Sunday, November 15, 2009

ಮಾಯಾಂಗನೆಯ ಸೆರಗು ಹಿಡಿದು

i am leaving the hell. that means benglore

ನಾನು ನರಕವನ್ನು ಬಿಡುತ್ತಿದ್ದೇನೆ. ಅಂದರೆ ಬೆಂಗಳೂರಿಂದ ಹೊರಗಡೆ ಹೋಗುತ್ತಿದ್ದೇನೆ. ಇದು ಟ್ವಿಟರ್‌ ಎನ್ನುವ ಅಂತರ್ಜಾಲ ತಾಣದಲ್ಲಿ ಕಂಡ ವಾಕ್ಯ.

ನಿಜ, ಬೆಂಗಳೂರು ಸ್ವರ್ಗ ಎಂದು ತಿಳಿದು ಬಂದ ಅದೆಷ್ಟೋ ಮಂದಿಗೆ ಹೀಗೆ ಅನ್ನಿಸುತ್ತಿದ್ದರೆ ಸುಳ್ಳಲ್ಲ. ದೇವಲೋಕದ ಸ್ವರ್ಗದ ಕಲ್ಪನೆಯಲ್ಲೇ ಬೆಂಗಳೂರನ್ನು ಗ್ರಹಿಸಿ ಬಂದವರ ಸಂಖ್ಯೆ ಅಧಿಕ. ನಾನು ನನ್ನಂಥ ಅನೇಕ ಮಂದಿ ಕೆಲಸವನ್ನು ಅರಸಿ ಇಲ್ಲಿಗೆ ಬರುವಾಗ ಹೊರಲಾದಷ್ಟು ಭಾರದ ಕನಸಿನ ಮೂಟೆ ಹೊತ್ತು ಕೊಂಡೇ ಬಂದೆವು. ಆ ಕನಸಿನ ಮೂಟೆಯ ಭಾರ ಮಾತ್ರ ಇನ್ನೂ ಕಡಿಮೆಯಾಗಲಿಲ್ಲ. ವಜ್ಜೆ ತಡೆದುಕೊಳ್ಳಲಿಕ್ಕೂ ಆಗುತ್ತಿಲ್ಲ.
ಬೆಂಗಳೂರು ಬದುಕುವುದನ್ನು ಕಲಿಸುತ್ತದೆ. ಸತ್ಯ, ಆದರೆ ಜೀವನ ಅನುಭವಿಸುವುದನ್ನು ಕಲಿಸುವುದಿಲ್ಲ ಎಂಬುದು ಅಷ್ಟೇ ಸತ್ಯ.
ರಾಜಧಾನಿಗೆ ಬರುವ ಪೂರ್ವದ ಕತೆಗಳನ್ನು ಸ್ವಲ್ಪ ಹೇಳಬೇಕಾಗುತ್ತದೆ. ಪದವಿಯನ್ನು ಮುಗಿಸಿದ ಆ ದಿನಗಳಲ್ಲಿ ಬೆಂಗಳೂರು ಸೇರಿದ ಅನೇಕ ಮಂದಿ ಮಿತ್ರರು ಹೇಳುತ್ತಿದ್ದರು `ಇಲ್ಲಿಗೆ ಬಾರಯ್ಯ, ಸಕತ್ತಾಗಿದೆ. ಬ್ರಿಗೇಡ್‌, ಎಂ.ಜಿ. ರೋಡ್‌ ವೀಕೆಂಡ್‌ ಮಜಾ ಮಾಡಬಹುದು. ಬೇಸರ ಆದಾಗಲೆಲ್ಲ ಕಬ್ಬನ್‌ ಪಾರ್ಕ್‌, ಲಾಲ್‌ ಬಾಗ್‌ ಓಡಾಡಲಿಕ್ಕೆ ಆಗುತ್ತೆ. ತಿಂಗಳ ಕೊನೆಗೆ ಸಂಬಳ. ಹಣಕ್ಕಾಗಿ ಬೇರೆಯವರನ್ನು ಕೇಳುವ ಕೆಲಸವಿರಲ್ಲ, ಎಂಬೆಲ್ಲ ಕನಸನ್ನು ಕಟ್ಟಿದರು. ಯಾವುದೋ ಹಳ್ಳಿಯ ಮೂಲೆಯಲ್ಲಿರುವ ನಾನು, ನನ್ನಂತಹ ಅನೇಕ ಮಂದಿಗೆ ಮಿತ್ರರ ಮಾತು ವಜ್ರದ ಹರಳಿನಂತೆ ಹೊಳೆಯಿತು.
ಜಾಗರೂಕನಾಗಿರುವವ ಒಂದು ಕೆಲಸ ಹುಡುಕಿ ಇಲ್ಲಿಗೆ ಬರುತ್ತಾನೆ. ಬೆಂಗಳುರು ಆದಷ್ಟು ಬೇಗನೆ ಸೇರಬೇಕು ಎಂಬ ಉಮೇದಿ ಇರುವವನು ಬಂದು ಹುಡುಕಿದರಾಯಿತು ಎಂದು ಬಸ್‌ ಹತ್ತುತ್ತಾನೆ. ಇಲ್ಲಿಗೆ ಬಂದ ಮೇಲೆ ಮಾಯಾನಗರಿಯ ವಿಲಾಸ ತಿಳಿಯುತ್ತದೆ. ಮೆಜೆಸ್ಟಿಕ್‌ಗೆ ಬಂದು `ಗೆಳೆಯನೊಬ್ಬ ಇದ್ದಾನೆ, ಅವನಿಗೆ ಫೋನ್‌ ಮಾಡುವ ಎಂದು ಕೊಯ್ನ್‌ ಬಾಕ್ಸ್‌ಗೆ ಹೋಗಿ ಕಾಲ್‌ ಮಾಡಿದರೆ `ನೀವು ಕರೆ ಮಾಡಿದ ಚಂದಾದಾರರು ಯಾವುದೇ ಕರೆಯನ್ನು ಸ್ವೀಕರಸುತ್ತಿಲ್ಲ' ಎಂಬ ಅಶರೀರ ವಾಣಿ ಕೇಳ ಬೇಕಾದ ಸ್ಥಿತಿಯೂ ಬರುತ್ತದೆ. ಒಮ್ಮೆ ಕರೆ ಸ್ವೀಕಾರ ಮಾಡಿದರೆ ನಾನು ಹೊಸ್ಕೆರೆಹಳ್ಳಿಯಲ್ಲಿರುವುದು. ಇಂತ ನಂಬರ್‌ ಬಸ್‌ ಹತ್ತಿ ಬಾ, ನಾನು ಅಲ್ಲಿ ನಿನ್ನ ಪಿಕ್‌ಅಪ್‌ ಮಾಡುತ್ತೇನೆ ಅನ್ನುತ್ತಾನೆ.
`ನಮ್ಮ ರಾಜ್ಯಧಾನಿ ಬೆಂಗಳೂರು' ಎಂದು ಪ್ರಾಥಮಿಕ ಶಾಲೆಯಲ್ಲಿ ಮೇಸ್ಟ್ರು ಹೇಳಿದನ್ನು ಕೇಳಿದ ಅನುಭವವಿರುವ ಹೊಸಮುಖ ಕಪ್ಪಿಡುತ್ತದೆ. ಯಾರ ಹತ್ತಿರವಾದರೂ ಕೇಳುವ ಎಂದರೆ ಅಲ್ಲಿರುವ ಎಲ್ಲರೂ ಗಡಬಿಡಿಯಲ್ಲಿ ಓಡಾಡುತ್ತಿರುತ್ತಾರೆ. ಆದರೂ ಕೇಳಿದ ಅಂತಿಟ್ಕೋಳಿ, ಅವರೆನೋ ಅನ್ನುತ್ತಾರೆ. ಇವನಿಗೆ ಎನೋ ಕೇಳುತ್ತದೆ. ಇದು ಬೆಂಗಳೂರಿಗೆ ಬಂದಾಗ ಆಗುವ ಮೊದಲ ಅನುಭವ.
ಆದರೂ ಬೆಂಗಳೂರು ಸುಂದರ. ನಂತರ ಜ್ಞಾನೋದಯವಾಗುತ್ತ ಹೋಗುತ್ತದೆ. ಬೆಂಗಳೂರು ಎಂದರೆ ರಭಸವಾಗಿ ಹರಿಯುವ ನೀರು. ಇಲ್ಲಿನ ಸುಳಿಯಲ್ಲಿ ಜೀವನ ಕೊಚ್ಚಿ ಹೋಗುತ್ತದೆ. ನಾವು ಎಲ್ಲಿದ್ದೇವೆ ಎಂದು ಯೋಚಿಸುವ ಹೊತ್ತಿಗೆ ಎಲ್ಲಿಗೆ ಹೋಗಿ ತಲುಪಿರುತ್ತೇವೆ. ಅಂದರೆ ಇಲ್ಲಿಗೆ ಬಂದ ವ್ಯಕ್ತಿ ಬೇಗನೆ ಹಣ ಸಮಪಾದನೆ ಮಾಡಬಹುದು, ಒಳ್ಳೆಯ ಹೆಸರನ್ನು ಗಳಿಸಬಹುದು, ಕೆಟ್ಟ ಕೆಲಸ ಮಾಡಿ ಕುಖ್ಯಾತಿಯನ್ನೂ ಗಳಿಸಬಹುದು. ಬೆಳವಣಿಗೆ, ಪತನ, ಸಂಪಾದನೆ ಎಲ್ಲವೂ ಇಲ್ಲಿ ಸಾಧ್ಯ. ನೆಮ್ಮದಿಯ ಜೀವನವೊಂದನ್ನು ಬಿಟ್ಟು.
`ನನಗೆ ಕಮರ್ಷಿಯಲ್‌ ಸ್ಟ್ರೀಟ್‌ನಲ್ಲಿ ಮನೆ ಇತ್ತು. ಅಲ್ಲಿ ಗಲಾಟೆ ಎಂದು ಕತ್ರಿಗುಪ್ಪೆಯಲ್ಲಿ ಮನೆ ಮಾಡಿದೆ. ಈಗ ಅಲ್ಲಿಯೂ ಗೌಜು ಅದಕ್ಕಾಗಿ ಇಲ್ಲಿ ಮನೆ ಮಾಡುತ್ತಿದ್ದೇವೆ ' ಎನ್ನುವ ಮಾತನ್ನು ಉತ್ತರಹಳ್ಳಿಯಲ್ಲಿ ಮನೆಕಟ್ಟುತ್ತಿರುವ ಒಬ್ಬರ ಮಾತು. ಇಲ್ಲೇ ಹುಟ್ಟಿ ಬೆಳದವರಿಗೆ ಇಲ್ಲಿನ ವಾತಾವರಣ `ಗಲಾಟೆ' ಎಂದಾಗ ಹಳ್ಳಿಯಲ್ಲಿ ಹುಟ್ಟಿ ಬೆಳೆದವರ ಕತೆ ಎನಾಗಬಹುದು? ಅದಕ್ಕೆ ಬೆಟ್ಟದಾ ಮೇಲೊಂದು ಮನೆಯ ಮಾಡಿ ವಚನವೇ ಸಾಂತ್ವಾನ ಹೇಳುತ್ತದೆ
ಇಲ್ಲಿನ ವಾತಾವರಣ ಕಲುಷಿತ ಗೊಳ್ಳುತ್ತಿದೆ. ಮೂರು ದಿನ ಕಣ್ಮುಚ್ಚಿ ಮಳೆಹೊಯ್ದರೆ ಮಹಾನಗರಿ ತತ್ತರಿಸುತ್ತದೆ. ತಾಪ ಹೆಚ್ಚಾಗ ತೊಡಗಿದೆ. ದೂಳು ಯಥೇಚ್ಚ. ಇದು ಪ್ರಾಕೃತಿಕ ತೊಂದರೆಯಾದರೆ, ಸಮಾಜದೊಡನೆ ಬದುಕುವ ಮನುಷ್ಯ ಮನುಷ್ಯನ ಸಂಬಂಧವೇ ಹಳಸುತ್ತಿದೆ. ಪಕ್ಕದ ಮನೆಯವರ ಪರಿಚಯ ಇಲ್ಲದ ಸ್ಥಿತಿ ಇದೆ. ಎಲ್ಲರಿಗೂ ಅವರರವರ ಕೆಲಸವೇ ಮುಖ್ಯವಾಗುತ್ತಿದೆ. ಸಾವಿರ ಸಾವಿರ ಮನೆಗಳ ಮಧ್ಯೆ ಒಂಟಿ ಮನೆ. ಲಕ್ಷಾಂತರ ಜನರಿದ್ದರು ಎಕಾಂಗಿ ಎನ್ನುವ ಸ್ಥಿತಿ ಇಲ್ಲಿದೆ.
ಒಂದು ಕಡೆಯಲ್ಲಿ ರಾಜಧಾನಿಗೆ ಸಹಸ್ರದ ಲೆಕ್ಕಾಚಾರದಲ್ಲಿ ಜನರು ಬರುತ್ತಿದ್ದರೆ, ಮತ್ತೊಂದೆಡೆ ಇಲ್ಲಿಂದ ಬೇರೆಡೆ ಹೋಗಬೇಕು ಎಂದು ದಿನವೂ ಯೋಚಿಸುತ್ತ ಇಲ್ಲೇ ಇದ್ದವರಿದ್ದಾರೆ. ಹೊಟ್ಟೆಪಾಡಿಗಾಗಿ ಬಂದು ಬೇರೆಡೆ ಹೋಗಲಾರದ ಸ್ಥಿತಿಯಲ್ಲಿರುವವರು ಇಲ್ಲಿನ ಬದಲಾವಣೆಗೆ ಒಳಗೊಳಗೆ ಬಯ್ದುಕೊಳ್ಳುತ್ತಾ ಇಲ್ಲೆ ಇರಬೇಕಾಗುತ್ತದೆ. ಅಂದರೆ ಸಾವಿರ ಲೆಕ್ಕದಲ್ಲಿ ಕನಸು ಕಂಡು ಇಲ್ಲಿಗೆ ಬಂದವರು ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಾ ಇರಬೇಕಾಗುತ್ತದೆ. ಅದೇ ಇಂಜನಿಯರಿಂಗ್‌ ಕಲಿತು ಬಂದವರು ಲಕ್ಷಾಂತರ ಗಳ ಕನಸು ಕಂಡು ಬಂದವರು ನಗರದ ಹೊರವಲಯದಲ್ಲಿ ಅಥವಾ ಯಾವುದಾದರೂ ಹಳ್ಳಿಯಲ್ಲಿ ಭೂಮಿ ಖರೀದಿಸಿ ತಂಪನೆ ಜೀವನ ಸಾಗಿಸಲಿಕ್ಕೆ ಹೊರಡುತ್ತಾರೆ. ಇನ್ನೂ ಕೆಲವರು ಹೇಳುತ್ತಾರೆ ` ಇನ್ನೊಂದು ನಾಲ್ಕು ವರ್ಷ ಎಲ್ಲಿಯಾದರೂ ಹಳ್ಳಿಯಲ್ಲಿ ಸ್ವಲ್ಪ ಜಮೀನು ತೆಗೆದುಕೊಂಡು ಆರಾಮ ಇದ್ದುಬಿಡ್ತೀನಿ' ಎಂದು.
ಶೇಕಡಾ 80ಕ್ಕೂ ಹೆಚ್ಚು ಜನರಿಗೆ ಅಲ್ಲದೆ ನಮ್ಮನೆ ಅವರೆಲ್ಲ ಇಲ್ಲಿರುವುದು ಸುಮ್ಮನೆ ಅಷ್ಟೇ. ಹೀಗಾಗಿ ಬೆಂಗಳೂರಿಂದ ಹೋಗುವವರು ಹೋಗುತ್ತಾರೆ. ಬರವವರು ಬರುತ್ತಾರೆ.

Wednesday, November 4, 2009

ವೈವಾ­ಹಿಕ ಅಂಕ­ಣವು.. ಅವಿ­ವಾ­ಹಿತ ಹುಡು­ಗರು

ನನಗೆ ಇತ್ತೀ­ಚೆಗೆ ವೈವಾ­ಹಿಕ ಅಂಕಣ ನೋಡು­ವುದು ಒಂದು ಹವ್ಯಾ­ಸ­ವಾ­ಗಿದೆ. ಅಲ್ಲಲ್ಲ ಚಟವೇ ಆಗಿದೆ. ನೀವು ಉಹಿ­ಸ­ಬ­ಹುದು ಇವ­ನೇನು ಮದುವೆ ಗಂಡೇ? ನಿಜ, ಮದುವೆ ಯಾಗುವ ಹೊಸ್ತಿ­ಲ­ಲ್ಲಿ­ರುವ ಹಲ­ವಾರು ಗಂಡು ಮಕ್ಕ­ಳಲ್ಲಿ ನಾನೂ ಒಬ್ಬ. ಮುಂಚೂ­ಣಿ­ಯಲ್ಲಿ ಇಲ್ಲ­ದಿ­ದ್ದರೂ, ಸರದಿ ಸಾಲಿ­ನಲ್ಲಿ ನಿಂತಿ­ದ್ದೇನೆ. ಆದರೆ ಹೆಣ್ಣು ಸಿಗು­ವು­ದೆಂ­ದರೆ ಮಾಯಾ­ಜಿಂಕೆ ಹಿಡಿದ ಹಾಗೆ ಎನ್ನು­ವುದು ಮದು­ವೆ­ಯಾ­ಗ­ಬೇ­ಕೆಂ­ದಿ­ರುವ ಬಹು­ತೇಕ ಗಂಡು ಮಕ್ಕಳ ಅನು­ಭವ.
ಹಿಂದೊಂದು ಕಾಲ ಇತ್ತಂತೆ, ಯಾವ ಗಂಡು ಎಷ್ಟು ಮನೆಯ ಸಿರಾ (ರವೆ­ಯಿಂದ ಮಾಡುವ ಸ್ವೀಟ್‌) ತಿನ್ನು­ತ್ತಾ­ನೆಂದು. ಒಂದು ಗಂಡಗೆ ಐವತ್ತು ಜಾತ­ಕ­ದ­ವ­ರೆಗೆ ಬರು­ತ್ತಿ­ತ್ತಂತೆ. ಅಶ್ವ­ಮೇಧ ಯಾಗದ ಕುದು­ರೆಯ ಬೆನ್ನು ಹತ್ತಿ ಹೊರಟ ಯೋಧ­ನಂತೆ ಒಂದು ದಿನಕ್ಕೆ ಹತ್ತು ಹೆಣ್ಣು ಮಕ್ಕ­ಳನ್ನು ನೋಡಿ, ಹತ್ತು ಮನೆಯ ಸಿರಾ ತಿಂದು ಬರು­ತ್ತಿ­ದ್ದ­ರಂತೆ. ಆದರೆ ಕಾಲ ಬದ­ಲಾ­ಗಿದೆ. ಎಷ್ಟೋ ಜನ ಗಂಡು ಮಕ್ಕಳು ಹೆಣ್ಣು ಸಿಗದೇ ಅನಿ­ವಾ­ರ್ಯದ ಬ್ರಹ್ಮ­ಚರ್ಯ ಪಾಲಿ­ಸಿ­ದ್ದಾರೆ. ಮದುವೆ ಎಂದರೆ ಆಸೆ­ಯಾ­ದರೂ ಬೆಚ್ಚಿ­ಬೀ­ಳುವ ಸ್ಥಿತಿಗೆ ತಲು­ಪಿ­ದ್ದಾರೆ.
ನಾನೂ ಇವರ ಸಾಲಿಗೆ ಸೇರು­ವುದು ಬೇಡ ಎಂದು ಎಲ್ಲಿ­ಯಾ­ದರೂ ನನಗೆ ಹೊಂದಾ­ಣಿ­ಕೆ­ಯಾ­ಗುವ ಅಲ್ಲಲ್ಲ ಯಾವು­ದಾ­ದರೂ ಹೆಣ್ಣಿಗೆ ನಾನು ಹೊಂದಾ­ಣಿಕೆ ಯಾಗ­ಬ­ಹು­ದೆಂದು ಪ್ರತಿ ಪತ್ರಿ­ಕೆಯ ವೈವಾ­ಹಿಕ ಅಂಕಣ ನೋಡು­ತ್ತೇನೆ. ನೋಡುತ್ತಾ ಇದ್ದೇನೆ. ನನ್ನಂತೆ ಬಹಳ ಹುಡು­ಗರು ವೈವಾ­ಹಿಕ ಅಂಕಣ ನೋಡು­ತ್ತಾಂತೆ. ಕೆಲಸ ಹುಡು­ಕುವ ಮಂದಿ ಕ್ಲಾಸಿ­ಫೈಡ್‌ ನೋಡಿ­ದಂತೆ.
ಅದ­ರಲ್ಲೂ ಹವ್ಯಕ ಹುಡು­ಗರು ಒಂದು ಪತ್ರಿ­ಕೆ­ಯನ್ನು ಬಿಡದೆ ವೈವಾ­ಹಿಕ ಅಂಕಣ ನೋಡು­ತ್ತಾ­ರಂತೆ. `ಹು' ಅಥವಾ `ಕೂ' ಎಂದರೆ ಹುಡುಗಿ/ ಕೂಸು ಎಂದು ನೇರ ಜಾತಕ ಕೇಳಿ, ವಿಳಾಸ ವಿಚಾ­ರಿ­ಸುವ ಹಪ­ಹ­ಪಿ­ಕೆಗೆ ಪಾಪ ಮಾಣಿ­ಗಳು ತಲು­ಪಿ­ದ್ದಾರೆ. ಅದಕ್ಕೆ ಕಾರ­ಣವೂ ಇದೆ. ಹವ್ಯ­ಕ­ರಲ್ಲಿ ಹೆಣ್ಣು ಮಕ್ಕಳ ತೀವ್ರ ಕೊರತೆ. ಮರು­ಭೂ­ಮಿ­ಯಲ್ಲಿ ನೀರಿನ ಕೊರತೆ ಇದ್ದಂತೆ. ಅದಕ್ಕೆ ಸಿಕ್ಕಿ­ದನ್ನು ಬಿಡ­ಬಾ­ರದು ಎಂಬ ದೂ(ದು)ರಾಲೋ­ಚನೆ.
ಹಾಗಂತ ಹೆಣ್ಣು ಮಕ್ಕಳು ಇಲ್ಲ ಎಂದಲ್ಲ. ಇದ್ದ ಹೆಣ್ಣು ಮಕ್ಕಳ ಕೊರ­ತೆಯ ಸೃಷ್ಠಿ­ಯಾ­ಗಿದೆ. ಅರ್ಥ­ಶಾ­ಸ್ತ್ರದ ಪ್ರಕಾರ ಡಿಮ್ಯಾಂಡ್‌ ಹೆಚ್ಚು ಮಾಡ­ಲಿಕ್ಕೆ ವಸ್ತು­ಗ­ಳನ್ನು ಉದ್ದೇಶ ಪೂರ್ವ­ಕ­ವಾಗಿ ತಡೆ ಹಿಡಿ­ಯು­ವಂತೆ ಹವ್ಯ­ಕ­ರಲ್ಲೂ ಉದ್ದೇಶ ಪೂರ್ವ­ಕ­ವಾಗಿ ಹೆಣ್ಣು ಮಕ್ಕಳ ಕೊರ­ತೆ­ಯಾ­ಗಿದೆ.
ಈಗ ವೈವಾ­ಹಿಕ ಅಂಕಣ ವಿಚಾ­ರಕ್ಕೆ ಬರುವ...
ಬಿ.ಇ ಓದಿ­ರುವ ಸುಸಂ­ಸ್ಕೃತ ಕನ್ಯೆಗೆ ಬಿ. ಇ, ಎಂಟೆಕ್‌ ಮಾಡಿ­ರುವ ಯೋಗ್ಯ ವರ ಬೇಕಾ­ಗಿ­ದ್ದಾರೆ. ಬೆಂಗ­ಳೂ­ರಿ­ನಲ್ಲಿ ಸ್ವಂತ ಮನೆ, ಕೈತುಂಬ ಸಂಬಳ, ವಯಸ್ಸು 28 ಮೀರಿ­ರ­ಬಾ­ರದು. ಆಸ­ಕ್ತರು 94482.... ಸಂಪ­ರ್ಕ­ಸ­ಬ­ಹುದು.
ಅಲ್ಲ ಕಣ್ರಿ, 28 ನೇ ವರ್ಷಕ್ಕೆ ಎಲ್ಲ­ವನ್ನು ಸಂಪಾ­ದನೆ ಮಾಡಿ­ರುವ ಯುವಕ ಬೇಕು ಎಂದರೆ ಹ್ಯಾಗೆ ಸಾಧ್ಯ. ಯುವ­ಕ­ರಿ­ರು­ವಾ­ಗಲೇ ಸುಖದ ಸುಪ್ಪ­ತ್ತಿ­ಗೆ­ಯ­ಲ್ಲಿ­ದ್ದರೆ ಜೀವನ ಎಂಬುದು ಅಂತ್ಯ ಅಲ್ವೇನ್ರಿ? ಇರಲಿ ಬಿಡಿ. ಇದ­ಕ್ಕಿಂತ ಮಜಾ­ವೆಂ­ದರೆ ಹಳ್ಳಿ­ಯಿಂದ ಬಂದ ಒಂದು ವೈವಾ­ಹಿಕ ಮಾಹಿತಿ...ಪಿಯು­ಸಿ­ಯನ್ನು ಮೊದಲ ದರ್ಜೆ­ಯಲ್ಲಿ ಪಾಸಾದ ಕನ್ಯೆಗೆ ಯೋಗ್ಯ ವರ­ಬೇ­ಕಾ­ಗಿ­ದ್ದಾರೆ. ಮುಂದೆ ಕಲಿ­ಯುವ ಆಸಕ್ತಿ ಹೊಂದಿ­ರುವ ಈ ಕನ್ಯೆ ಮುಂದೆ ಕಲಿ­ಸುವ ಮನ­ಸ್ಸು­ಳ್ಳ­ವರು ಬೇಕು. ವರ­ನಿಗೆ ಉತ್ತಮ ಆದಾ­ಯ­ವಿ­ರ­ಬೇಕು. ಬೆಂಗ­ಳೂ­ರಿ­ನಲ್ಲಿ ಸ್ವಂತ ಮನೆ.... ಹೀಗೆ ಸಾಗು­ತ್ತದೆ ಜಾಹೀ­ರಾತು. ಎಲ್ಲ ಹೆಣ್ಣು ಮಕ್ಕ­ಳಿಗೂ ಇಂತ­ಹದೇ ವರ ಬೇಕೆಂ­ದಾರೆ ನಮ್ಮಂ­ತ­ವರ ಕತೆ ಗೋವಿಂದಾ....ಗೋವಿಂದಾ.
ಇದು ಹೆಣ್ಣು­ಮ­ಕ್ಕಳ ಒತ್ತಾ­ಯ­ವಲ್ಲ. ಅವರ ಪಾಲ­ಕ­ರಿಗೆ ಬೆಂಗ­ಳೂ­ರಿನ ಹುಚ್ಚು ಹಿಡಿದು ಬಿಟ್ಟಿದೆ. ಎಂಬ ಮಾತು ಕೇಳಿ ಬರು­ತ್ತಿದೆ. ಅಲ್ರಿ ಎಲ್ಲರೂ ಬೆಂಗ­ಳೂರು, ವಿದೇಶ ಅಂತಿದ್ರೆ ಹಳ್ಳಿ­ಗಳು ಮುದು­ಕರ ಸಂತೆ­ಯಾ­ಗು­ವು­ದ­ರಲ್ಲಿ ಸಂದೇ­ಹ­ವಿಲ್ಲ. ಇದೇ ಜಾಹೀ­ರಾತು ನೀಡಿದ ಪಾಲ­ಕರು ಕೊನೆ­ಗಾ­ಲ­ದಲ್ಲಿ ಹತ್ತಿ­ರ­ದಲ್ಲಿ ಯಾರೂ ಇಲ್ಲದೇ ಅನಾ­ಥ­ರಾ­ಗು­ವು­ದ­ರಲ್ಲಿ ಸಂದೇ­ಹವೆ ಇಲ್ಲ.
ಗಂಡು ಮಕ್ಕಳೋ ಇದೆ ಅಪ್ಪ ಅಮ್ಮನ ಒತ್ತಾ­ಯಕ್ಕೆ ನಗರ ಸೇರಿ­ರು­ತ್ತಾರೆ. ಬೆಂಗ­ಳೂ­ರಿ­ನಲ್ಲಿ ಇರುವ ಕಾರ­ಣಕ್ಕೆ ಒಂದು ಮದು­ವೆ­ಯಾ­ದರೂ ಆಶ್ಚ­ರ್ಯ­ವಿಲ್ಲ. ಮದುವೆ ಆದ ಮೇಲೆ ಮನೆ ಕಡೆ ಮುಖ ಹಾಕುವ ಮನಸ್ಸು ಇಲ್ಲದೆ ಇಲ್ಲೆ ಸೆಟ್ಲಾಗಿ ಬಿಡು­ತ್ತಾರೆ. ಮದು­ವೆಯ ಕಷ್ಟ ಏನೆಲ್ಲಾ ಬಾನ­ಗಡಿ ಮಾಡು­ತ್ತದೆ. ಮುಂದೊಂದು ದಿನ `ನಮ್ಮ ಮನೆ' ಎಂಬುದು ಇಲ್ಲದೆ ಪರಿ­ತ­ಪಿಸ ಬೇಕಾ­ಬ­ಹುದು ಅನ್ನಿ­ಸು­ತ್ತಿದೆ.
ಇಲ್ಲಿ ಯಾರ ತಪ್ಪು ಎಂದು ಹೇಳ­ಲಿಕ್ಕೆ ಆಗು­ವು­ದಿಲ್ಲ. ತಮ್ಮ ಹೆಣ್ಣು ಮಕ್ಕಳು ಸುಖ­ವಾ­ಗಿ­ರಲಿ ಎಂಬುದು ಹೆಣ್ಣು ಮಕ್ಕಳ ತಂದೆ ತಾಯಿ­ಗಳ ಆಶ­ಯ­ವಾ­ದರೆ, ತಮ್ಮ ಗಂಡು ಮಕ್ಕ­ಳಿಗೆ ಮದು­ವೆ­ಯಾಗಿ ವಂಶ ವೃದ್ಧಿ­ಯಾ­ಗಲಿ ಎಂಬುದು ಗಂಡು ಮಕ್ಕಳ ತಂದೆ ತಾಯಿ­ಗಳ ಆಶಯ. ಅಪ್ಪ- ಅಮ್ಮಂ­ದಿರ ಆಶ­ಯಕ್ಕೆ ವಿರು­ದ್ಧ­ವಾ­ಗ­ಬಾ­ರ­ದೆಂದು ಸಹಿ­ಸು­ತ್ತಿ­ರುವ ಸ್ಥಿತಿ ಮಕ್ಕ­ಳ­ದಾ­ಗಿದೆ.

Thursday, October 15, 2009

ಬ್ಲಾಗ್ ಮಂದಿ ಬಾವಿಯೊಳಗಿನ ಕಪ್ಪೆ

blag ಬಗ್ಗೆ ನನ್ನ ಮಿತ್ರರೊಬ್ಬರು ಗಮ್ಮತ್ತಾಗಿ ಬೈದರು. ನನಗೆಂತು ಯದ್ವಾತದ್ವಾ ಖುಷಿಯಾಯಿತು. ಅವರು ಬೈದಿರುವ ವ್ಯಂಗ್ಯ ಮಾಡಿರುವುದನ್ನು ಹಾಗೇಯೆ ಬರೆದಿದ್ದೇನೆ. ಓದಿ ಮಜಾ ತೆಗೆದುಕೊಳ್ಳುವವರು ತೆಗೆದುಕೊಳ್ಳಬಹುದು. ಬಯ್ಯುವವರು ಬಯ್ಯಲು ಬಹುದು. ನಾನು ಅನ್ಕೋತಿನಿ ಕೆಲವರಾದರು ಇಲ್ಲಿರುವ ವಿಚಾರಗಳನ್ನು ಒಪ್ಪಿಕೊಳ್ಳಬಹುದು ಎಂದು.....



ಮೊನ್ನೆ ನನ್ನ ಪತ್ರಕರ್ತ ಮಿತ್ರರೊಬ್ಬರೊಂದಿಗೆ ಮಾತಾನುಡುತ್ತಾ ಇದ್ದೆ. ಮಿತ್ರಇರುವುದುತ್ತರ ಕರ್ನಾಟಕದಲ್ಲಿ . ನನಗೆ ನೆರೆಯ ಬಗ್ಗೆ ಮಾಹಿತಿ ಕೆಳಬೇಕಿತ್ತು. ಫೋನ್ ಮಾಡಿದ್ದೆ. ಮೊದಲು ನಮ್ಮ ಮಾತು ನೆರೆಯ ಬಗ್ಗೆ ಇತ್ತು. ಮಾತು ಹಾಗೇ ಸಾಗುತ್ತಾ ಬ್ಲಾಗ್ಗಳ ಬಗ್ಗೆ ಬಂತು. ಆಗ ನನ್ನ ಮಿತ್ರನ ಧಾಟಿ ವ್ಯಂಗ್ಯದ ಕಡೆ ತಿರುಗಿತು.
ಎನ್ರಪ್ಪಾ ನಿಮ್ಮ ಬ್ಲಾಗ್ ಲೋಕ ಹ್ಯಾಂಗಿದೆ ಎಂದ. ಏನೋಪ್ಪಾ ಏನೋ ನಡಿತಿದೆ ಮತ್ತು ಏನೀನೋ ನಡಿತಿದೆ ಎಂದೆ. ಅಲ್ರಪ್ಪಾ ಇಲ್ಲಿ ಈ ರೀತಿ ನೆರೆ ಬಂದು ಜನಗಳು ಗೋನ್ಯಾಗೆ ಒದ್ದಾಡತ್ತಾ ಇದಾರ. ಒಂದು ಬ್ಲಾಗ್ನರು ಬರ್ದೆ ಇಲ್ಲಾ. ಅದ್ಯಾರೋ ತನ್ನ ಬ್ಲಾಗ್ ನಿಲ್ಸಿದಕ್ಕೆ ಆಕಾಶನೇ ಕೆಳಕ್ಕ ಬಿತ್ತು ಅನ್ನಾಂಗ ಹೊಯ್ಯಕ್ಯಂಡ್ರಿ. ಅನ್ನ ನೀಡೋರು ನೆಲ ಕಚ್ಚಿ ಹೋದರೆ ಒಬ್ಬರು ಬರಯಾಂಗ್ ಇಲ್ಲ.
ನನಗೆ ನಿಮ್ಮ ಬ್ಲಾಗಿಗಳನ್ನು ನೋಡಿದರೆ ಬಾಳಾ ಹಾಸ್ಯ ಅನ್ಸುತ್ತೆ. ಪತ್ರಿಕೋದ್ಯಮದಲ್ಲಿ ಒಳ್ಳೆ ಹೆಸರು ಮಾಡಿರೋ ಮಿತ್ರರು ಯಾರ್ಯಾರೋ ಕಮೆಂಟ್ ಹಾಕಿದಕ್ಕೆ ಬೇಸರ ಮಾಡಿಕೊಂಡು ಬ್ಲಾಗ್ ನಿಲ್ಲಿಸಿದರು ಎಂದು ಮತ್ತೊಂದು ಬ್ಲಾಗನ್ಯಾಗ ಬರೆದ್ರು. ಅಪಾಪಾ...ಬ್ಲಾಗ್ ಓದುಗರು ಹೋಯ್ಯಕೊಂಡ್ರು. ಕಾಶ್ಮೀರವನ್ನು ಪಾಕಿಸ್ಥಾನಕ್ಕೆ ಬರೆದುಕೊಟ್ಟ ಹಾಗೇ ಆಡಿದ್ರಪ್ಪಾ. ಯಾವುದೋ ಹೆಣ್ಣ ಮಗಳು ಬಾಳಾ ಚೋಲೋ ಬರಿತಿದ್ಲಂತೆ. ನನ್ನ ಬೆಂಗಳೂರು ಇತರ ಮಿತ್ರರು ಅವಳನ್ನು ಪಂಚ ಪತಿವೃತೆಯರೊಂದಿಗೆ ಮತ್ತೊಂದು ಪತಿವೃತೆ ಎನ್ನುವ ರೀತಿ ಬಿಂಬಿಸಿದರು. ಅವರ ಸ್ಥಿತಿ ಹ್ಯಾಂಗ್ಯಾಗಿತಪ್ಪಾ ಅಂದರ `ಸ್ಮರೆ ನಿತ್ಯಂ ಷದ ಕನ್ಯಾ ಎನ್ನುವ ಸ್ತಿತಿಗೆ ತಲುಪಿದರು. ಕೊನೆ ಅವಳನ್ನು ದೊಪ್ಪೆಮದು ಕೆಳಕ್ಕೆ ಕೆಡಗಿ ಅವಳನ್ನು ಆರೆಸ್ಸೆಸ್ ಮುಖವಾಣಿ ಎಂಬತೆ ಬಿಂಬಿಸಿದರು, ನಂತರ ಅವಲನ್ನು ಏನೆಲ್ಲಾ ಮಾಡಿದ್ರಪಾ ಕೊಳಕು ಜನ.
ನಮ್ಮ ಕಡಿ ಈಗ ಹ್ಯಾಂಗಾಗೈತಿ ಅಂದ್ರ ನೆರೆ ಸಂತ್ರಸ್ತ ಆಹಾರಕ್ಕೆ ಯಾವ ರೀತಿ ಪರಿ ತಪಿಸುತ್ತಿದ್ದರೆ ಎಂದರೆ ಕರಳು ಚಿವ್ ಅಂತತ್ತೈ. ಈ ಬ್ಲಾಗ್ ಎನ್ನುವುದು ಬೆಂಗಳೂರಿಂದ ನೆಲಮಂಗಲ ದಾಟಾಂಗಿಲ್ಲ. ಯಾರೋ ಬ್ಲಾಗಿಗಳು ಅಂತಿದ್ರಪಾ. ನನ್ನ ಬ್ಲಾಗನ್ನು ಸಾವಿರ ಜನ ನೋಡಿದ್ರು. ಈ ಲೇಖನಕ್ಕೆ ನೂರು ಹಿಟ್ ಆಯಿತು ಅಂತಾರೆ. ಏನೋ ಕಾರ್ಗಿಲ್ ಯುದ್ಧ ಮಾಡಿದ ಯೋಧರ ಹಾಗೆ. ಒಂದು ಅನ್ಯಾವನೋ ಹೇಳಿದ `ದಿನ ಪತ್ರಕೆಯ ಸಾಪ್ತಾಹಿಕ ಎನ್ನುವುದು ಅಪ್ರಸ್ತುತ. ಈಗೆನೀದ್ರು ಬ್ಲಾಗ್ ಮಾತ್ರ' ಅಂತ. ಅಲ್ರಿ ನಮ್ಮ ಆಪೀಸನ್ಯಾಗ್ ಇಪ್ಪತ್ ಮಂದಿ ಇದಾರ ಅದ್ರಾಗ 15 ಮಂದಿಗೆ ಬ್ಲಾಗ್ ಅಂದ್ರನ ಗೊತ್ತಿಲ್ಲ. ನಮ್ಮ ಅಗದಿ ಬೆಸ್ಟ್ ರಿಪೋರ್ಟರ್ಂಗ ಸ್ವಂತ ಮೇಲ್ ಐಡಿ ಇಲ್ಲ. ಯಾರೋ ನಿಮ್ಮ ಮೇಲ್ ಐಡಿ ಕೊಡು ಅಂದ್ರ ಅದೇನೊ www. ....com ಬರಕೊಳ್ರಿ ಅಂದ ಬಂದಾನ. ಇಂತ ಮಕ್ಳ ಇರೋವಾಗ ಈ ಬ್ಲಾಗ್ ಯಾವಾಂಗ ಬೇಕ್ರಿ? ನಮ್ಮಲ್ಲಿ ಒಬ್ಬ ರೈತ ನ್ಯಾಚುರಲ್ ಯೂರ್ಯ ಗೊಬ್ಬರಾ ಮಾಡ್ತಾನ ಅವನ ಬಗ್ಗೆ ಬರ್ದಾಗ ನೂರಾರು ಫೋನ್ ಕಾಲ್ಸ್ ಬಂದಾವ. ಬಾಳಟ ಮಂದಿ ಬಂದ ಹೋಗ್ಯಾರ. ಅಂದ್ರ ನಾವ್ ಏನ್ ಹೇಳ್ಬೇಕಾತ್ರಿ. ನೂರ್ಯಾರ್ ಮಂದಿ ನಮ್ಮ ರೈತನ್ನ ಹಿಟ್ ಮಾಡ್ಯಾರ್ ಅನ್ಬೋಕಾತ.
ನೆರೆ ಸಂತ್ರಸ್ತರಿಗೆ ಈ ಬ್ಲಾಗ್ನ ಮಂದಿಏನ್ ಮಾಡ್ಯಾರ್ರಿ? ಒಟ್ಟು ನಂದ ಹಾಂಗ.. ಇವಂದ ಹಿಂಗ.. ನಮ್ಮ ಬ್ಲಾಗ್ ಅಂತವರು ಬಂದಾರ.. ಇವ್ನ ಬ್ಲಾಗ್ಗೆ ಇಂತವರು ಬಂದ್ಯಾರ್.. ಅಂವ ಚೆಡ್ಡಿ, ಇಂವ ಕಮ್ಯುನಿಸ್ಟ್, ಇಂವ ಜನಿವಾರ ಹಾಕ್ಯುಂಡೆ ಬರ್ಯಾಕ್ ಕುಂತಾನ. ಸೋನಿಯಾ ಗಾಂಧಿನ ಬಿಜೆಪಿ ಸೇರಿಸಿ, ಆಡ್ವಾಣಿನ ಸಿಪಿ ಎಂಗೆ ಸೇರಿಸೋ ಮಂದಿನೆ ಅಲ್ಲಿದಾರ.
ಹೊತ್ತೊಗದ ಮಂದಿ ಹಿಂಗ ಮಾಡ್ತಾರ್. ಅಲ್ಲಿ ಒಂದು ಸ್ವಸ್ತ ಸಮಾಜ ನಿರ್ಮಾಣ ಆಗಬೇಕು. ರಚನಾತ್ಮಕ ವಿಮರ್ಶೆ ಇರಬೇಕು. ಅದಬಿಟ್ಟು ಬ್ಯಾಡದೆ ಹೋದ ಮಾಡಿಕೊಳ್ತಾ. ಬಾವಿಯೊಳಗಿನ ಕಪ್ಪೆ ತರ ಆಡ್ತಾರ. ಎನ್ ಮಂದಿನಪಾ ಇವರು. ಎನ್ನುತ್ತಾ ಮಿತ್ರ ಮಾತಿಗೆ ವಿರಾಮ ನೀಡಿದ ನಾನು ಅಂದೇ ನನ್ನ ಬ್ಲಾಗಿಗೆ ಒಳ್ಳೆ ಬರವಣಿಗೆ ಆತು ನಿನ್ನ ಮಾತು ಅಂತ.


ಸಣ್ಣ ಮಾಹಿತಿ ಉಷೆ ಉದಯ ಬ್ಲಾಗಿನಲ್ಲಿ ನೆರೆಯ ಬಗ್ಗೆ ಬರೆದಿದ್ದಾರೆ ಬ್ಲಾಗಿಗಳು ಸಂತೋಷ ಪಡಬಹುದು

Saturday, September 19, 2009

“ಸಾಲ ’ದ ಕತೆ

ಬೆಂಗಳೂರಿನ ಜಂಜಾಟ, ಏಕಾಂಗಿತನ ಸಾಕಾಗಿ ಹೋಗಿತ್ತು. ಅಂಖಡ ಒಂದು ವಾರ ರಜೆ ಹಾಕಿ ಊರಿಗೆ ಹೋಗಿದ್ದೆ. ಶಿವಮೊಗ್ಗ ದಾಟುತ್ತಿದ0ತೆ ಮಳೆಗಾಲದ ಇಫೆಕ್ಟ್ ಪ್ರಾರಂಭವಾಗಿತ್ತು.ಊರಿಗೆ ಹೋಗಿ ಇಳಿದೆ. ಜಡಿ ಮಳೆಯಲ್ಲ ಜಬ್ಬರ್ ಮಳೆ ನನ್ನನ್ನು ಸ್ವಾಗತಿಸಿತು. ಮಳೆ ನಿಲ್ಲಬಹುದೆಂಬ ನಂಬಿಕೆ ಇತ್ತು.
ನನ್ನ ನಂಬಿಕೆ ನೂರಕ್ಕೆ ನೂರು ಸುಳ್ಳಾಯಿತು. ಎಡಬಿಡದೆ ಜಡಿಮಳೆ ಸುರಿಯುತ್ತಲೇ ಇತ್ತು. ಯಾವ ಕಾರಣಕ್ಕೂ ಮನೆಯಿಂದ ಹೊರಬರಲಾರದ ಸ್ಥಿತಿ. ಹೊತ್ತು ಕಳೆಯಬೇಕಲ್ಲ?! ಹೆಬ್ಬಾಗಿಲ ಬಾಂಕನ್ನು ಬಿಸಿ ಮಾಡುವ ಯೋಚನೆ ಮಾಡಿದೆ.
ಸಾಮಾನ್ಯವಾಗಿ ನಮ್ಮ ಮನೆಯ ಬಾಂಕಿನ ಮೇಲೆ ಒಂದು ಕಡೆ ಅಮ್ಮಮ್ಮ( ಅಜ್ಜಿ), ಮತ್ತೊಂದು ಕಡೆ ನನ್ನ ಅಪ್ಪ ಕುಳಿತುಕೊಳ್ಳುವುದು ರೂಢಿ. ಆದರೆ ಅಮ್ಮಮ್ಮನಿಗೆ ಚಿಕೂನ್ ಗುನ್ಯ ಅಟಕಾಯಿಸಿಕೊಂಡಿತ್ತು. ಅದಕ್ಕಾಗಿ ಬಾಂಕೆ ಅಪ್ಪನೊಬ್ಬನೇ ವಾರಸುದಾರನಾಗಿದ್ದ. ನಾನು ಅಮ್ಮಮ್ಮನ ಜಾಗವನ್ನು ಆಕ್ರಮಿಸಿಕೊಂಡು ಅಪ್ಪನ ಜೊತೆ ಹರಟೆ ಹೊಡೆಯಲು ಕುಳಿತೆ. ನನ್ನ ಅಪ್ಪನ ಮಧ್ಯೆ ಎಲೆಅಡಿಕೆ ತಬಕು ಸ್ಥಾನ ಪಡೆದಿತ್ತು.
ನನ್ನ ಬೆಂಗಳೂರು ಜೀವನದ ಕಥೆಯನ್ನು ಹೇಳಲಿಕ್ಕೆ ಪ್ರಾರಂಭಿಸಿದೆ. ಯಾಕೋ ಅಪ್ಪನಿಗೆ ಇಷ್ಟವಾಗಲಿಲ್ಲ. ನನು ಬಿಡಬೇಕಲ್ಲ?`ಮೊದಲೇ ಆರಿಂಚಿನ ಮೊಳೆ ನಾನು' ಹೊಡೆಯದೇ ಬಿಟ್ಟೆನೆ? `ಅಪ್ಪ ಏನೇ ಹೇಳು, ಈ ಪೇಪರ್ ಕೆಲ್ಸಾ ಮಾತ್ರ ಬಾಳಾ ಗಮ್ಮತ್ತು ಇರ್ತು' ಎಂದು ಇಲ್ಲಿನ ಕೆಲವು ಪೋಲಿ ಜೋಕುಗಳನ್ನು ಹೇಳಿದೆ. ಆದರೆ ಅಪ್ಪ ನಗೆಯಾಡಲಿಲ್ಲ. ಹತ್ತಿರ ಹೋಗಿ ಕುಳಿತೆ. `ಎಂತಾ ಯೋಚನೆ ಮಾಡ್ತಾ ಇದ್ದೆ ಅಪ್ಪ' ಎಂದೆ.
ಅವನು ಖಿನ್ನ¬ನಾಗಿ ` ಆ ಇಂವ ಆತ್ಮಹತ್ಯೆ ಮಾಡ್ಕ್ಯ ಬಿಡ್ನಲಾ' ಎಂದ ನನಗೆ ಯಾರು ಎಂದು ಗೊತ್ತಾಗಲಿಲ್ಲ. `ಯಾರು' ಎಂದೆ. `ಅವ್ನೆ.. ಗಮಿನಗುಡ್ಡದಂವ', `ಓ.. ಸರಿ ಸರಿ ನಾನು ಸುದ್ದಿ ನೋಡಿದ್ದಿ. ನಂಗವು ಮೊದಲನೇ ಪುಟಕ್ಕೆ ಸುದ್ದಿ ಹಾಕಿದ್ಯ' ಎಂದೇ. ` ಹೌದಾ!.. ಆದ್ರೆ ಸಾಯಕಾಯಿತ್ತಿಲೆ, ಐದು ಲಕ್ಷ ಲೋನ್ಗೆ ಹೆದರಿ ಸತ್ತರೆ ಹೆಂಡತಿ ಮಕ್ಕಳ ಗತಿ ಎಂತು?. ಮತ್ತೊಂದು ಈ ಬಾರಿ ಇಂವ ಸ್ಯಾಂಪಲ್, ಮುಂದಿನ ವರ್ಷ ಅಡಿಕೆ ಸ್ಥಿತಿ ಹಿಂಗೆ ಇದ್ರೆ ಸುಮಾರಷ್ಟು ಜನ ಆತ್ಮಹತ್ಯೆ ಮಾಡಿಕೊಂಬದ್ರಲ್ಲಿ ಅನುಮಾನವೇ ಇಲ್ಲೆ' ಎಂದು
ಅಪ್ಪನ ಮಾತು ನನಗೆ ಹೊಟ್ಟೆಯಲ್ಲಿ ಬೆಂಕಿಯನ್ನು ಇಟ್ಟ ಹಾಗೇ ಆಯಿತು. `ಷೇ... ಅನ್ನದಾತನ ಸ್ಥಿತಿಯೇ ಹಿಂಗಾದ್ರೆ ದೇಶದ ಕತೆ ಎಂ. ಐಟಿ ಉದ್ಯಮ ಬೆಳೆದರೆ ಹೊಟ್ಟೆ ತುಂಬ್ತ.. ಸ್ಥಿತಿವಂತರು ಎಂದುಕೊಳ್ಳುವ ಅಡಿಕೆ ಬೆಳೆಗಾರರೇ ಸತ್ತರೆ, ಇನ್ನೂ ಭತ್ತ, ರಾಗಿ, ಬೆಳೆಯುವವರ ಕತೆ ಎನಾಗಬಹುದು.. ಹೀಗೆ ನಮ್ಮ ಕತೆ ಸಾಗಿತ್ತು. ಅಷ್ಟೋತ್ತಿಗೆ ಬಕ್ಕೇಮನೆ ಮಧಣ್ಣ ಬಂದ. ಅವನು ಬಂದರೆ ಒಂದಷ್ಟು ಗಮ್ಮತ್ತು ನಿಕ್ಕಿ.
ಮಧಣ್ಣನಿಗೆ 38 ವರ್ಷ ಆಗಿರಬಹುದು. ಆದರೆ ಕತೆ ಹೇಳು ಸ್ಟೈಲು 60 ಪ್ರಾಯದವರ ತರಹ. ತುಂಬಾ ವಿಡಂಭಣೆ ಇರುತ್ತದೆ. ಇರಲಿ, ಬಂದವರಿಗೆ ಆಸ್ರಿಗೆ (ಉಪಚಾರ) ಕೇಳುವ ಪದ್ಧತಿ ಬಿಡಲಿಕ್ಕೆ ಆಗುತ್ಯೆ? `ಚಹಾನೆ' ಈ ಸಮಯಕ್ಕೆ ಬೆಚ್ಚಗೆ. ಮಳೆ ಬೇರೆ ಬರುತ್ತಿದೆ ಎಂದು ತಿರ್ಮಾನಿಸಿ ಚಹಾನೆ ಓಕೆ ಎಂದಾಯಿತು. ಚಹಾ ಸೇವನೆ ಮಾಡುತ್ತಾ ಮಧಣ್ಣ ` ನೆಂಟರ ಮನೆಗೆ ಹೋದಲ್ಲಿ ಈ ಬಾಯಾರಿಕೆ ಕೇಳುವ ಪದ್ಧತಿ ಏಷ್ಟು ಉತ್ತಮವಾದದ್ದು. ಅಲ್ಲಾ ಅವರು ಕೇಳುವುದುದ ಪದ್ದತಿ. ಬೇಡ ಬೇಡ ಎನ್ನುವುದು ಸೌಜನ್ಯ. ಆಸ್ರಿಗೆ ಕೊಟ್ಟ ಮೇಲೆ ಕುಡಿಯುವುದು ಕರ್ತವ್ಯ' ಎನ್ನುವ ಮಾತಿನೊ0ದಿಗೆ ಕತಾಪೂರ್ವ ಪಿಠೀಕೆ ಹಾಕಿದ. ಹಾಗೇ ಕತೆ ಹೇಳುತ್ತಾ.. ಹೇಳುತ್ತಾ..`ಅಚ್ಚಣ್ಣ' ಎನ್ನುವ ಹಿರಿ¬ಯನ ಕತೆ ಪ್ರಾರಂಭವಾಯಿತು.
ಈ ಅಚ್ಚಣ್ಣ ಹಾಲ್ಕಣಿಯವನು. ತುಂಬಾ ಒಳ್ಳೆಯವ ಮತ್ತು ಅಷ್ಟೇ ಜಿಪುಣ. ಇವನ ಜಿಪುಣತನಕ್ಕೆ ಒಂದು ಉದಾಹರಣೆ ಎಂದರೆ `ಇವನು ಪ್ಲಾಸ್ಟಿಕ್ ಪಾದರಕ್ಷೆ ಹಾಕುತ್ತಿದ್ದರಂತೆ. ಎರಡನೇ ವರ್ಷಕ್ಕೆ ಇದು ನಾರಿನ ಪಾದರಕ್ಷೆಯಾಗಿರುತ್ತಿತ್ತಂತೆ. ಅದೇ ಚಪ್ಪಲಿ ಹರಿದ ಹಾಗೆ ಹೊಲಿಗೆ ಹಾಕಿ ಹಾಕಿ ಮೂರ್ನಾಲ್ಕು ವರ್ಷ ಅದೇ ಚಪ್ಪಲಿ ಬಳಸಿತ್ತಿದ್ದರಂತೆ. ಇನ್ನೂ ಇವರು ಉಟ್ಟುಕೊಳ್ಳುವ ಪಾಣಿ ಪಂಜೆ ಬಿಳಿಯ ಬಣ್ಣದ ಬದಲು ಕಪ್ಪು ಬಣ್ಣದಾಗಿರುತ್ತಂತೆ. ಇಂತಿಪ್ಪ ಅಚ್ಚಣ್ಣ ತುಂಬಾ ಹಣವನ್ನು ಕೂಡಿ ಹಾಕಿಟ್ಟಿದ್ದನಂತೆ. ಈ ಹಣವನ್ನೆಲ್ಲ ಹಿಂದುರಿಗಿಸದ ವ್ಯಕ್ತಿಳಿಗೆ ಬಡ್ಡಿಗೆ ನೀಡಿ ದಿವಾಳಿಯಾದನಂತೆ. ಒಳ್ಳೆಯವರಿಗೆ ಎಂದೂ ಹಣ ನೀಡಿ ಗೊತ್ತಿರಲಿಲ್ವಂತೆ. ದೊಡ್ಡ ಮನೆ ಇದ್ದದ್ದು ಹಿಸ್ಸೆ ಆಗಿ ನಾಲ್ಕು ಮನೆಯಾಯ್ತಂತೆ.
ಇವನ ಕತೆ ಹೇಳಿ ಮುಗಿಸುವವರೆಗೆ ಬಾವಯ್ಯ ಬಂದ. ಇವನು ನನ್ನ ಅಪ್ಪನಿಗೆ ಬಾವಯ್ಯ. ಆದರೆ ಎಲ್ಲರಿಗೂ ಬಾವಯ್ಯನೆ ಆಗಿದ್ದ. ಅದು ಇದು ಕತೆ ಆದ ನಂತರ ಕೇರಿ ಊರುಗಳ ಕತೆ ಪ್ರಾರಂಭವಾಯಿತು.
ಹರೀಶೆ ಒಂದೇ ಕೋಳಲ್ಲಿ ಐವತ್ತು ಮನೆ ಇದ್ದಿಕ್ಕೂ ಅಲ್ದನಾ? ಎಂಬ ಪ್ರಶ್ನೆಯನ್ನು ಬಾವಯ್ಯ ಬಿಸಾಕಿದ.
ಕೋಡಳ್ಳಿ( ಹೆಸರು ಬದಲಿಸಿದೆ)ನು ಹಾಂಗೆಯಲಾ. ಇಪ್ಪತ್ತೈದು ಮನೆ ಸಾಲಾಗಿ. ಎದುರಿಗೆ ತೋಟ. ಆ ಊರು ಮಜಾ ಇದ್ದು. ಆದ್ರೆ ಈ ಊರಲ್ಲಿ ಎಲ್ಲರ ಮನೆ ಬಚ್ಚಲು (ಬಾತ್ ರೂಂ ) ತೋಟ! ಸಾಲಾಗಿ ಮನೆ, ಸಾಲಾಗಿ ಬಚ್ಚಲು. ಊರಿಗೆ ಯಾರೇ ನೆಂಟರು ಬಂದರೂ ಮಧ್ಯಾಹ್ನ ಜಗುಲಿ ಮೇಲೆ ಕುಳಿತ್ಕತ್ತಿದ್ದರು. ಯಂತಕೆ ಹೇಳು? ಎಂಬ ಪ್ರಶ್ನೆಯನ್ನು ಮಧಣ್ಣ ಇಟ್ಟ. ಎಲ್ಲರ ಮುಖದಲ್ಲೂ ಕೊಶ್ಚನ್ ಮಾರ್ಕ್.
ಅಲ್ದಾ ಹೆಂಗಸರೂ ಸ್ನಾನಕ್ಕೆ ಹೋಪ ಟೈಮ್ ಅದೇ ಅಲ್ದನಾ' ಎಂದ. ಎಲ್ಲರೂ ಹೊಟ್ಟೆ ಹುಣ್ಣಾಗುವವರೆಗೆ ನಕ್ಕೆವು. ತೋಟದಲ್ಲಿ ಬಚ್ಚಲು ಇದ್ರೆ ಯಾರ್ಯಾರೂ ಹೆಂಗಸರು ಸ್ನಾನ ಮಾಡದು ನೋಡಿ ಮಜಾ ತಗತ್ವನ ಎಂಬ ಶರಾವನ್ನು ಬರೆದ.
ಹೀಗೆ ಕತೆ ಸಾಗುತ್ತಾ ಸಾಗುತ್ತಾ ಪುನಃ ಸಾಲದ ವಿಚಾರಕ್ಕೆ ಬಂದು ನಿಂತಿತು.
`ಸಾಲ' ಎಂಬುದು ಇಷ್ಟು ಭಯಾನಕವಾಗಿ ಕಾಡ ತೊಡಗಿದೆ ಎನ್ನುವುದು ಅರಿವಾದಾಗ ಬಹಳ ಬೇಸರವಾಯಿತು. ಆದ್ರೆ ಎನ್ಮಾಡೋದು ಸಾಲ ಮಾಡದೇ ಬದುವ ಮಂದಿ ಊರಿಗೆ ಒಬ್ಬರೋ.. ಇಬ್ಬರೋ.. ಅಷ್ಟೇ ಉಳಿದವರೆಲ್ಲ ಸಾಲದಲ್ಲೇ ಸಾಯ ಬೇಕಲ್ಲ.
ಸಾಲ... ಸಾಲ.. ಸದಾ ಹಸನ್ಮುಖಿಯಾಗಿ ಅನ್ನ ನೀಡುವ ರೈತನ ಊಟದ ಬಟ್ಟಲಿನಲ್ಲಿ ವಿಷ , ಹಗ್ಗ ಬಂದು ಕುಳಿತಿದೆ. ಅದನ್ನು ಬದಿಗಿಟ್ಟು ಅನ್ನವನ್ನೇ ನೀಡುವ ಕೆಲಸ ಆಗಬೇಕಿದೆ ಪರಿಹಾರವೇನು.

FEEDJIT Live Traffic Feed