Friday, November 11, 2011

ಕೊಳನೂದೋ...ಗೋ...


ಬೋಳು ಗುಡ್ಡದ ಅಣೆಯಲ್ಲಿ ಎರಡು ಜೀವಗಳು ಹೊರಳಾಡುತ್ತಿತ್ತು, ಒದ್ದಾಡುತ್ತಿತ್ತು. ಮೇಲಿಂದ ಮಳೆ, ಆದರೂ ಮೈಯೆಲ್ಲಾ ಬೇವರಿದೆ. ಏದುಸಿರು ಬಿಡುತ್ತಿವೆ ಅವು. ನೋವು... ಎಂಥಾ ನೋವು ಅದು? ಸುಖದ ನೋವು. ಮಾಚಿಯ ಮೈತಾಗಿದಾಗ ಶಾಕ್ ನೀಡಿದ ಅನುಭವ. ಮೊದಲ ಸುಖ, ಮೊದಲ ಸಲ ಪುರುಷತ್ವ ಪ್ರದರ್ಶನ, ಕನ್ಯೆತನ ನಾಶ. ಮಳೆಯ ಚಳಿಗೆ ನಡುಗದ ದೇಹ, ತಂಗಾಳಿಗೂ ತಣಿಯದ ಶಾಖ, ಮಳೆಯ ನೀರು ಸುರಿದರೂ ಆರದ ದಾಹ. ಅದೊಂದು ಮಧುರ ಅನುಭೂತಿ. ಮಧುವನ್ನು ಹೀರುವ ಭೃಂಗದಂತೆ ಅವಳ ದೇಹದ ಸರ್ವವನ್ನು ಹೀರಿಬಿಟ್ಟಿದ್ದ. ಮುಂದೊಂದು ದಿನ ನಾಲ್ಕು ಗೋಡೆಯ ನಡುವೆ, ಹೂ ಹಾಸಿದ ಪಲ್ಲಂಗದಲ್ಲಿ ಪವಡಿಸಿ ಅನುಭವಿಸುವ ಸುಖ ಬೋಳು ಗುಡ್ಡೆಯ ಬಿಕ್ಕೆ ಗಿಡಗಳ ನಡುವೆ ಅನುಭವಿಸಿ ಆಗಿತ್ತು. ಶಂಕರ, ಮಾಚಿ ಹಾವು ಏಣಿ ಆಟದಲ್ಲಿ ತೊಡಗಿದ್ದಾರೆ ಎಂದು ಆಕಾಶ ಕೂಗಿ ಹೇಳಿತು, ಗಾಳಿ ಮಾತಾಡಿತು.
-----
25 ವರ್ಷದ ಹಿಂದೆ ಮಳೆಗಾಲದ ನಾಲ್ಕು ತಿಂಗಳು ಅನುಭವಿಸಿದ ಅನುಭವ ಇಂದು ಬೆಂಗಳೂರಿನ ಸಹಸ್ರಾರು ಜನರ ನಡುವೆ ಕಳೆದು ಹೋಗುವಾಗ ನೆನಪಾಗುತ್ತದೆ. ಎಲ್ಲೋ ಅಡಗಿ ಕುಳಿತಿದ್ದ ಹಿಂದಿನ ನೆನಪು ಆಗಾಗ್ಗೆ ಮರುಕಳಿಸಿ ಮೂಡ್್ಆಫ್ ಮಾಡುತ್ತದೆ.
ಅವತ್ತು ಎಸ್ಸೆಸ್ಸೆಲ್ಸಿ ನಪಾಸಾಗಿ ಮನೆಯ ಮೆತ್ತಿಯ ಮೂಲೆಯಲ್ಲಿ ಕುಳಿತು ಬಿಕ್ಕಿ ಬಿಕ್ಕಿ ಅಳುತ್ತಿದ್ದಾಗ, 'ದನ ಕಾಯಬಹುದಂತೆ. ಯಾಕೆ ಸುಮ್ನೆ ಅತ್ತು ಕಣ್ಣೀರನ್ನು ಹಾಳು ಮಾಡಿಕೊಳ್ತೀಯಾ?' ಎಂದು ದೊಡ್ಡಪ್ಪ ವ್ಯಂಗ್ಯ ರೂಪದಲ್ಲಿ ಸಮಾಧಾನ ಮಾಡಿದ್ದರು. ಅವರ ಅಣತಿಯಂತೆ ದನಕಾಯಲು ಅಣಿಯಾಗಿಯೂ ಆಯ್ತು.
ಹೊಸ ಕರೆ ಕಟ್ಟಿದ ಸೊಪ್ಪುಕಂಬಳಿ, ಕತ್ತಿ, ಗಂಬೂಟು ಎಲ್ಲವೂ ಬಂತು.
ಮೊದಲ ದಿನ ದನಕಾಯಲು ಹೊರಟಿದ್ದು ಹೇಗಿತ್ತು ಅಂದರೆ ದಿಗ್ವಿಜಯ ಯಾತ್ರೆಗೆ ಹೊರಟ ಅರ್ಜುನನಂತೆ; ಸಡಗರದಮಿತ ಸಂಭ್ರಮದಿಂದ...
-----
ಜೋರು ಮಳೆ. ಬೋಳು ಗುಡ್ಡಗಳಲ್ಲಿ ಹಸಿರು ಚಿಗುರೊಡೆದಿದೆ. ಹತ್ತಿರ ಹತ್ತಿರ ಜಾನುವಾರುಗಳು ಮೇಯಲಿಕ್ಕೆ ಅನುಕೂಲವಾಗುವಷ್ಟು. ಯಾರೋ ನೆಟ್ಟಿದ್ದಾರೆ ಎನ್ನುವಷ್ಟು ಚೆಂದವಾಗಿ ಬೆಳೆದ ಬಿಕ್ಕೆಹಣ್ಣಿನ ಗಿಡಗಳು, ಮಳೆ ನೇರಳೆ ಗಿಡಗಳು, ಅಲ್ಲಲ್ಲಿ ಉದ್ದನೆಯ ಹುಲ್ಲಿನ ಮೇಲೆ ಬಿದ್ದ ಮಳೆ ನೀರಿನ ದೊಡ್ಡ ಹನಿ, ಗರಿ ಬಿಚ್ಚಿ ನಲಿವ ನವಿಲು, ಚಂಗನೆ ಜಿಗಿದೋಡುವ ಚಿಗರೆ ಮರಿಗಳು, ನಮ್ಮ ಮನೆಯ ದೊಡ್ಡ ಎಮ್ಮೆಯಂತೆ ಕಾಣುವ, ಆದರೆ ಹಣೆ ಚಂದ್ರಿ, ಗೊಂಡೆ ಬಾಲವುಳ್ಳ ಕಾಡೆಮ್ಮೆ... ಎಂಥ ಚೆಂದ ಪರಿಸರ?
-----
ತಲೆ ಮೇಲೆ ಕಂಬಳಿ ಕೊಪ್ಪೆ, ಹೆಗಲ ಮೇಲೆ ಬುತ್ತಿ ಕಟ್ಟಿಕೊಂಡ ಟವೆಲ್, ಒಂದು ಕೈಯಲ್ಲಿ ಕೋಲು, ಮತ್ತೊಂದು ಕೈಯಲ್ಲಿ ಕತ್ತಿ, ಬಾಯಲ್ಲಿ ಎಳೆಯ ಎಲೆ, ನಾಟಿ ತಂಬಾಕಿನೊಂದಿಗೆ ಹಾಕಿದ ಕವಳ. ಕೆಲಸ ಮತ್ತು ಹುದ್ದೆಗೆ ಸರಿಯಾದ ವೇಷಭೂಷಣದೊಂದಿಗೆ ದನವನ್ನು ಬಿಟ್ಟುಕೊಂಡು ಗುಡ್ಡದತ್ತ ಪ್ರಯಾಣ ಬೆಳೆಸಿದೆ.
ನನಗಿಂತ ಚೆನ್ನಾಗಿ ದನಗಳಿಗೆ ಗೊತ್ತಿತ್ತು ಮೇವು ಇರುವ ಜಾಗ ಯಾವುದೆಂದು. ಅದೊಂದು ರೀತಿ ಗಜಪಥ ಇದ್ಹಾಂಗೆ 'ದನಪಥ'. ಈ ದಾರಿಯಲ್ಲಿ ಸಾಗುವಾಗ ಕಾಡು ಸಿಗುತ್ತದೆ. ಮಳೆಗಾಲವೂ ಪ್ರಾರಂಭವಾಗಿತ್ತು. ಕಾಡಿನ ಒಳಗೆ ಹೋದಂತೆ ನೀರವತೆ ಹೆಚ್ಚಾಗುತ್ತಿತ್ತು. ಆ ಮೌನವನ್ನು ಸೀಳಿ ಕಪ್ಪೆಗಳ ವಟವಟ ವಟರ್, ಜೊತೆಯಲ್ಲಿ ಮಳೆ ಜಿರಳೆಯ ಜೀರ್್ರ್... ಎನ್ನುವ ಕರ್ಕಶ ಶಬ್ದ. ನನಗೊಂದು ರೀತಿಯ ಭಯ ಪ್ರಾರಂಭವಾಗಿತ್ತು. ಮನೆ ಕಡೆ ತಿರುಗೋಣವೇ..? ಸಾಧ್ಯವಿಲ್ಲ. ಮುಂದೆ ಎಷ್ಟು ದೂರ ಕಾಡಿದೆ ಎನ್ನುವುದು ನನಗೆ ಗೊತ್ತಿರಲಿಲ್ಲ. ಆದರೆ ದನಗಳಿಗೆ ಗೊತ್ತಿತ್ತು. ಅವು ಯಾವ ಅಡ್ಡಿ ಆತಂಕಗಳಿಲ್ಲದೆ ಸಾಗುತ್ತಿದ್ದವು. ಕತ್ತಲೆ ಕಾನು ಇನ್ನೇನು ಕಳೆಯುತ್ತಿದೆ ಎನ್ನುವಂತೆ ಬೆಳಕು ಜಾಸ್ತಿಯಾಗುತ್ತಿತ್ತು.
ಅಬ್ಬಾ! ಅಂತೂ ಬೋಳು ಗುಡ್ಡ ತಲುಪಿಯಾಯ್ತು. ಮತ್ತೊಂದು ಕಡೆಯಿಂದ ನಾಲ್ಕಾರು ದನಗಳು ಇತ್ತ ಕಡೆಯೇ ಬರುತ್ತಿದ್ದವು. ಅವುಗಳ ಹಿಂದೆ ಬರುತ್ತಿದ್ದ ಲಚ್ಚ. ನಿಜವಾದ ಗೋಪಾಲಕ ಅಂದರೆ ಈತನೇ!
ಲಚ್ಚನ ಬಗ್ಗೆ ಹೇಳದೆ ಮುಂದೆ ಹೋಗಲಿಕ್ಕೆ ಆಗುವುದೇ ಇಲ್ಲ. ಕಾರಣ ಈತನ ವ್ಯಕ್ತಿತ್ವ. ಜೀವಂತ ವೃತ್ತ ಪತ್ರಿಕೆ ಎಂದು ಕರೆದರೆ ಅತಿಶಯೋಕ್ತಿಯಲ್ಲ. ಸುತ್ತಲ ಹತ್ತು ಊರುಗಳ ಸುದ್ದಿಯೂ ಇವನ ಚಿತ್ತ ಭಿತ್ತಿಯಲ್ಲಿ ಅಚ್ಚಾಗಿರುತ್ತಿತ್ತು. ಯಾರ ಮನೆಯ ಅಡಕೆ ತೋಟಕ್ಕೆ ಕೊಳೆ ರೋಗ ಬಂದಿದೆ? ಮಳೆಗಾಲ ಬಂದರೂ ಮಾರ್ಕೇಟಿನಲ್ಲಿ ಅಡಕೆಯನ್ನು ಯಾರು ಶಿಲ್ಕು ಇಟ್ಟಿದ್ದಾರೆ? ಯಾರು ಕಾಳುಮೆಣಸು ಹೆಚ್ಚು ಬೆಳೆಯುತ್ತಾರೆ? ಯಾರೊಂದಿಗೆ ಯಾರ ಅಫೇರ್ ಇದೆ? ಯಾವ ಮನೆ ಹುಡುಗಿ ಯಾರೊಂದಿಗೆ ಲವ್ ಮಾಡುವುದರಲ್ಲಿ ತಲ್ಲಿನಳಾಗಿದ್ದಾಳೆ? ಅಬ್ಬಬ್ಬಾ! ಒಂದಲ್ಲಾ, ಎರಡಲ್ಲಾ ಕಂತೆ ಕಂತೆ ಕತೆಗಳನ್ನು, ನಿತ್ಯ ವರ್ತಮಾನಗಳನ್ನು ಲಚ್ಚ ಲೋಚ ಲೋಚನೆ ಹೇಳಬಲ್ಲ.
ಆದರೆ ಈತ ಮಾತನಾಡುತ್ತಿರಲಿಲ್ಲ. ಅರೆ! ಇಷ್ಟೆಲ್ಲ ಹೇಳುವ ಈತನ್ಯಾಕೆ ಮಾತಾಡುತ್ತಿಲ್ಲ ಎನ್ನುತ್ತಾನೆ ಅಂದುಕೊಳ್ಳಬೇಡಿ. ಈತನಿಗೆ ಮಾತು ಸ್ಪಷ್ಟವಾಗಿ ಆಡಲಾಗುವುದಿಲ್ಲ. ತನ್ನ ಆಪ್ತರು ಎನ್ನುವವರೊಂದಿಗೆ ಮಾತ್ರ ಮಾತನಾಡುತ್ತಾನೆ; ಸಾಕು ಎನ್ನುವವರೆಗೆ. ಪಕ್ಕದ ಊರು. ಸಾತ್ವಿಕ ಮನುಷ್ಯ.
ಇದು ಇವನ ಅಡ್ರೆಸ್; ಆದರೆ ಡ್ರೆಸ್ಸಿನ ಬಗ್ಗೆ ಹೇಳಲೇಬೇಕು.
ಶಾಂತ ಸ್ವಭಾವದ ಲಚ್ಚನ ಕಂಡರೆ ಎಲ್ಲರಿಗೂ ಭಯ. ಅದರಲ್ಲೂ ಹೆಂಗಸರು ಬೆಚ್ಚಿ ಬೀಳುತ್ತಿದ್ದರು. ಶಾಲಾ ಹೆಣ್ಮಕ್ಕಳು ಲಚ್ಚನನ್ನು ಕಂಡರೆ ಪಟ್ರಾ ಬಿದ್ದು ಓಡುತ್ತಿದ್ದರು. ಇದಕ್ಕೆ ಕಾರಣ ಇವನ ಡ್ರೆಸ್ಸು. ಆಶ್ಚರ್ಯವಾಗಬಹುದು, ಆದರೂ ಸತ್ಯದ ವಿಚಾರ. ಆರಡಿ ಎತ್ತರದ ಎದ್ದಾಳು. ಮೊಳ ಉದ್ದ ಹರಡಿದ ಗುಂಗರು ಕೂದಲು; ಜೋಗಿ ಸಿನಿಮಾದಲ್ಲಿ ಶಿವಣ್ಣನ ಕೂದಲು ಇದ್ಹಾಂಗೆ. ಇಡೀ ಶರೀರಕ್ಕೆ ಒಂದೇ ಅಂಗಿ. ಅಂದರೆ ಒಳ ಉಡುಪಾಗಲಿ, ಕೆಳ ಉಡುಪಾಗಲಿ ಏನೂ ಇರುತ್ತಿರಲಿಲ್ಲ. ಅಂಗಿಯೋ ತೊಡೆಯವರೆಗೆ ಮಾತ್ರ ಇರುತ್ತಿತ್ತು. ಇದು ಹೆಂಗಸರ ಹೆದರಿಕೆಗೆ ಕಾರಣವಾದ ಏಕೈಕ ಅಂಶ!
----
ಲಚ್ಚನೊಡನೆ ನನ್ನ ದನ ಕಾಯುವ ಬದುಕು ಸಾಗಿತ್ತು. ಮೊದಮೊದಲು ನಾನು, ಲಚ್ಚ, ಇಪ್ಪತ್ತು ದನಗಳು ಮಾತ್ರ ಊರ ಸುತ್ತಲಿನ ಸಮಸ್ತ ಗುಡ್ಡಕ್ಕೆ ಒಡೆಯರು ಎಂದು ನಾನು ತಿಳಿದುಕೊಂಡಿದ್ದೆ. ಅದು ಸುಳ್ಳಾಯಿತು. ಬಂಡಾರ್ಯಕೇರಿ ತಿಮ್ಮ, ಕಂಚಿಕೊಪ್ಪ ಮಾದೇವಿ, ಬಾಳೇಗದ್ದೆ ಮಾಚಿ, ಗುಡ್ಡೇಕೊಪ್ಪ ಗೂನ ಗಣಪ... ನಮ್ಮ ಜೊತೆ ಇಷ್ಟೆಲ್ಲ ಮಂದಿ ಇದ್ದರು.
ಆಗಷ್ಟೇ ಎಸ್ಸೆಸ್ಸೆಲ್ಸಿ ಮುಗಿದ ನನಗೆ ಧ್ವನಿ ಒಡೆದಿತ್ತು. ವ್ಯಕ್ತಪಡಿಸಲಾಗದ ಭಾವನೆ. ರಾತ್ರಿ ಬೆಳಗಾಗುವುದರೊಳಗೆ ಹಾಕಿದ್ದ ಚೊಣ್ಣ ಬೀಗಿದ ಅನುಭವ, ಕೆಲವೊಮ್ಮೆ ಒದ್ದೆಯೂ ಆಗಿರುತ್ತಿತ್ತು ಅನ್ನಿ. ಅದು ಬಿಡಿ, ನಿಜವಾದ ಮಜಾ ಪ್ರಾರಂಭವಾಗಿದ್ದೆ ದನಿಗುಡ್ಡೆಯಲ್ಲಿ. ಅವತ್ತು ಲಚ್ಚ ಇಲ್ಲ; ತಿಮ್ಮ, ಮಾದೇವಿ, ಗೂನ ಗಣಪ ಯಾರು ಇನ್ನೂ ಬಂದಿರಲಿಲ್ಲ. ನಾನು ಮಾಚಿ ಇಬ್ಬರೇ.
ಎಷ್ಟು ಚೆನ್ನಾಗಿ ಕಾಣುತ್ತಿದ್ದಳು ಅವಳು ಅವತ್ತು. ಅಡಿಯಿಂದ ಮುಡಿಯವರೆಗೆ ತಾಮ್ರವರ್ಣ. ಬುಗರಿಯೆದೆ. ಅಷ್ಟಗಲದ ಕಪ್ಪನೆ ಕಣ್ಣು, 'ಬಾ ಬಾ' ಎಂದು ಕರೆಯುವಂತೆ ಭಾಸವಾಗುತ್ತಿತ್ತು. ಯಾವತ್ತೂ ಆಗದಿದ್ದ ಪುಳಕ.
ಇಷ್ಟು ದಿನ, 'ನನ್ನೊಳು ನಾ, ನಿನ್ನೊಳು ನೀ' ಎನ್ನುತ್ತಿದ್ದೆವು. ಆದರಿಂದು ನನಗೆ ಅವಳು, ಅವಳಿಗೆ ನಾನು ಒಲಿದಾಗಿತ್ತು. 'ನನ್ನೊಳು ನೀ, ನಿನ್ನೊಳು ನಾ' ಆಗಿ ಪರಿವರ್ತನೆಯಾಯಿತು. ನಮ್ಮ ಮನೆಯ ಬೆಳ್ಯಾ ಹೋರಿ, ಮಾಚಿ ಮನೆಯ ಸುಂದರಿ ದನದ ಬೆನ್ನು ಹತ್ತಿಯಾಗಿತ್ತು. ಪರಿವರ್ತನೆ ಅಂದರೆ ಇದೇ ಆಗಿರಬಹುದು ಎನ್ನುವುದಾಗಿಯೂ ನನಗೆ ಅನಿಸಿತು.
------
ಈ ನಡುವೆ ಬಿಕ್ಕೆ, ಹಣ್ಣು ನೇರಳೆ ಹಣ್ಣುಗಳ ಸವಿಯೊಂದಿಗೆ ನಾನು ಪುಸ್ತಕ ಓದುವುದನ್ನು ರೂಢಿ ಮಾಡಿಕೊಳ್ಳುತ್ತ ಬಂದೆ. ಸ್ಪೈ, ಕ್ರೈಂ, ಅನಂತರಾಮ್ ಅವರ ಪತ್ತೇದಾರಿ ಕಾದಂಬರಿಯಿಂದ ಪ್ರಾರಂಭವಾದ ಓದು, ಭೈರಪ್ಪ, ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ಯಂಡಮೂರಿ, ತರಾಸು ಪುಸ್ತಕಗಳು ಕೈಗೆ ಸಿಕ್ಕಿದ್ದು, ಊರ ಲೈಬ್ರರಿಯಲ್ಲಿ ದೊರೆತಿದ್ದು... ಯಾವುದು ಸಿಕ್ಕಿತೋ ಅದನ್ನು ಓದಿದೆ.
ಬುದ್ಧನಿಗೆ ಬೋಧಿವೃಕ್ಷದ ಕೆಳಗೆ ಜ್ಞಾನೋದಯವಾದರೆ, ನನಗೆ ದನಿಗುಡ್ಡೆಯಲ್ಲಿ. ಅರೆ! ಎಸ್ಸೆಸ್ಸೆಲ್ಸಿ ನಪಾಸಾದ ವಿಷಯ ಓದಿ ಪಾಸು ಮಾಡಬಹುದಲ್ಲ? ಮನಸ್ಸಾಯಿತು, ಓದಲಿಕ್ಕೆ ತೊಡಗಿದೆ. ಮಾಚಿ ಮನಸ್ಸಿಂದ ಮರೆಯಾಗುತ್ತ ಸಾಗಿದಳು. ಅಕ್ಟೋಬರ್ನಲ್ಲಿ ಪರೀಕ್ಷೆ ಬರೆದೆ.
ಅಯ್ಯೋ.. ಅಮ್ಮಾ... ನಾ ಪಾಸಾದೆ....!
ನನ್ನ ಓದಿನ ಚಟ ಎಷ್ಟಾಯಿತೆಂದರೆ ತಿಮ್ಮ ಹೊಸ ಹರಟೆ ಹೇಳುವುದನ್ನು ಬಿಟ್ಟ. ಮಾದೇವಿ, ಗೂನ ಗಣಪ ದೂರದ ಆಂಟೆ ಕಡೆ ದನ ಮೇಯಲಿಕ್ಕೆ ಹೊಡೆದುಕೊಂಡು ಹೋಗುತ್ತಿದ್ದರು. ತಿಮ್ಮ, ಮಾಚಿ ತಾಮ್ರಗುಂಡಿ ಹೊಳೆಗೆ ದನ ಮೈತೊಳೆಯುತ್ತ ತಮ್ಮ ಮೈಯನ್ನು ತೊಳೆದುಕೊಳ್ಳುತ್ತಿದ್ದಾರೆ ಎಂದು ಲಚ್ಚ ಆಗಾಗ್ಗೆ ಹೇಳುತ್ತಿದ್ದ. ಆಗ ನನಗೆ ಏನೇನೋ ನೆನಪಾಗುತ್ತಿತ್ತು. ಲಚ್ಚನಿಗೆ ಗೊತ್ತಿಲ್ಲದ 'ಆ' ವಿಷಯ ಹೇಳೋದು ಯಾಕೆ ಎಂದು ಸುಮ್ಮನಾಗಿ ಬಿಟ್ಟಿದ್ದೆ. ನಾನು ಓದಿದ ಪುಸ್ತಕದ ಸಾರ ಅವನಿಗೆ ಹೇಳುತ್ತಿದ್ದೆ. ಕೆಲವಷ್ಟು ಪುಸ್ತಕಗಳು ನನಗೂ ಅರ್ಥವಾಗಿರಲಿಲ್ಲ. ಅವನಿಗೋ ಎಷ್ಟು ಅರ್ಥವಾಯಿತೋ ನನಗೆ ಗೊತ್ತಾಗಲಿಲ್ಲ.
ಗುಡ್ಡದಲ್ಲಿ ಹುಲ್ಲುಗಳು ಒಣಗುತ್ತ ಬಂತು. ಕೊನೆ ಕೊಯ್ಲು ಪ್ರಾರಂಭವಾಯಿತು. ಮಾಚಿಗೆ ಮದುವೆ ಗೊತ್ತಾಯಿತು.
-----
ಜೀವನದ ಗತಿ ಬದಲಾಯಿತು. 'ಹ್ಯಾಂಗಂದ್ರು ಎಸ್ಸೆಸ್ಸೆಲ್ಸಿ ಪಾಸಾಗಿದ್ದೀಯಾ. ಮುಂದೆ ಓದು' ಎಂದು ದಕ್ಷಿಣಕನ್ನಡದ ಕಡೆ ನನ್ನನ್ನು ಕಳುಹಿಸಿದರು ಅನ್ನುವುದಕ್ಕಿಂತ ಇಲ್ಲಿದ್ದರೆ ಹಾಳಾಗುತ್ತೀಯ ಅಂತ ಅಟ್ಟಿದರು. ಹಾಸ್ಟೆಲ್, ಹೊಸ ಹುಡುಗಿಯರು, ಹೀಟ್ ವಾತಾವರಣ, ಹಾದಿ ಬೀದಿ ಓಡಾಟ. ಐದು ವರ್ಷ ಕಳೆದದ್ದೇ ಗೊತ್ತಾಗಲಿಲ್ಲ. ಆಗಾಗ್ಗೆ ರಜೆಯಲ್ಲಿ ಮನೆಗೆ, ಅಜ್ಜನ ಮನೆಗೆ. ಅಲ್ಲಲ್ಲಿ ಆಗುವ ಬಯಲಾಟ, ಕಂಪನಿ ನಾಟಕ, ಮೂಡಲಪಾಯ, ಅಂದರ್ ಬಾಹರ್, ಗುಡುಗುಡಿ, ಇಸ್ಪೀಟ್ ಎಂದು 22ರ ಪ್ರಾಯ ದಾಟಿತು.
ಮುಂದೆ ಮತ್ತೆ ಓದು. ಎಂಎ ಗ್ರಾಜ್ಯುಯೇಶನ್. ಚೆಂದುಳ್ಳಿ ಚೆಲುವೆಯರ ನಡುವೆ ಗಂಭೀರ ಪಾಠ. ದನಕಾಯುತ್ತಿರುವ ಹೆಣ್ಣು ಕಂಡರೆ ಮತ್ತದೇ ಮಾಚಿಯ ನೆನಪು. ಹೀಗೆ ಹಲವಾರು ಭ್ರಮೆಯಲ್ಲಿ ವಿದ್ಯಾರ್ಥಿ ಜೀವನ ಕಳೆದೇಹೋಯಿತು.
ಶುರುವಾಯಿತು ನೌಕರಿ ಶಿಕಾರಿ. ರಾಜಧಾನಿ ಕಡೆಗೂ ಹೋದೆ. ಕೊನೆಗೂ ಸಿಕ್ಕಿತು ಪಾರ್ಟ್ ಟೈಮ್ ಲೆಕ್ಚರರ್ ಕೆಲಸ. ಹುಡ್ಗರು 'ಮೇಷ್ಟ್ರೆ' ಅಂತ ಕರೆದರು.
ವರ್ಷಗಳು ಕಳೆದವು.
-----
ನನಗೆ ಗೊತ್ತಾಗಿತ್ತು; ನಾನು ಎಂಥ ದಿನಗಳನ್ನು ಕಳೆದು ಬಂದೆ ಅನ್ನೋದು. ಆ ದನಕಾಯುವ ದಿನಗಳು. ಪಕ್ಷಿಗಳ ಇಂಚರ, ತೊರೆ ಜುಳು ಜುಳು ನಾದ. ಮಾಚಿಯ ಮುಗ್ಧ ಪ್ರೇಮ. ಅವಳೊಂದಿಗೆ ಕಳೆದ ಪ್ರಾಯದ ಕಾಮ. ಲಚ್ಚನ ಗೆಳೆತನ. ಊರಿನ ನೆನಪಾಯಿತು. ಯಾರಿದ್ದಾರೆ ನನ್ನವರು ಅಲ್ಲಿ?
ಹುಟ್ಟಿದ ನೆಲದ ಸೆಳೆತ, ಹೊರಟೆ. ಮಿತ್ರನ ಮನೆಯಲ್ಲಿ ವಾಸ್ತವ್ಯ. ಕಾಡು ಹರಟೆ. ಅವನು ತೋಟಕ್ಕೆ ಹೋದ, ನಾನು ಊರು ತಿರುಗಲು ಹೊರಟೆ.
ಕಾಡು ದಾರಿಯಲ್ಲಿ ನಡೆದು ಹೋಗುತ್ತಿರುವಾಗ ಆರೇಳು ವರ್ಷದ ಬಾಲಕಿಯೊಬ್ಬಳು ನನ್ನ ಮುಂದೆ ಬಂದಳು. ಏನೋ ಅವ್ಯಕ್ತ ಅನುಭೂತಿ. 'ಹುಚ್ಚು ಮನಸ್ಸು' ಎಂದುಕೊಂಡೆ. ಅಷ್ಟರಲ್ಲಿ ಅದೇ ಮಾಚಿ... ಹಿಂದೆ ತಿಮ್ಮ. 'ಅರೆ! ಇನ್ನೂ ಒಟ್ಟಿಗೆ ದನಕಾಯ್ತಿರಾ?' ಎಂದು ಕೇಳಬೇಕು ಎನ್ನುವಷ್ಟರಲ್ಲಿ, ಅವಳೇ ಕೇಳಿದಳು 'ಒಡಿದಿರೇ ಹ್ಯಾಂಗಿದ್ರಿ? ಇದು ನಂದೇ ಮಗಳು'.
ನನ್ನ ಮನಸ್ಸು ಓದಿದವಳಂತೆ ತಿಮ್ಮನ ತೋರಿಸಿ 'ನಮ್ಮೇಜಮಾನ್ರು' ಅನ್ನುವಷ್ಟರಲ್ಲಿ, ಮಧ್ಯ ಬಾಯಿ ಹಾಕಿದ ಅಂವ 'ಹ್ಯಾಂಗಿದ್ಲು ನಮ್ಮ ಮಗಳು? ನನ್ನಾಂಗ್ಹೆ ಅಲ್ದಾ?' ಅಂದ. ನನಗೆ ಹಾಗೆ ಕಾಣಲಿಲ್ಲ. 'ನನ್ನಾಂಗ್ಹೆ' ಅಂತ ಹೇಳಬೇಕೆನಿಸಿದರೂ, ಅವನ ಪ್ರಶ್ನೆಗೆ ಉತ್ತರ ಕೊಡುವ ಮನಸ್ಸಾಗಲಿಲ್ಲ. 'ಬರುತ್ತೇನೆ' ಎಂದು ಹೊರಟೆ. ಸತ್ಯ ನನಗೆ ಗೊತ್ತಿತ್ತು.
ಲಚ್ಚ ಎದುರಾದ. 'ಪಕ್ಕಾ ನಿಮ್ದೇ ಪಡಿಯಚ್ಚು, ಕಂಡ್ರಾ?' ಎಂದು ನಕ್ಕ. ಆಗಲೂ ಮಾತಾಡುವ ಮನಸ್ಸಾಗಲಿಲ್ಲ. ಕಣ್ಣ ಮುಂದೆ ಬೆಳ್ಯಾ ಹೋರಿ, ಸುಂದರಿ ದನ ಸುಳಿದು ಹೋದವು. ರಾಜಧಾನಿಗೆ ಹೊರಡುವ ಬಸ್ಗೆ ಟಿಕೆಟ್ ಬುಕ್ ಆಗಿತ್ತು. ಆ ದನಗಳು ಹೋಗುತ್ತಿದ್ದ ಬೆಟ್ಟಗಳು... ಮರೆಯಬೇಕು ಎಂದುಕೊಂಡು ಕಾಡುವ ನೆನಪುಗಳು... ಕೊಳನೂದೋ ಗೋವಿಂದ ಮುಪ್ಪಿಗಾಗಲಾನಂದ... ಆನಂದ... ಆನಂದ... ತೇಲಿ ಬರುತ್ತಿತು; ಮೊಬೈಲ್ ರಿಂಗ್ಟೋನ್ ರೂಪದಲ್ಲಿ, ಗೋಕುಲ ನಿರ್ಗಮನದ ಹಾಡು...

FEEDJIT Live Traffic Feed