Monday, July 4, 2011

ಎಂಡೋ ನಿಷೇಧ: ಆದೇಶ, ಅಧ್ಯಯನ, ಆಪೋಶನ

<span title="Click to correct" class="transl_class" id="1">ಎಂಡೋ</span> <span title="Click to correct" class="transl_class" id="2">ನಿಷೇಧ</span>

ಕರ್ನಾಟಕದ ಎಂಡೋ ಪೀಡಿತ ಪ್ರದೇಶ ಕೊಕ್ಕಡದ ಮಹಿಳೆ ಸುಂದರಿ ಎಂಬುವವಳು ಇತ್ತೀಚೆಗೆ ಕ್ಯಾನ್ಸರ್್ನಿಂದ ಮೃತ ಪಟ್ಟರು. ಇವರ ಸಾವಿಗೆ ಎಂಡೋಸಲ್ಫಾನ್ ಸಿಂಪರಣೆಯ ದೂರಗಾಮಿ ಪರಿಣಾಮವೇ ಕಾರಣ ಎನ್ನುವುದು ಊರಿನವರ ಅಂಬೋಣ. ಅಸಹಜ ರೀತಿಯಲ್ಲಿ ಇಲ್ಲಿ ಮೃತಪಟ್ಟವರಲ್ಲಿ ಇವರೇ ಮೊದಲಿಗರಲ್ಲ. ಇದಕ್ಕೂ ಮುನ್ನ ಬಹಳಷ್ಟು ಜನರು ಇಹಲೋಕ ಯಾತ್ರೆ ಮಾಡಿದ್ದಾರೆ. ಕ್ಯಾನ್ಸರ್, ದೀರ್ಘಕಾಲಿಕ ಅಂಗವೈಕಲ್ಯ ಹೊಂದಿದವರು, ಮಾನಸಿಕ ಸ್ಥಿಮಿತ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡವರೂ ಇವರಲ್ಲಿ ಸೇರಿದ್ದಾರೆ. ನಿರಂತರ 18 ವರ್ಷಗಳ ಕಾಲ ಈ ಭಾಗದಲ್ಲಿ ಎಂಡೋಸಲ್ಫಾನನ್ನು ಸಿಂಪರಣೆ ಮಾಡಿರುವುದೇ ಇದಕ್ಕೆಲ್ಲ ಕಾರಣ .

ಆದರೂ ನಮ್ಮ ರಾಜ್ಯದ ಕೃಷಿ ಇಲಾಖೆಯ ಕೆಲವು ಅಧಿಕಾರಿಗಳಿಗೆ ಎಂಡೋ ಕೀಟನಾಶಕವೇ ಕೃಷಿಯಲ್ಲಿನ ಸರ್ವ ರೋಗಕ್ಕೆ ಮದ್ದು. ಜೂನ್ ಮೊದಲವಾರ ದೆಹಲಿಯಲ್ಲಿ ನಡೆದ ಸಭೆಯ ವಿದ್ಯಮಾನ ಇದಕ್ಕೆ ಪುಷ್ಠಿ ನೀಡುತ್ತದೆ. ಕೇಂದ್ರ ಸರ್ಕಾರದ ಕೃಷಿ ಇಲಾಖೆ"ಎಂಡೋಸಲ್ಫಾನ್್ಗೆ ಬದಲಿ ವ್ಯವಸ್ಥೆ ಏನು?' ಎಂಬ ವಿಚಾರವಾಗಿ ಚರ್ಚಿಸಲು ಎಲ್ಲಾ ರಾಜ್ಯದ ಕೃಷಿ ಇಲಾಖೆ ಮುಖ್ಯಸ್ಥರನ್ನು ಆಹ್ವಾನಿಸಿತ್ತು. ಕರ್ನಾಟಕದಿಂದ ಭಾಗವಹಿಸಿದ್ದ ಇಲಾಖೆಯ ವ್ಯಕ್ತಿ" ನಮಗೆ ಎಂಡೋಸಲ್ಫಾನ್ ಬೇಕು' ಎಂಬ ಸಲಹೆ ನೀಡಿದರು. ವಿಪರ್ಯಾಸ ಅಂದರೆ ಇದೇ ಅಲ್ಲವೇ."ಬಹಳ ಆಸ್ಥೆ'ಯಿಂದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಎಂಡೋಗೆ ನಿಷೇಧ ಹೇರಿದ್ದಾರೆ. ಅಂಥದರಲ್ಲಿ ಸರ್ಕಾರಕ್ಕೆ ಬೇಡವಾದದ್ದು ಇಲಾಖೆಗೆ ಬೇಕಾಗಿದೆ.

ಅದೇ ಸಭೆಯಲ್ಲಿ ಎಲ್ಲಾ ರಾಜ್ಯದವರು ಎಂಡೋ ಪರ ಮಾತಾಡಿದರೆ ಕೇರಳ ಮಾತ್ರ ವಿರೋಧಿಸಿತು. ಕೇರಳದಷ್ಟೇ ಸಮಸ್ಯೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕುಗಳಲ್ಲೂ ಇದೆ. ಈ ಎಂಡೋ ಪೀಡಿತ ಪ್ರದೇಶಕ್ಕೆ ಖಂಡಿತ ದೆಹಲಿಯಲ್ಲಿ ಭಾಗವಹಿಸಿದ ಇಲಾಖೆ ಪ್ರತಿನಿಧಿ ಹೋಗಿರಲಿಕ್ಕಿಲ್ಲ. ಆಕಸ್ಮಾತ್ ಹೋಗಿದ್ದರೆ"ನಮಗೆ ಎಂಡೋ ಬೇಕು' ಎನ್ನುತ್ತಿರಲಿಲ್ಲ.

ಅಲ್ಲದೇ, ಕರ್ನಾಟಕದಲ್ಲಿ ಮಾರ್ಚ್್ನಲ್ಲೇ ಎಂಡೋಗೆ ನಿಷೇಧ ಹೇರಿದ್ದರೂ ರಾಜ್ಯ ಸರ್ಕಾರದ ಪ್ರತಿನಿಧಿಯಾಗಿರುವ ಇಲಾಖಾ ಅಧಿಕಾರಿ ಇಲ್ಲಿನ ನಿಲವನ್ನು ಮರೆತರೇ? ಈ ಸರ್ಕಾರ ಇರುವುದು ಐದೇ ವರ್ಷ, ಇವರೇನು ಮಾಡಿಯಾರು ಎಂದು ನಿರ್ಲಕ್ಷ್ಯ ಮಾಡಿದರೇ? ಅಥವಾ ಕಂಪನಿ ಜೊತೆ ಕೈ ಜೋಡಿಸಿದರೇ? ಕ್ಯಾಬಿನೆಟ್್ನಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ಬೆಲೆ ಇಲ್ಲವೇ?

ಇನ್ನು ಸರ್ಕಾರ ಎಂಡೋ ವಿಷವನ್ನು ಎರಡು ತಿಂಗಳ ಮಟ್ಟಿಗೆ ಬ್ಯಾನ್ ಮಾಡಿ, ನಂತರ ಮತ್ತೆರಡು ತಿಂಗಳು ಮುಂದುವರಿಸಿತು. ಈ ಬ್ಯಾನ್ ಎನ್ನುವುದು ಕಡತದಲ್ಲೇ ಇರುವಂತೆ ಕಾಣುತ್ತದೆ. ಯಾಕೆಂದರೆ ಯಾದಗಿರಿ ಜಿಲ್ಲೆಯಲ್ಲಿ ಎಂಡೋ ಬ್ಯಾನ್ ಪ್ರಭಾವ ಕಾಣಲಿಲ್ಲ. ಆಂಧ್ರದಿಂದ ಎಂಡೋ ಕೀಟನಾಶಕವನ್ನು ತಂದು ಉಪಯೋಗಿಸುತ್ತಿರುವುದು ಪತ್ತೆಯಾಯಿತು. ಮಾಧ್ಯಮದಲ್ಲಿ ಇದರ ಕುರಿತು ವರದಿಯೂ ಬಂತು. ಆದರೆ ಪರಿಣಾಮ ಮಾತ್ರ ಶೂನ್ಯ. ಯಾವ ಕೀಟನಾಶಕ ಅಂಗಡಿಯಿಂದಲೂ ಎಂಡೋವನ್ನು ಸರ್ಕಾರ ಹಿಂಪಡೆದ ದಾಖಲೆಗಳಿಲ್ಲ.

ಅಂದ ಹಾಗೆ, ಸುಪ್ರೀಂಕೋರ್ಟ್ ಎಂಡೋ ನಿಷೇಧ ಸಮರ್ಪಕವಾಗಿ ಹೇರುವಂತೆ ಕೇಂದ್ರ ಕೃಷಿ ಇಲಾಖೆಗೆ ಆದೇಶಿಸಿದೆ. ಅದರಂತೆ ಇಲಾಖೆಯೂ ಕೇಂದ್ರ ಕ್ರಿಮಿನಾಶಕ ಮಂಡಳಿ ಹಾಗೂ ನೋಂದಣಿ ಸಮಿತಿ (ಸಿಐಬಿಆರ್್ಸಿ) ಮತ್ತು ಸಸಿ ಸಂರಕ್ಷಣೆ ಜಾರಿ ನಿರ್ದೇಶನಾಲಯ ಸೇರಿದಂತೆ ಹಲವಾರು ಇಲಾಖೆಗಳಿಗೆ ಸೂಚನೆ ನೀಡಿತ್ತು. ಅಲ್ಲದೆ ಎಂಡೋಸಲ್ಫಾನ್ ಮಾರಾಟ ಮತ್ತು ತಯಾರಿಕಾ ಕಂಪನಿಗಳಿಗೂ ತಿಳಿಸಿತ್ತು. ಆದರೆ ಈ ಆದೇಶಕ್ಕೆ ಬೆಲೆ ಕೊಡದ ಕಂಪನಿಗಳು ತಮ್ಮ ನೋಂದಣಿ ಪ್ರಮಾಣ ಪತ್ರ ನೀಡದೆ ನಿರ್ಲಕ್ಷ್ಯ ತಾಳಿದವು. ನಂತರ ಸಿಐಬಿಆರ್್ಸಿ ತಾನೇ ವಾಪಸ್ ಪಡೆದುಕೊಂಡು ಪುನಃ ಸುಪ್ರೀಂನ ಕೆಂಗಣ್ಣಿಗೆ ಗುರಿಯಾಗುವುದನ್ನು ತಪ್ಪಿಸಿ ಕೊಂಡಿತು.

ಎಂಡೋ ನಿಷೇಧದ ಬಗ್ಗೆ ಸುಪ್ರೀಂ ಇಂಥ ಆದೇಶ ಕೊಟ್ಟಾಗಲೂ ಕೀಟನಾಶಕವನ್ನು ಹಿಂಪಡೆಯುವ ಮನಸ್ಸು ಮಾಡಲಿಲ್ಲ. ಅಂದರೆ ತಾವು ನಿಷೇಧ ಮಾಡಿದ್ದೇವೆ ಎಂದಾಗಬೇಕು. ಔಷಧಿ ಯಥಾ ಪ್ರಕಾರ ಮಾರಾಟವಾಗುತ್ತಿರಬೇಕು ಎಂಬ ಧೋರಣೆಯೇ?

ಇನ್ನೊಂದೆಡೆ, ಎಂಡೋ ಪೀಡಿತ ಪ್ರದೇಶದ ಜನರ ಪತ್ರ ಹೋರಾಟ, ಜಾಗೃತಿ ಕಾರ್ಯ ನಡೆಯುತ್ತಿದ್ದರೂ ಅಲ್ಲಿನ ಶಾಸಕರಾಗಲಿ, ಸಂಸದರಾಗಲಿ ತುಟಿ ಬಿಚ್ಚದಿರುವುದು ಮಾತ್ರ ಸೋಜಿಗದ ಸಂಗತಿ. ಕರ್ನಾಟಕದಲ್ಲಿ ಎಂಡೋ ಬಾಧಿತರಿರುವುದು ಕೇಂದ್ರ ಸರ್ಕಾರದ ಕಣ್ಣಿಗೆ ಬೀಳಲೇ ಇಲ್ಲ. ಇದಕ್ಕೆ ಕಾರಣ ನಾವು ಕೇಂದ್ರದಲ್ಲಿ ನಮ್ಮ ಬಗ್ಗೆ ಮಾತಾಡಿ ಎಂದು ಕಳುಹಿಸಿದ ಜನಪ್ರತಿನಿಧಿಗಳು. ನಮ್ಮ ರಾಜ್ಯದ ನಾಲ್ಕು ಮಂದಿ ಸಚಿವರಿದ್ದಾರೆ. ಅದರಲ್ಲಿ ಒಬ್ಬರು ಎಂಡೋ ಬಾಧಿತ ಜಿಲ್ಲೆಯವರೇ. ಇವರು ತಮ್ಮವರಿಗೆ ಹೀಗಾಯಿತಲ್ಲ, ಇವರ ನೆರವಿಗೆ ಏನಾದರೂ ಸಹಾಯ ಮಾಡುವ ಕಳಕಳಿಯನ್ನು ತೋರಿಸಲಿಲ್ಲ. ಇಬ್ಬರು ಸಂಸದರು, ಒಬ್ಬರು ಸಚಿವರು ಇದೇ ಜಿಲ್ಲೆಯವರಿದ್ದರೂ ಈ ಸಂತ್ರಸ್ತರಿಗೆ ಕನಿಷ್ಠ ಉಪಕಾರವೂ ಆಗದಿರುವುದು ವಿಷಾದನೀಯ.

ಇನ್ನು ಬೆಳ್ತಂಗಡಿಗಿಂತ ಪುತ್ತೂರು ತಾಲೂಕಿನಲ್ಲೇ ಹೆಚ್ಚು ಮಂದಿ ಎಂಡೋ ಬಾಧಿತರಿರುವುದು ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ. ಆದರೆ ಇಲ್ಲಿನ ಶಾಸಕರಿಗೆ ಮಾತ್ರ ಈ ವಿಚಾರ ಗೊತ್ತಿದ್ದಂತೆ ಕಾಣುವುದಿಲ್ಲ. ಇವರು ಒಂದು ದಿನವೂ ಸಂತ್ರಸ್ತರ ನೋವಿಗೆ ಸ್ಪಂದಿಸಲು ಈ ಗ್ರಾಮಗಳಿಗೆ ಬಂದ ದಾಖಲೆ ಇಲ್ಲ.

ನೂರಾರು ಮಂದಿ ಮಲಗಿದಲ್ಲೇ ಜೀವನ ಕಳೆಯುತ್ತಿದ್ದಾರೆ. ಸಾವಿರಾರು ಜನರಿಗೆ ವಿವಿಧ ಕಾಯಿಲೆಗಳು ಅಟಕಾಯಿಸಿದೆ. ಇದಕ್ಕೆಲ್ಲ ಕಾರಣ ಅವೈಜ್ಞಾನಿಕವಾಗಿ ಎಂಡೋವನ್ನು ವೈಮಾನಿಕವಾಗಿ ಸಿಂಪರಣೆ ಮಾಡಿರುವುದು ಎನ್ನುವುದು ಸ್ಪಟಿಕದಷ್ಟು ಸ್ಪಷ್ಟ. ಕರ್ನಾಟಕ ಗೇರು ಅಭಿವೃದ್ಧಿ ನಿಗಮದ (ಕೆಸಿಡಿಸಿ) ತಲೆಯಲ್ಲಿ ಏನಿತ್ತೋ ಏನೋ, ವಿದೇಶಗಳಲ್ಲಿ ಕೀಟನಾಶಕ ಸಿಂಪಡಿಸುವ ರೀತಿಯಲ್ಲಿ ಇಲ್ಲಿಯೂ ಹೆಲಿಕಾಪ್ಟರ್ ಬಳಸಿತು. ಕೀಟನಾಶಕದ ಮಳೆಯನ್ನೇ ಸುರಿಸಿತು. ಪ್ಲಾಂಟೇಷನ್ ಅಕ್ಕಪಕ್ಕ ಮನೆಗಳಿರುತ್ತವೆ ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲದಂತೆ ವರ್ತಿಸಿತು.

ಎಂಡೋ ಸಿಂಪರಣೆ ಮಾಡುವಾಗ ಖುದ್ದು ಹಳ್ಳಿಗಳಿಗೆ ಹೋಗಿ ಹೀಗೊಂದು ಕೆಲಸ ಮಾಡುತ್ತಿದ್ದೇವೆ ಜಾಗೃತಿಯಲ್ಲಿರಿ ಎನ್ನುವ ಮಾತನ್ನು ಹೇಳಲಿಲ್ಲ. ಬದಲಾಗಿ ಲೋಕಲ್ ಪತ್ರಿಕೆಗಳಲ್ಲಿ ಪುಟ್ಟ ಜಾಹೀರಾತು ನೀಡಿತು. ಈ ಭಾಗದಲ್ಲಿ ಹೆಚ್ಚಿನವರು ಅನಕ್ಷರಸ್ಥರು. ಅಲ್ಲದೇ ಪತ್ರಿಕೆಗಳ ಲಭ್ಯತೆಯು ಅಷ್ಟಕಷ್ಟೆ. ಈ ಜಾಹೀರಾತನ್ನು ನೀಡಿದ್ದು ಕೇವಲ ಮೂರು ವರ್ಷ ಎನ್ನುವುದು ಮಾಹಿತಿ ಹಕ್ಕಿನ ಆಧಾರದಲ್ಲಿ ಪಡೆದ ದಾಖಲೆಗಳಿಂದ ಗೊತ್ತಾಗಿದೆ. ಎರಡು ದಶಕಗಳ ಕಾಲ ಕೆಸಿಡಿಸಿ ಮಾಡಿದ ವೈಮಾನಿಕ ಸಿಂಪರಣೆಯಿಂದ ಆದ ಬಾನಗಡಿ ಮೂರು ತಲೆಮಾರಿನವರು ನೆನಪಿನಲ್ಲಿಡಬಹುದಂಥದ್ದು. ಇನ್ನು, ಹಲವಾರು ಮಂದಿ ಹಾಸಿಗೆಯಲ್ಲೇ ಇರುವಂತೆ ಮಾಡಿದ ಕೆಸಿಡಿಸಿಯ ಮೇಲೆ ಈವರೆಗೂ ಯಾರೂ ಒಂದೇ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ಕೋರ್ಟ್್ಗೆ ಸಲ್ಲಿಕೆಯಾಗಲಿಲ್ಲ. ಆ ಹೋರಾಟ, ಈ ಹೋರಾಟ ಮಾಡುವ ಸಂಘಟನೆಗಳು ನಮ್ಮಲ್ಲಿ ಇವೆ. ಆದರೆ ಈ ಯಾವ ಸಂಘಟನೆಗಳಿಗೂ ಇಲ್ಲಿನ ಸಮಸ್ಯೆ ಇನ್ನು ಕಾಣದಿರುವುದು ಸೋಜಿಗದ ವಿಷಯ.

ಇವೆಲ್ಲಕ್ಕಿಂತ ಮುಖ್ಯ ಸಂಗತಿ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಪ್ರಮುಖರು ಆಡಿದ ಮಾತು. ಎಂಡೋದಿಂದ ಮಾನವನ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬ ಮಾಹಿತಿ ಕೊಡಿ ಎಂದು ಕೇಳಿದಾಗ, ತನಗೆ ಮೂರು ವರ್ಷದ ಕಾಲಾವಕಾಶ ಬೇಕು ಎಂದಿದೆ. ಆದರೆ ಮಾಹಿತಿ ಹಕ್ಕಿನಲ್ಲಿ ಕೇಳಿದಾಗ 2005ರಲ್ಲಿ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡಾ. ಪ್ರತಾಪ್ ಕುಮಾರ್ ಅವರು 2003 ರಿಂದ 2005ರವರೆಗೆ ಅಧ್ಯಯನ ನಡೆಸಿ ಐಸಿಎಂಆರ್್ಗೆ ವರದಿ ಸಲ್ಲಿಸಿತ್ತು. ಈ ಅಧ್ಯಯನ ವರದಿ ತಯಾರಿಸಲು ಸಾರ್ವಜನಿಕರ ಅಂದರೆ ತೆರಿಗೆ ಹಣವೇ ಅನುದಾನವಾಗಿ ಬಳಕೆಯಾಗಿದ್ದು. ಇದರ ಮೊತ್ತ ಸುಮಾರು 8 ಲಕ್ಷ ರುಪಾಯಿ.

ಅಲ್ಲ, ಐಸಿಎಂಆರ್್ನಂಥ ಸಂಸ್ಥೆಗೆ ತಾವು ತಯಾರಿಸಿಟ್ಟುಕೊಂಡ ಅಧ್ಯಯನ ಇರುವುದೇ ಗೊತ್ತಿರಲಿಲ್ಲವೇ? ಮಾಹಿತಿ ಹಕ್ಕಿನಲ್ಲಿ ಕೇಳಿದಾಗ ಐಸಿಎಂಆರ್್ನವರು ಪುನಃ ಮಣಿಪಾಲ ಮೆಡಿಕಲ್ ಕಾಲೇಜಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡು ಅಧ್ಯಯನ ವರದಿ ತರಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಎಂಡೋನಿಂದ ಪುರುಷತ್ವವೇ ನಾಶವಾಗುತ್ತದೆ ಮತ್ತು ಹುಟ್ಟುವ ಮಕ್ಕಳು ಸರಿಯಾಗಿ ಹುಟ್ಟುವುದಿಲ್ಲ ಎಂದು ಅಧ್ಯಯನ ಹೇಳುತ್ತದೆ. ಇಂಥ ಗಂಭೀರ ಸಮಸ್ಯೆ ಇರುವುದು ಐಸಿಎಂಆರ್ ಅವರ ಗಮನಕ್ಕೆ ಬಂದಿಲ್ಲವೇ? ಬಂದಿದ್ದರೆ ಅಂದೇ ಅಂದರೆ ಆರು ವರ್ಷದ ಕೆಳಗೆ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿತ್ತು. ಯಾವುದಾದರೂ ಮಾಧ್ಯಮದ ಮೂಲಕ ತಿಳಿಸಬೇಕಿತ್ತು. ಆ ಕೆಲಸವನ್ನು ಮಾಡದೆ ಅಲಕ್ಷ್ಯ ತೋರಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತದೆ. ಇದು ಕಾನೂನು ಉಲ್ಲಂಘನೆ. ಮಾನವನ ಜೀವನದ ಮೇಲೆ ಆಟವಾಡುವ ಕೆಲಸವನ್ನು ಐಸಿಎಂಆರ್ ಮಾಡಿದೆ.

ಇದನ್ನೆಲ್ಲ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಗಮನಿಸುತ್ತಿದ್ದಾರೆಯೇ?

ಇವರು ಗಮನಿಸಿದರೆಷ್ಟು, ಬಿಟ್ಟರೆಷ್ಟು... ಕ್ರಿಕೆಟ್ ಟೀಮ್ ಕಟ್ಟುವುದರಲ್ಲೇ ಸದಾ ಬ್ಯುಸಿಯಾಗಿರುತ್ತಾರೆ. ಇವರಿಗೆ ಜನಸಾಮಾನ್ಯರ ಸಮಸ್ಯೆಯ ಚಿಂತೆ ಕಾಡುವುದಿಲ್ಲವೇ? ಇಷ್ಟೆಲ್ಲ ಅವಾಂತರ ಮಾಡಿದ ಎಂಡೋ ಬೇಕು ಎನ್ನುವುದಾಗಿ ಇವರು ಹೇಳುತ್ತಾರೆ. ಇದರ ಹಿಂದಿನ ಸತ್ಯವೇನು?

ರಾಜಕೀಯ ವ್ಯಕ್ತಿಗಳು, ಕಂಪನಿಯವರ ಮೇಲಾಟದಲ್ಲಿ ಸಾಮಾನ್ಯ ಜನ ಬಲಿಯಾಗುತ್ತಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ.

-ನಾಗರಾಜ ಮತ್ತಿಗಾರ

FEEDJIT Live Traffic Feed