೆ ಮದುವೆಯಾಗಿ ಮಕ್ಳು ಹುಟ್ಟಿದ ಎರಡು ವರ್ಷವಾದಾಗ ಮುತ್ತಜ್ಜಿಯ ಕೊನೆ ಮಗ ಹುಟ್ಟಿದ ಪ್ರಸಂಗವು ಇದೆ-ಎಂಬುದಾಗಿ ನಮ್ಮಜ್ಜಿಯ ಹೇಳಿಕೆ) ಒಂದು ಚೂರು ಝಳುಕುತ್ತಿರಲಿಲ್ಲ. ಉದಾಹರಣೆಗೆ ನನ್ನಜ್ಜಿ. ಹತ್ತು ಮಕ್ಕಳು ಆದ್ರು ಇನ್ನು ಗಟ್ಟಿ. ಕೊಟ್ಟಿಗಿಗೆ ಹೋಗಿ ಸೆಗಣಿ ಕರಡುತ್ತಾಳೆ. ಕಣ್ಣೆದುರಿಗೆ ಕಾಣುವ ಸತ್ಯ.
ಹೌದ್ರಿ ನಮ್ಮ ಕಾಲ ಅಂದರೆ ನಾವು ಹುಟ್ಟಿರುವ ಕಾಲಘಟ್ಟ, ತೀರಾ ಇತ್ತೀಚೆಗೆ, ಕೇವಲ ಕ್ವಾಟರ್ ಶತಮಾನದ ಹಿಂದೆ. ಆಗಲೇ ಔಷಧಿ, ಟಾನಿಕ್ ಎಂಬುದೆಲ್ಲ ಪ್ರಾರಂಭವಾಗಿ ಬಿಟ್ಟಿತ್ತು. ನನ್ನ ಈಗಿನ ಲಡ್ಡಾದ ಹಾಗೂ ಕೃಷ ಆರೋಗ್ಯದ ದಷ್ಟ ಪುಷ್ಟತೆಗೆ ಅಂದಿನ ಅಂದರೆ ನಾನು ಗಭಾ೯ವಸ್ಥೆಯಲ್ಲಿರುವಾಗ ನನ್ನ ಹಡೆದವ್ವ ತೆಗೆದುಕೊಂಡಿರುವ ಟಾನಿಕ್, ಕ್ಯಾಲ್ಸಿಯಂ ಇತರೆ........ ಇತರೇ ..........ಔಷಧಿಗಳು ಕಾರಣ ಎಂಬುದರಲ್ಲಿ ದೂಸಾ೯ ಮಾತಿಲ್ಲ. ನನ್ನ ಜನ್ಮಸ್ಥಳ ಆಸ್ಪತ್ರೆಯಾದರೆ, ನನ್ನಕ್ಕಂದು ಮನೆಯ ಮಧ್ಯಭಾಗ ಮಾಳಿಗೆಯೊಳಗಾಗಿತ್ತು. ಅಕ್ಕ ತಕ್ಕ ಮಟ್ಟಿಗೆ ಗಟ್ಟಿ. ಹ್ಲಾಂ ಅಕ್ಕನ ಸುದ್ದಿ ಬಂದಾಗ ನೆನಪು ಹಿಂದಕ್ಕೆ ಓಡುತ್ತೆ. ಅದೇ ಪುನ: ಪ್ರೈಮರಿ ಸ್ಕೂಲಿಗೆ.
ಆಗ ಹೇಳಿದ್ನಲ್ಲ, ಅಮ್ಮಮ್ಮ, ಅವಳು ಅಂದಿದ್ಲಲ್ಲ ಅದೇ ಮೈಲಿಗೆ ಚುಚ್ಚುವುದು. ಆ ಪ್ರಕರಣ ಒಂದು ನೆನಪಾಗುತ್ತದೆ. ನನಗೆ ಕರೆಕ್ಟ ನೆನಪಿದೆ. ನಾನು ಒಂದನೇ ಇಯತ್ತೆನೋ ಎರಡನೇ ಇಯತ್ತೆನೋ ಆಗಿರಬೇಕು ಎಂದು ಡೌಟು, ಏನೆ ಆದ್ರು ನೆನಪು ಸತ್ಯ. ಘಟನೆ ವಿಷಯದಲ್ಲಿ ದೋಖಾ ಇಲ್ಲ.
ಆ ಸಮಯದಲ್ಲಿ ಶಾಲೆಗಳಿಗೆ ಮೈಲಿ ಚುಚ್ಚಲಿಕ್ಕಾಗಿ ಅಂದ್ರ ಲಸಿಕೆ ನೀಡಲಿಕ್ಕಾಗಿ ಗೌರ್ನಮೆಂಟ್ ನಿಯೋಜಿತರು ಬರುತ್ತಿದ್ದರು. ಅವರು ಬರುತ್ತಾರೆ ಎಂದ ಕೂಡಲೇ ಶಾಲೆಯಲ್ಲಿ ಒಮ್ಮೆಲೆ ಅನಾರೋಗ್ಯಕರ ವಾತಾವರಣ ಸೃಷ್ಠಿಯಾಗಿ ಬಿಡುತ್ತಿತ್ತು. ಬಹಳಷ್ಟು ಮಕ್ಕಳಿಗೆ ಡಿಸೆಂಟ್ರಿ ಸುರುವಾದರೆ, ಕೆಲವರಿಗೆ ನಡುಕ.....ಜ್ವರ, ಅನೇಕರಿಗೆ ಏನಾಗಿದೆ ಅಂತ ಗೊತ್ತಾಗದ ರೋಗ, ಒಟ್ಟಾರೆ ಆರಾಮಿಲ್ಲ. ಈ ಚುಚ್ಚುಮದ್ದು ಕೊಡುವವರನ್ನು ಕಂಡರೆ ಒಂಥರಾ ಭಯೋತ್ಪಾದಕರ ಸಂತನದವರು ಎಂದು ಅನಿಸಿತ್ತಿದ್ದದ್ದು ಖರೇ. ಇಂತಿಪ್ಪ ಟೈಮಲ್ಲಿ ನಾ ಸಣ್ಣಂವ. ಅಕ್ಕಂದಿರು ಅವರು ಅಕ್ಕಂದಿರು ಐ ಮಿನ್ ದೊಡ್ಡವರು. ಲಸಿಕೆ ಹಾಕಲಿಕ್ಕೆ ಬಂದಾಗ ನಮಗೆ ರಜೆ. ನಾಲ್ಕನೇ ಇಯತ್ತೆ ಮೇಲ್ಪಟ್ಟವರಿಗೆ ಸೂಜಿ ಚಿಕಿತ್ಸೆ ಅಂದ್ರೆ ಮೈಲಿಗೆ ಚುಚ್ಚುವ ಕಾರ್ಯಕ್ರಮ.
ಕೈಯಲ್ಲಿ ಕಪ್ಪು ಬಣ್ಣದ ಗುಡಾಣದಂತಹ ಬ್ಯಾಗನ್ನು ಹಿಡಿದು, ಬಿಳಿಯ ಸೀರೆ, ಅದೇ ಬಣ್ಣದ ಜಂಪರ್ ತೊಟ್ಟು, ಕೃಷ್ಣ ವರ್ಣದ ಎರಡು ಹೆಂಗಸರು ಬರುತ್ತಿದ್ದರೆ 'ರಾಮಾಯಣದ' ಶೂರ್ಪನಖಿಯ ದ್ವಿಪಾತ್ರ ನೆನಪಾಗುತ್ತಿತ್ತು. ಭಟ್ಟರಕೇರಿ ಸುಬ್ರಾಯ, ಮೇವಿನ ಹಕ್ಲು ಮಂಜುನಾಯ್ಕ, ಬೆಣ್ಣೆಗುಡ್ಡೆ ನಾಗರಾಜ ಶೆಟ್ಟಿ, ಕಕ್ತಳ್ಳಿ ಕೇಶವ ಗೌಡ, ಬೈನೆಕೊಡ್ಲು ತಿಮ್ಮಪ್ಪ ದೇವಾಡಿಗ ದಾದಿಯಮ್ಮಂದಿರನ್ನು ಕಾಣುತ್ತಲೆ ಗುರುಜಿಗೆ ಎಣ್ಣೆಹಾಕಿ ಗುಡ್ಡಹತ್ತಿ ಓಡಿದ್ದರು.
ಐದು ಮಂದಿ ನಮ್ಮ ಶಾಲೆ ಡಾನ್ಗಳು ಎನ್ನಬಹುದು. ಇವರಿಗೆ ಏಳನೇ ಇಯತ್ತೆಗೆ ಮೀಸೆ ಬಂದಿತ್ತು. ಇವರು ಐದನೇ ಇಯತ್ತೆಯಲ್ಲಿ ಒಂದನೇ ವರ್ಷ, ಎರಡನೇ ವರ್ಷ ಪೂರೈಸಿ, ಆರನೇ ತರಗತಿಯಲ್ಲಿ ಪಸ್ಟಯಿಯರ್, ಮುಗಿಸಿ ಥಡ್೯ಯಿಯರ್ ಮಾಡುವ ಆಲೋಚನೆಯಲ್ಲಿರುವಾಗ ಗುರುಜಿ ಎಳನೇತ್ತಿ ಹೋಗಿ ಸಾಯ್ರಿ. ಮದ್ವೆಯಾಗುವಾಗಿ ಹೆಣ್ಣಿನ ಮನೆಯಲ್ಲಿ ಏಳನೇ ಕ್ಲಾಸು ವರೆಗೆ ಹೋಗಿದ್ದೆ ಎಂದು ಹೇಳಲಿಕ್ಕಾದರು ಆಗುತ್ತೆ. ಕತ್ತೆಗೆ ಹೋದಾಂಗ್ಹೆ ವರ್ಷ ಹೋಯ್ದು. ಪ್ರಾರಬ್ದ್ದಗಳು ಎನ್ನುತ್ತ ಸ್ವಂತ ರಿಸ್ಕಿನ ಮೇಲೆ ಎಳನೇ ತರಗತಿ ತೇರ್ಗಡೆ ಮಾಡಿದ್ದರು, ಅಲ್ಲ......... ದೂಡಿದ್ದರು. ಇವರನ್ನು ಬೇಗನೆ ಶಾಲೆಯಿಂದ ಹೊರಗೆ ಹಾಕಬೇಕು. ತಾವಾಗಿಯೇ ಪಾಸಾಗಿ ಹೋಗುವುದಿಲ್ಲ. ಅದಕ್ಕಾಗಿ ನಾನೇ ಪಾಸು ಮಾಡಿ ಕಳಿಸುವ ಎನ್ನುವಷ್ಟು ವಿಶಾಲ ಹೃದಯ ನಮ್ಮ ಮಾಸ್ಟ್ರದ್ದಾಗಿತ್ತು.
ಅಂದ್ಹಾಗೆ, ಬಂದ ದಾದಿಯಮ್ಮಂದಿರು 'ಮಾಸ್ಟ್ರೇ ಎಲ್ಲಾ ಹುಡ್ಗರನ್ನು ಕರೆಯಿರಿ. ನಮಗೆ ಇಲ್ಲಿ ಮುಗಿಸಿ, ಹುತ್ಗಾರು ಶಾಲೆಗೆ ಹೋಗಬೇಕು ಎಂಬುದಾಗಿ ತಮ್ಮ ಹೇಳಿಕೆಯನ್ನು ಓಗೆದರು. ಗುರುಜಿ ಎಕದಂ ಅಲಟರ್್ ಆಗಿ ಸಾಯಿಲೆ ವರ್ಷಕ್ಕೊಂದು ದಿನ ಬಂದು ಬರೋದು ಗಡಿಬಿಡಿ ಮಾಡದು, ಕರ್ಮಕ್ಕೆ. ಈ ಕತ್ತೆಯಂತ ಮಕ್ಳಗೆ ಮೈಲಿ ಲಸಿಕೆನಂತೆ ಇವರ ಕರ್ಮಕ್ಕೆ. ಮನೆಲಿ ಸಮ ತಿಂತರಾ, ಉಣ್ಣುತ್ತಾರೆ. ದನ ತಿಂದ ಹಾಗೇ ತಿಂತಾರೆ. ದೆವ್ವದಂಗೆ ಇದ್ದಾರೆ ಎಂದು ಒಳ ಬಾಯಲ್ಲೆ ಹಲುಬುತ್ತ ಎಲ್ಲಾ ಮಕ್ಕಳು ಸಾಲಲ್ಲಿ ಬನ್ನಿ. ಎಲ್ಲರು ಬನ್ನಿ........ ಬನ್ನಿ ಎನ್ನುತ್ತಿರುವಾಗಲೇ ಪಂಚ ಕಮಂಗಿಗಳು ಕಾಣದೇ ಕಂಗಾಲಾಗಿ 'ಎಲ್ಲೋದ್ರು ಆದ ದರಿದ್ರದವು, ಸತ್ತೋಪಲೆ, ಯಾವ ಸುಡಗಾಡಿಗೆ ಹೋಗಿದ್ದಾರೆ ನೋ ಎನ್ನುತ್ತ ಕೆಂಡ ಮಂಡಲವಾಗಿ ಶಾಲೆಯ ಜಡಿತಟ್ಟಿಯ ಸಂದಿಗೆ ಹೋಗಿ '30' ಮಾಕರ್ಿನ ಬೀಡಿಗೆ ಬೆಂಕಿ ಹಚ್ಚಿ ಸುಡತೊಡಗಿದರು. ಇದೇ ಸಂದರ್ಭವನ್ನು ನೋಡಿ ಎರಡು ಹೆಣ್ಣು ಮಕ್ಕಳು ಶಾಲೆಯಿಂದ ಕಾಲ್ಕ್ಕಿತ್ತಿದ್ದರು.
ಅಲ್ಲಿಂದ ಕಾಲ್ಕಿತ್ತವರು ಮತ್ತಾರು ಅಲ್ಲ ನನ್ನ ಅಕ್ಕ ಮತ್ತು ಪಕ್ಕದ್ಮನೆ ಸುಮಂಗಲಕ್ಕ. ಇವರು ಶಾಲೆಯಿಂದ ನೇರವಾಗಿ ಮನೆಗೆ ಬಂದು ನನ್ನನ್ನು ಹುಡುಕ ತೊಡಗಿದರು. ನಾನು ದೊಡ್ಡಪನ್ಪ ಹಂತೆಯೊಳಗೆ ಉಪ್ಪರಿಗೆಯ ಮೇಲೆ ಇದ್ದೆ. ಅವರು ಲೆಕ್ಕ ಬರೆಯುತ್ತಿದ್ದರು. ಅಕ್ಕನಿಗೆ ಒಂದೇ ಆಲೋಚನೆ 'ನನಗಂತು ಚುಚ್ಚುತ್ತಾರೆ ಜೊತೆಯಲ್ಲಿ ಇವನಿಗೆ ಆ ಶಿಕ್ಷೆಯಾಗಲಿ' ಎಂದು ದೊಡ್ಡಪ್ಪ ಮೈಲಿ ಚುಚ್ಚೋರು ಬಂಜ. ತಮ್ಮನ್ನು ಕರಕಂಡು ಹೋಪಲೆ ಬಂಜಿ ಕಳಸು ಅವ್ನ ಎಂದು ಎಣಿ ಮೆಟ್ಟಿಲ ಮೇಲೆ ನಿಂತ್ಕೊಂಡು, ತಾನು ಬಂದ ಕಾರಣವನ್ನು ದೊಡ್ಡಪ್ಪ ಪ್ರಶ್ನೆ ಕೇಳುವುದರೊಳಗೆ ಹೇಳಿದಳು. ನಿನ್ನೆ ಯಷ್ಟೆ ಅವರಿಗೆ ನಿನ್ನ ಆಯಿ ಕರಕಂಡು ಹೋಗಿ ಇಂಜೆಕ್ಷನ್ ಹಾಕ್ಯಬಂಜು. ನೀ ಶಾಲೆಗೆ ವಾಪಾಸ್ ನಡಿ ಎಂದು ಜೋರಾಗಿಯೇ ಹೇಳಿದರು. ಅಕ್ಕ ಸುಮಂಗಲಾಕ್ಕ ಜೋಲುಮೋರೆ ಹಾಕಿಕೊಂಡು ನನ್ನ ಕಡೇ ಸಿಟ್ಟಿನ ದೃಷ್ಟಿ ಸಿಟ್ಟು ಶಾಲೆಗೆ ಹೊರಟರು.
ಅತ್ತ ಶಾಲೆಯಲ್ಲಿ ಇವರು ಹೋಗುವ ಸಮಯಕ್ಕೆ ನಾಲ್ಕೈದೆ ಜನರಿದ್ದರು. ಇವರೇ ಕೊನೆಯವರಾಗಿ ಚುಚ್ಚಿಸಿಕೊಂಡರು. ಮನೆಗೆ ಬಮದ ಅಕ್ಕ ನಾಲ್ಕು ಹೊಡೆತವನ್ನು ಮೊದಲು ನನಗೆ ಇಕ್ಕಿದಳು. ಚುಚ್ಚಿಸಿಕೊಂಡ ನೋವು ಕಡಿಮೆ ಮಾಡಿಕೊಂಡಳು. 'ತಾನು ಅಂದ್ಕೊಂಡಿರದು ಆಗೋದು ಕಷ್ಟ; ತನಗೆ ಬಂದ ಕಷ್ಟವನ್ನು ಮತ್ತೊಬ್ಬರ ಮೇಲೆ ಹೆರಲಿಕ್ಕೆ ಹೋದರೆ ತನಗೆ ಕಷ್ಟ' ಎಂಬ ಮಾತು ಹಿರಿಯರದ್ದು, ಅದು ಸತ್ಯ.
ಈಗ ಕಾಲ ಬದಲಾಗಿದೆ. ಮೈಲಿ ಚುಚ್ಚೋದು, ಹೋಗಲಿ ದಾದಿಯಮ್ಮಂದಿರನ್ನೆ ಇಂದಿನ ಮಕ್ಕಳು ನೋಡಲಿಲ್ಲ. ಶಾಲೆಗೆ ಬಂದು ಲಸಿಕೆ ಹಾಕುವ ಕಾಲ ಕಳೆದು ಹದಿನೈದು ವರ್ಷಗಳೇ ಕಳೆದು ಹೋಗಿದೆ .ಇಂದಿನವರು ನಾವು ಅನುಭವಿಸಿದ ಅರ್ಧ ಮಜಾವನ್ನು ಶಾಲಾಜೀವನದಲ್ಲಿ ಪಡೆಯುವುದಿಲ್ಲ ಎಂಬುದೊಂದೆ ಬೇಜಾರು. ಯಾವಾಗಲೂ ಈ ಮೈಲಿಯ ನೆನಪು ಉಳಿಯುವಂತಾಗಿದೆ. ಎಡಗೈ ತೋಳು ನೋಡಿದಾಗ ಮೈಲಿ ಮರೆತರು ನೆನಪಾಗುತ್ತದೆ. ಇರುವ ಮೈಲಿ ಚುಚ್ಚಿದ ಗುರತನ್ನು ಯಾ ಕಲೆಯನ್ನು ಕಂಡು.

FEEDJIT Live Traffic Feed