Monday, June 8, 2009

ಕಣ್ಣು ನೋಟ

ಕಣ್ಣಲ್ಲಿ ಕಣ್ಣಿಡಲಾಗಲಿಲ್ಲ
ನನ್ನ ಮೊದಲ ನೋಟ
ಅವಳ ನೋಟಕ್ಕೆ ಕೂಡಲಿಲ್ಲ
ಆಕೆಯ ನೋಟವೇ ಹಾಗೇ

ಹೊರಗಣ್ಣ ನೋಟ ಕೂಡಲಿಲ್ಲ
ಮನದ ಕಣ್ಣು ಕಲೆತಿವೆ?
ಮನದ ಮಾತು ತಿಳಿಯ ಬಲ್ಲಳು
ಅವಳು ನನ್ನವಳೇ??

ತಿಳಿಯ ಬಲ್ಲಳು; ಸೂಕ್ಷ್ಮ ಮನಸ್ಸು
ನನ್ನ ನೋಟಕ್ಕೆ ಅವಳ ನೋಟ ಕೂಡಿಸಬಲ್ಲಳು
ದಿನಾಲೂ “ಕೊಲ್ಲ” ಬಲ್ಲಳು ಅವಳ ನೋಟವೇ ಹಾ

Tuesday, June 2, 2009

ಮೃತ್ಯು ಕರೆ

ಮೂಲೆಯಲ್ಲಿ ಕೆಮ್ಮುತ್ತ ಕುಳಿತಿತ್ತು ಒಂದು ಜೀವ
ಆಕಾಶದೆಡೆಗೆ ಶೂನ್ಯ ದೃಷ್ಠಿಯನ್ನು ಬೀರಿ

ಬಾ.. ಎಂದು ಕರೆದರೆ
ತಿರುಗಿ ನೋಡದೆ ಹೋಗುವೆ
ಬೇಡವೆಂದಾಗ ದುತ್ತೆಂದು
ಬಂದು ನಿಲ್ಲುವೆ

ತೊಂಬತ್ತು ಸಂತ್ಸರವಾಯಿತು
ಸಾಕು ಈ ಬದುಕು
ನಿನ್ನ ಒಪ್ಪಿ ಅಪ್ಪಿ ಕೊಳ್ಳುತ್ತೇನೆ
ಬಂದು ಬಿಡು ನನ್ನಲ್ಲಿಗೆ

ಅವಳಿಗೆ ಇನ್ನೂ ಇಪ್ಪತ್ತು
ಅವನಿಗೆ ಆಗಲಿಲ್ಲ ಐವತ್ತು
ಜೀವನ ಅನುಭವಿಸುವ ಕಾಲ
ಅವರನ್ನೇ ಪ್ರೀತಿಸುತ್ತಿಯಲ್ಲ ನೀನು

ಜ ಗತ್ತಿನ ಸುಖ ಭೋಗಗಳನ್ನು ನೋಡಾಯಿತು
ಸಾಕಿನ್ನು ಭವದ ನಂಟು
ನಿನ್ನ ಬಿಗಿದಪ್ಪಿ ಕೊಳ್ಳುವೆ
ಬಂದುಬಿಡು ನನ್ನಲ್ಲಿಗೆ

ತನ್ನಷ್ಟಕ್ಕೆ ಅಂದು ಕೊಳ್ಳುತ್ತಿತ್ತು ಜೀವ..
ಕಾಲ ಬರುತ್ತಾನೆಯೇ..

Tuesday, April 21, 2009

ಇದು ಸಿನೆಮಾ ವರದಿ ಕತೆ


ಬಹಳ ಹಿಂದಿನ ಕತೆಯಲ್ಲ. ಈಗೊಂದು ವರ್ಷದ ಹಿಂದೆ. ಸಿನೆಮಾ, ಸಿನೆಮಾ ಜಗತ್ತು ಎಂದರೆ ತಲೆಯೊಳಗೆ ರಂಗುರಂಗಿನ ಕನಸುಗಳು ಬರುತ್ತಿದ್ದವು. ಅಬ್ಬಾ! ರಮ್ಯನ ಎದುರಿಂದ ನೋಡಿದರೆ ರಮ್‌ ಕುಡಿದಷ್ಟೇ ಖುಷಿಯಾಗಬಹುದೇನೋ!! ಮುಂಗಾರು ಮಳೆ ಪೂಜಾನ ನೋಡಿದರೆ ಪಾವನರಾಗುತ್ತೇವೆನೋ ಎಂದೆಲ್ಲಾ ಕಾಣುತ್ತಿತ್ತು. ಶಿವರಾಜ್‌ ಕುಮಾರ್‌, ಪುನೀತ್‌, ಮುರುಳಿ, ಕಿಟ್ಟಿ ಸಾಲು ಸಾಲಾಗಿ ಹೀರೋಗಳು ಕಣ್ಣೆದುರಿಗೆ ಬರುತ್ತಿದ್ದರು. ಆದರೆ ಅವೆಲ್ಲ ಸುಳ್ಳು, ಖಾಸಗಿ ಬದುಕೆಂಬುದು ಮೂರಾಬಟ್ಟೆಯಾಗಿ ಕೋಟಿ ಕೋಟಿ ದುಡಿದರು ಸರಿಯಾಗಿ ತಿನ್ನಲಿಕ್ಕೆ ಆಗದೆ, ಡೈಯಟ್ಟು ಪಯಟ್ಟು ಅನ್ಕೊಂಡು ಬದುಕುವ ಮಂದಿ ಎಂದು ಗೊತ್ತಾಗಿದ್ದೆ ನಾನೂ ಸಿನೆಮಾ ವರದಿಗೆ ಹೋಗತೊಡಗಿದಾಗ.
ನಾನು ಮೊದಲು ಹೋಗಿದ ಪ್ರೆಸ್‌ ಮೀಟ್‌ ಶಿವರಾಜ್‌ ಕುಮಾರ್‌ ಅಭಿನಯದ ನಂದ, ಈ ಚಿತ್ರ ಇಂದು ತೆರೆ ಕಂಡು ಸದ್ದು ಗದ್ದಲವಿಲ್ಲದೆ ಟ್ರಂಕ್‌ ಒಳಗಡೆ ಸೇರಿದೆ. ಇನ್ನೊಂದು ಪ್ರೀತಿಯ ತೇರು. ತೇರನ್ನು ಕಟ್ಟಿ ಬಹಳ ದಿನವಾದರೂ ಎಳೆಯಲು ಮಾತ್ರ ಆಗಲಿಲ್ಲ. ನಂತರ ಸುಮಾರು ಐವತ್ತು ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದೆ.
ಎಲ್ಲಾ ಪತ್ರಿಕಾ ಗೋಷ್ಠಿಗಳು ಬಹುತೇಕ ಒಂದೇತರ. ನಟರು, ನಿರ್ದೇಶಕರು, ನಿರ್ಮಾಪಕರು ಬೇರೆ ಇರುತ್ತಾರೆಯೇ ಹೊರತು ಮಾತುಗಳೆಲ್ಲ ಒಂದೆಸೇಮ್‌.
ಸಾಮಾನ್ಯವಾಗಿ ನಿರ್ದೇಶಕ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತಾಡಲಿಕ್ಕೆ ಪ್ರಾರಂಭಿಸುತ್ತಾರೆ. ಇವರ ಮೊದಲ ವಾಕ್ಯವೇ ಇದೊಂದು ಡಿಫರೆಂಟ್‌ ಸ್ಟೋರಿ ಇರೋ ಚಿತ್ರ. ಐದು ಹಾಡು ನಾಲ್ಕು ಹಾಡುಗಳು ಪಕ್ಕಾ ಜಾನಪದ ಶೈಲಿಯಲ್ಲೆ ಇದೆ. ಅದಕ್ಕೆ ಮಾರ್ಡನ್‌ ಟಚ್‌ ನೀಡಿದ್ದೇವೆ. ಒಂದು ಐಟಂ ಸಾಂಗು. ಕತೆಗೆ ಸರಿಯಾಗೇ ಐಟಂ ಸಾಂಗ್‌ ಇದೆ. ಫಾರೇನ್‌ ಲೋಕೆಶನ್‌ಗೆ ಹೋಗುವ ಪ್ಲಾನ್‌ ಮಾಡಿದ್ದೇವೆ. ಮೂರು ಕೋಟಿ ಬಜೆಟ್‌. ನಿರ್ಮಾಪಕರು ನಾವು ಕೇಳಿದಕ್ಕೆ ಇಲ್ಲಾ ಎನ್ನುವುದಿಲ್ಲ ಎನ್ನುವ ಭರವಸೆ ಇದೆ ಎನ್ನುತ್ತಾರೆ.
ನಂತರ ನಾಯಕನ ಸರದಿ ಪ್ರಾರಂಭವಾಗುತ್ತದೆ. ಚಿತ್ರದ ಕತೆ ಮಾತ್ರ ಸೂಪರ್‌, ನಿರ್ದೇಶಕರು ಬಂದು ಕತೆಯನ್ನು ಹೇಳಿದರು ಖುಷಿಯಾಯಿತು. ಮದರ್‌ ಸೆಮಟಿಮೆಂಟ್‌ ಇರೋ ಸಿನೆಮಾ. ಮ್ಯಾಸೇಜ್‌ ಇದೆ. ಚಿತ್ರ ಚೆನ್ನಾಗಿ ಬರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ.
ನೆಕ್ಷ್ಟ್‌ ನಾಯಕಿ, ದಿಸ್‌ ಇಸ್‌ ಮೈ ಥರ್ಡ್‌ ಮೂವಿ. ಬ್ಯುವ್ಟಿಫೂಲ್‌ ಸ್ಟೋರಿ. ಇಷ್ಟು ಹೇಳಿ ಮೌನಕ್ಕೆ ಶರಣಾಗುವರು ಹೆಚ್ಚಿಗೆ ಮಂದಿ.ನಾದರು ಹೆಚ್ಚಿಗೆ ಪ್ರಶ್ನೆ ಏನಾದರೂ ಕೇಳಿದರೆ, ನಿರ್ದೇಶಕರು ಅವರ ಸಹಾಯಕ್ಕೆ ಬರುತ್ತಾರೆ. ನಾಲಿಗೆಯ ಮೇಲೆ ಕನ್ನಡ ಎನ್ನುವ ಅಕ್ಷರ ಮರೆಯಾಗಿ ಇಂಗ್ಲಿಷ್‌ ನಲಿದಾಡುತ್ತದೆ. ಹಾಗೇ ಹೇಳಿ ನಿರ್ದೇಶಕರು ಇವರನ್ನು ಪರಿಚಯ ಮಾಡಿ ಕೊಡುವಾಗ ಇವರು ಕನ್ನಡ ಹುಡುಗಿ ಎಂದು ಪರಿಚಯ ಮಾಡಿ ಕೊಡುತ್ತಾರೆ.
ಹದಿನೈದು ನಿಮಿಷದ ಪತ್ರಿಕಾಗೊಷ್ಠಿಗೆ ಕನಿಷ್ಠ ಮೂರು ತಾಸು ವ್ಯಯ ಮಾಡಬೇಕಾಗುತ್ತದೆ ಎನ್ನುವುದು ವಿಶೇಷ. ಯಾರಾದರೂ ಪತ್ರಕರ್ತ ನಟಿ ಅಥವಾ ನಾಯಕನ್ನು ಹೊಗಳದೆ ತೆಗಳಿದರೆ ಕಚೇರಿಗೆ ಕಾಲ್‌ ಗ್ಯಾರಂಟಿ. ಅದೇ ಒಳ್ಳೆಯದಾಗಿ ಬರೆದರೆ ಮಾತು ಆಡಿಸುವುದಿಲ್ಲ. ಇದು ಸಿನೆಮಾ ವರದಿಗೆ ಹೋದ ಅನುಭವ. ಇಷ್ಟೇ ಅಲ್ಲ. ಇನ್ನು ಇದೆ. ಮತ್ತ್ಯಾವಾಗಾದರೂ ಬರೆಯುವ.

Thursday, March 26, 2009

ವರುಣಾವತಾರ


ವರುಣ್‌ ಗಾಂಧಿ ಸಂಜಯ್‌ ಗಾಂಧಿ, ಮೇನಕಾ ಗಾಂಧಿಯ ಏಕೈಕ ಪುತ್ರ ಎನ್ನುವುದು ಗೊತ್ತು. ನೆಹರು ಕುಟುಂಬದ ಈ ಕುಡಿ ತೀರಾ ಭಿನ್ನ ಎನ್ನುವುದು ಗೊತ್ತಾಗಿದ್ದು ಮಾತ್ರ ಇತ್ತಿಚೇಗೆ.
‘ಹಿಂದೂಗಳ ಮೇಲೆ ಎತ್ತುವ ಕೈಗಳನ್ನು ಕತ್ತರಿಸಿ’, ‘ಮುಸ್ಲಿಂರನ್ನು ಹಿಡಿದು ಹಿಡಿದು ಸಂತಾನ ಹರಣ ಮಾಡಬೇಕು’ ಎನ್ನುವ ಮೂಲಕ ವಿವಾದದ ಸುಳಿಗೆ ವರುಣ್‌ ಸಿಕ್ಕಿದ ಮೇಲೆ. ಪ್ರವರ್ಧಮಾನಕ್ಕೆ ಬಂದರು ಎನ್ನಬಹುದು. ಅಲ್ಲಿಯವರೆಗೆ ಮೇನಕಾ ಗಾಂಧಿ ಮಗ ಅಂದಷ್ಟೇ ಗೊತ್ತಿತ್ತು. ಈಗ ಪ್ರಕರ ಹಿಂದೂ ವಾದಿ ಎನ್ನುವುದನ್ನು ವರಣ್‌ ಘಂಟಾ ಘೋಷವಾಗಿ ಸಾರಿದ್ದಾರೆ. ಅಪ್ಪನ ಮಗ ಎನಿಸಿಕೊಂಡಿದ್ದಾರೆ.
ವರುಣ್‌ ಗಾಂಧಿಯ ಮಾತು ಕೆಲವರಿಗೆ ಅಪಥ್ಯವಾಗಿದೆ. ವರುಣ್‌ ಅಕ್ಕ ಪ್ರಿಯಾಂಕಾ ಗಾಂಧಿ ತಮ್ಮನ ಮಾತು ಕೇಳಿ ದಿಗ್ಭ್ರಮೆಯಾಗಿದೆ. “ನನ್ನ ತಮ್ಮ ಭಗವದ್ಗೀತೆಯನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಳ್ಳಿಲಿ’ ಎಂದಿದ್ದಾರೆ. ವರುಣ್‌ ಗಾಂಧಿ ಮನಸ್ಸಿನ ಮಾತನ್ನು ಆಡಿದ್ದಾರೆ. ಸತ್ಯ ಹೇಳಿದ್ದಾರೆ. ಓಲೈಕೆಯ ಮಾತು ಅವರಿಗೆ ಬೇಡ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಆದರೆ ನಾಯಕನಾಗಲು ಹೊರಟವ ಎಲ್ಲರೆದುರಿಗೆ ಈ ರೀತಿ ಮಾತನಾಡುವುದು ತಪ್ಪು. ಮನಸ್ಸಿನ ಮಾತು ಮನಸ್ಸಿನಲ್ಲಿಯೇ ಇರಲಿ ಎನ್ನುವುದು ಹಲವರ ಅಭಿಪ್ರಾಯ.
ಇದು ಒಂದು ಕಡೆ ಇರಲಿ, ಕಾಂಗ್ರೆಸ್‌ನವರಿಗೆ ಯಾಕೆ ಮೇನಕಾ ಗಾಂಧಿ ಅವರ ಕುಟುಂಬ ವರ್ಜ್ಯ. ರಾಜೀವ್‌ ಗಾಂಧಿ, ಸೋನಿಯಾ ಗಾಂಧಿ, ರಾಹುಲ ಗಾಂಧಿ, ಪ್ರಿಯಾಂಕಾ ವಡೇರಾ(ಗಾಂಧಿ) ಅವರನ್ನು ಇನ್ನು ಬೆಳೆಸುತ್ತಿದ್ದಾರೆ. ಅವರು ಹೇಳಿದ ತಾಳಕ್ಕೆ ಲಯ ತಪ್ಪಿದರೂ ಬಿಡದೆ ಕುಣಿಯುತ್ತಿದ್ದಾರೆ. ಇವರೆದುರು ಬೆನ್ನನ್ನು ಬಗ್ಗಿಸಿ ನೆತ್ತಿಯನ್ನು ನೆಲಕ್ಕೆ ತಾಗುವ ರೀತಿಯಲ್ಲಿ ನಿಂತು ಶರಣಾಗಿ ನಿಲ್ಲುತ್ತಿದ್ದಾರೆ. ಅಂತವರು ಇಂದಿರಾ ಗಾಂಧಿ ಎರಡನೆ ಮಗನ ಹೆಂಡತಿ, ಮಗ ಬೇಡವಾದರಲ್ಲ! ಒಂದು ರೀತಿಯ ವಿಷಾದ.
ಈ ರೀತಿಯ ಡೋಂಗಿ ವರ್ತನೆಗಿಂತ ವರುಣ್‌ ಗಾಂಧಿಯ ಮಾತೇ ಎಷ್ಟೋ ವಾಸಿ ಎನಿಸುತ್ತದೆ.
ರಾಹುಲ್‌ ಮೂರು ತಿಂಗಳಿಗೆ ತಂದೆಯನ್ನು ಕಳೆದು ಕೊಂಡು ಉತ್ತಮ ಶಿಕ್ಷಣವನ್ನು ತಾಯಿಕೊಡಿಸಿದರು. ಹಿಂದೂ ಮನಸ್ಥಿತಿಯಲ್ಲೇ ಇರುವುದು ಸೋಜಿಗವೇ ಸರಿ. ಜಾತ್ಯಾತೀತ ತತ್ವಗಳಿಗೆ ಒತ್ತು ನೀಡುವ ನೆಹರೂ ಕುಟುಂಬದವನೇ ಇವನು ಎನ್ನುವಷ್ಟು ಆಶ್ಚರ್ಯ ವರುಣ್‌ ನೋಡಿದರೆ ಆಗುತ್ತದೆ.
ಸಂಜಯ್‌ ಗಾಂಧಿ 1974-76ರ ವರೆಗೆ ವರ್ತಿಸಿದ ರೀತಿ ಇಂದಿರಾಗಾಂಧಿಗೂ ತಲೆ ನೋವಾಗಿತ್ತಂತೆ. ಅವರೇ ಒಂದು ಹಂತದಲ್ಲಿ ಸಂಜಯ್‌ ಗಾಂಧಿಯನ್ನು ದೂರವಿಟ್ಟಾಗ ನಾವು ದೂರ ಇಡುವುದು ಎನು ಮಾಹಾ? ಎನ್ನುವ ಆಲೋಚನೆಯೂ ಕಾಂಗ್ರೆಸ್‌ ನಾಯಕರಿಗೆ ಬಂದರೆ ತಪ್ಪಲ್ಲ.
ವರುಣ್‌ ವಿಚಾರಕ್ಕೆ ಬಂದಾಗ ತಂದೆಯಂತೆ ಮಗನು ಸಹ ಮುಸ್ಲಿಂರ ವಿರುದ್ಧ ಮಾತನಾಡಿದ್ದಾರೆ. ಋಣಾತ್ಮಕ ಪ್ರಚಾರವನ್ನು ಪಡೆದು ಕೊಂಡಿದ್ದಾರೆ. ಇಲ್ಲಿ ಕೆಲವು ಅಂಶಗಳನ್ನು ಈ ರೀತಿಯಲ್ಲಿ ವಿವೇಚಿಸಬಹುದೇನೋ ... . . . . . .
· ಹಿಂಸಾತ್ಮಕ ಮಾತನ್ನು ವರುಣ್‌ ಸಾರ್ವಜನಿಕವಾಗಿ ಆಡಿದ್ದು ತಪ್ಪು.
· ಕ್ರೂರತೆಯನ್ನು ಯಾರು ಒಪ್ಪುವುದಿಲ್ಲ.
· ಸಿನೆಮಾದಲ್ಲಿ ಪ್ರಾಣಿ ಹಿಂಸೆ ಮಾಡಿದರೂ ಬೊಬ್ಬೆ ಹಾಕುವ ಮೇನಕಾ ಗಾಂಧಿ ವರುಣ್‌ ಮಾತನ್ನು ಹೇಗೆ ಒಪ್ಪಿಕೊಳ್ಳುತ್ತಾರೆ?
· ವರುಣ್‌ಗೆ ಇನ್ನು ಚಿಕ್ಕ ವಯಸ್ಸು.
· ರಾಹುಲ್‌ ಗಾಂಧಿಯನ್ನು ಇತರರು ಬೆಳೆಸುತ್ತಿರುವುದು ಸಹೋದರ ವರುಣ್‌ಗೆ ಕಷ್ಟವಾಗಿರಬಹುದು.
· ನನ್ನನ್ನು ನಾನೇ ಬೆಳಸಿಕೊಳ್ಳಬೇಕು ಎನ್ನುವ ಆಲೋಚನೆ ವರುಣ್‌ಗೆ ಬಂದಿರಬಹುದು.
· ವರುಣ್‌ ಮಾತಾಡಿರುವುದು ಚುನಾವಣೆಗೆ ನಿಲ್ಲಲು ಅನರ್ಹ ಎನ್ನುವಷ್ಟು ತಪ್ಪಿನ ಮಾತಲ್ಲ.
· ಚುನಾವಣಾ ಆಯೋಗದ ಸಲಹೆ ಅಗತ್ಯವಿರಲಿಲ್ಲ.
· ಮುಲಾಯಂ ಸಿಂಗ್‌ ಚುನಾವಣಾ ಅಧಿಕಾರಿಗೆ ಜೀವ ಬೆದರಿಕೆ ಹಾಕಿದರೂ ಚುನಾವಣೆಗೆ ನಿಲ್ಲ ಬೇಡಿ ಎನ್ನುವ ಸಲಹೆ ನೀಡಲಿಲ್ಲ.
· ಸಂಜಯ್‌ ದತ್ತ್‌ ಟಾಡಾ ಕಾಯ್ದೆಯಡಿಯಲ್ಲಿ ಬಂಧಿತನಾದರೂ ಅವನಿಗೆ ಚುನಾವಣೆಯಲ್ಲಿ ನಿಲ್ಲಲೂ ಅವಕಾಶ.
· ಶೀಬು ಸೋರೆನ್‌ ಚುನಾವಣೆಗೆ ನಿಲ್ಲಬಹುದಾರೇ ವರುಣ್‌ ನಿಂತರೆ ಏನೂ ತಪ್ಪಿಲ್ಲ.
· ಕ್ರಿಮಿನಲ್‌ಗಳನ್ನು ಸುಮ್ಮನೆ ಬೀಡುವವರು. ವರುಣ್‌ ಮಾತು ತಪ್ಪು ಎನ್ನುವುದು ಎಷ್ಟು ಸರಿ?
· ಹವಾಲಾ, ಬೋಫೋರ್ಸ, ಭ್ರಷ್ಟಾಚಾರ ಎಲ್ಲದಕ್ಕೂ ಅವಕಾಶ ನೀಡಿ, ಮೇಲ್ವರ್ಗದವರೇ ಹೆಚ್ಚಿರುವ ಕಾಂಗ್ರೆಸಿಗರಿಗೆ ವರುಣ್‌ ಮಾತು ತಪ್ಪಾಗಿ ಕಾಣುತ್ತಿದೆ.
ಒಟ್ಟಾರೆ ವರುಣ್‌ ಪ್ರಕರಣವನ್ನು ಗಮನಿಸಿದಾಗ ಮಾಡಬಾರದ ತಪ್ಪನ್ನು ವರುಣ್‌ ಮಾತಾಡಲಿಲ್ಲ. ಉದ್ರೇಕವಾಗಿ ಭಾಷಣ ಮಾಡುತ್ತಿರುವಾಗ ಎಲ್ಲಿಂದಲೋ ಈ ಮಾತುಗಳು ನುಸುಳಿರಬಹುದು. ಇದನ್ನು ದೊಡ್ಡದು ಮಾಡುವ ಅವಶ್ಯಕತೆ ಇರಲಿಲ್ಲ ಅನ್ನಿಸುತ್ತದೆ. ಆದರೂ ವರುಣ್‌ ಮಾತನಾಡಿರುವುದು ತಪ್ಪು ಎನ್ನುವುದು ಒಂದು ಕಡೆಯಾದರೆ, ಒಳಗಡೆಯಿಂದಲೇ ಬತ್ತಿ ಇಡುವ ಬದಲು ವರುಣ್‌ ಮಾತು ಎಷ್ಟೋ ಒಳೆಯದು ಎನ್ನುವ ವಾದವು ಸರಿ ಎನ್ನಬಹುದಲ್ಲವೇ?

Tuesday, February 24, 2009

ಸ್ಲಂ ಡಾಗ್, ಪಿಂಕಿ ಮತ್ತು ಆಸ್ಕರ್


ಅಂತೂ ಭಾರ­ತೀಯ ಕಥೆ­ಯನ್ನು ಆಧ­ರಿ­ಸಿದ ಭಾರ­ತ­ದ­ಲ್ಲದ ಚಿತ್ರಕ್ಕೆ `ಆ­ಸ್ಕರ್‌' ಪುರ­ಸ್ಕಾರ ಲಭಿ­ಸಿದೆ. ಮುಂಬೈನ ಎಲ್ಲಾ ಸ್ಲಂಗ­ಳ­ಲ್ಲಿಯೂ ಹರ್ಷ­ದಿಂದ ಕುಣಿ­ದಾ­ಡಿ­ದರು. ನನಗೂ ಅತ್ಯಂತ ಖುಷಿ­ಯಾ­ದದ್ದು ಸತ್ಯ. ಒಂದು ಉತ್ತಮ ನಿರೂ­ಪ­ಣೆಯ ಸಿನೆಮಾ ಎನ್ನುವ ದೃಷ್ಠಿ­ಯಿಂದ. ಒಬ್ಬ ಭಾರ­ತೀ­ಯ­ನಾಗಿ ಆ ಸಿನೆ­ಮಾ­ವನ್ನು ನೋಡಿ­ದರೆ ಖಂಡಿತ ಬೇಸ­ರ­ವಾ­ಗು­ತ್ತದೆ.
`ಸ್ಲಂ ಡಾಗ್‌ ಮಿಲೆ­ನೀ­ಯರ್‌' ಆಸ್ಕರ್‌ ಪುರ­ಸ್ಕಾ­ರಕ್ಕೆ ಆಯ್ಕೆ­ಯಾ­ದಾಗ ಪ್ರಶಸ್ತಿ ಇದಕ್ಕೆ ಲಭ್ಯ­ವಾ­ಗು­ತ್ತದೆ ಎನ್ನುವ ಭವಿ­ಷ್ಯ­ವನ್ನು ಬಹಳ ಜನ ನುಡಿ­ದದ್ದು ಈಗ ಹಳೆಯ ಮಾತು. ಈ ಚಿತ್ರ­ಕ್ಕಿಂತ ಮೊದಲು ಲಗಾನ್‌, ಮದರ್‌ ಇಂಡಿಯಾ ಸಿನೆ­ಮಾ­ಗಳು ಆಸ್ಕರ್‌ ಪುರ­ಸ್ಕಾ­ರ­ಕ್ಕಾಗಿ ನಾಮ ನಿರ್ದೇ­ಶ­ನ­ಗೊಂ­ಡಿ­ದ್ದವು. ಆದರೆ ಸಿಗ­ಲಿಲ್ಲ. ಲಗಾನ್‌ ಅಪ್ಪಟ ದೇಶೀ ಸಿನೆ­ಮಾ­ವಾ­ಗಿತ್ತು. ನಿರ್ದೇ­ಶಕ ಭಾರ­ತೀಯ, ನಿರ್ಮಾ­ಪಕ ಭಾರ­ತೀಯ. ಬ್ರಿಟಿ­ಷರ ದಬ್ಬಾ­ಳಿಕೆ ವಿರುದ್ಧ ಭಾರ­ತೀ­ಯರು ಕ್ರಿಕೆಟ್‌ ಆಡಿ ಅವ­ರನ್ನು ಸೋಲಿ­ಸುವ ಚಿತ್ರ. ಸ್ವಾಭಾ­ವಿ­ಕ­ವಾಗಿ ಅವ­ರಿಗೆ ಬೇಸ­ರ­ವಾ­ಗಲೇ ಬೇಕು. ಅವರು ಹೇಗೆ ಆಸ್ಕರ್‌ ಪುರ­ಸ್ಕಾರ ನೀಡಿ­ಯಾರು.
ಸ್ಲಂ ಡಾಗ್‌ ವಿಚಾ­ರಕ್ಕೆ ಬಂದರೆ ವಿದೇ­ಶದ ಹಣ, ವಿದೇಶೀ ನಿರ್ದೇ­ಶಕ, ವಿದೇಶೀ ತಾಂತ್ರಕ ವರ್ಗ ಎಲ್ಲವು ವಿದೇಶೀ. ಎ ಆರ್‌ ರೆಹ­ಮಾನ್‌, ಗುಲ್ಜಾರ್‌, ರಸುಲ್‌ ಪೂಕುಟ್ಟಿ ಮತ್ತು ನಟರು ಭಾರ­ತೀ­ಯರು. ಭಾರ­ತೀಯ ವ್ಯವ­ಸ್ಥೆ­ಯನ್ನು ಅಣ­ಕಿ­ಸುವ ಸಿನೆ­ಮಾಕ್ಕೆ ಆಸ್ಕರ್‌ ಪ್ರಶಸ್ತಿ ಬಂದಿದೆ. ನಾವು ಖುಷಿ­ಯಾಗಿ ಕುಣಿದು ಸಂಭ್ರ­ಮಿ­ಸು­ತ್ತಿ­ದ್ದೇವೆ. ವೀದೇಶೀ ನಿರ್ದೇ­ಶ­ಕ­ರಿಗೆ ವಿಕಾಸ್‌ ಸ್ವರೂಪ್‌ ಅವರು ನಮ್ಮನ್ನೇ ಅಣ­ಕಿಸಿ ಕೊಂಡಿ­ರುವ `ಕ್ಯು ಆ್ಯಂಡ್‌ ಎ` ಕಾದಂ­ಬ­ರಿಯೇ ಅವರ ಕಣ್ಣಿಗೆ ಕಂಡಿ­ತಲ್ಲ. ಅದನ್ನು ಮೆಚ್ಚ­ಬೇಕು. ಭಾರ­ತೀ­ಯರ ಸಾಧ­ನೆ­ಯನ್ನು ತೋರಿ­ಸುವ ಕಾದಂ­ಬರಿ ಅವ­ರಿಗೆ ಕಾಣ­ಲಿ­ಲ್ಲ­ವಲ್ಲ ಎಂಬುದು ದುರಾ­ದೃಷ್ಟ.
ನಮ್ಮ ಹಣ­ವನ್ನು ಹೂಡದೇ ನಮ್ಮ ಸಿನೆಮಾ ಎನ್ನುವ ನಾವು ಸ್ವಾಭಿ­ಮಾನ ಕಳೆದು ಕೊಂಡಂತೆ. ಆದರೆ ವೀದೇಶಿ ಸಿನೆಮಾ ರಂಗ ನಮ್ಮ ದೇಶದ ಸಂಗೀತ, ಧ್ವನಿ ಸಂಯೋ­ಜನೆ ಮತ್ತು ನಮ್ಮ­ಲ್ಲಿಯ ನಟ­ರಿಗೆ ಚೆನ್ನಾಗಿ ಅಭಿ­ನಯ ಮಾಡಲು ಬರು­ತ್ತದೆ ಎಂದು ಪ್ರಪಂಚ ಮುಖಕ್ಕೆ ತೋರಿಸಿ ಕೊಟ್ಟ­ರಲ್ಲ ಎನ್ನು­ವುದು ಸಮಾ­ಧಾನ.
ಪಕ್ಕನೆ ನಕ್ಕ ಪಿಂಕಿ
ಈ ನಡುವೆ ಸಿeಳು ತುಟಿಯ ಪುಟ್ಟ ಹುಡು­ಗಿಯ ಕುರಿ­ತಾಗಿ ಭೋಜ್‌­ಪುರಿ ಭಾಷೆ­ಯಲ್ಲಿ ನಿರ್ಮಿ­ಸಿದ ಸ್ಮೈಲ್‌ ಪಿಂಕಿ ಶ್ರೇಷ್ಠ ಕಿರು ಚಿತ್ರ­ವೆಂದು ಆಸ್ಕರ್‌ ಪ್ರಶಸ್ತಿ ಲಭಿ­ಸಿ­ರು­ವುದು ಸಂತೋ­ಷದ ಸಂಗತಿ. ಒಂದು ಹಂತ­ದಲ್ಲಿ ಯೋಚಿ­ಸಿ­ದಾಗ ಸ್ಲಂ ಡಾಗ್‌­ಕ್ಕಿಂತ ಪಿಂಕಿ ಚಿತ್ರವೇ ಹೆಚ್ಚು ಎನ್ನಿ­ಸು­ತ್ತದೆ. ಇದೊಂದು ನೈಜ ಕಥೆ ಮತ್ತು ಅದೇ ಹುಡುಗಿ ಸ್ವತಃ ಅಭಿ­ನಯ ನೀಡಿ­ದ್ದಾಳೆ. ಮೆಗಾನ್‌ ಎನ್ನುವ ವಿದೇಶಿ ಮಹಿಳೆ ನಿರ್ಮಿ­ಸಿ­ದರೂ ಇದ­ರ­ಲ್ಲೊಂದು ಕಳ­ಕಳಿ ಕಾಣಿ­ಸು­ತ್ತದೆ. ಸತ್ಯಕ್ಕೆ ಹತ್ತಿ­ರ­ವಾ­ಗಿ­ರು­ವುದು ಇದಕ್ಕೆ ಕಾರ­ಣ­ವಾ­ಗಿ­ರ­ಬ­ಹುದು. ಏನೇ ಆಗಲಿ ಆಸ್ಕರ್‌ ಬಂದಿದೆ ಇಲ್ಲಿನ ಹಲ­ವಾರು ಪ್ರತಿ­ಭೆ­ಗಳ ಪ್ರದ­ರ್ಶನ ಆಗಿದೆ.

Saturday, February 14, 2009

ಹಗಲು ಕಳೆಯುವ ಸಮಯ


ಎಂದಿನಂತೆ ಅಂದೂ ನಾನು ಬೆಳಿಗ್ಗೆ ಆರರ ಫಸ್ಟ ಬಸ್ಸಿಗೆ ಹೊರಟಿದ್ದೆ. ದಿನಾಲೂ ಕಾಣುವ ವೆಂಕಟರಾಯರು ಅವತ್ತು ಕಾಣಲಿಲ್ಲ. ಆಶ್ಚರ್ಯ! ಐದು ವರ್ಷದದಿಂದ ಬೇಸಿಗೆ, ಮಳೆ, ಚಳಿಗಾಲದ ಪ್ರತಿದಿನವು ಅವರ ದರ್ಶನವನ್ನು ಮಾಡದೆ ನಾ ಹೋದದ್ದಿಲ್ಲ. ಅವರು ಹಾಗೇ ನಾನು ಕಾಣುವವರೆಗೆ ವಾಕಿಂಗಿಂದ ಮನೆಗೆ ಹೋಗುತ್ತಿರಲಿಲ್ಲ. ಯಾಕೆಂದರೆ ಅವರ ಮನೆಗೆ ಏನೇ ಸಾಮಾನು ಸರಂಜಾಮು ಬೇಕಿದ್ದರು ನನ್ನ ಹತ್ತಿರವೇ ಹೇಳುತ್ತಿದ್ದರು, ನಾನೂ ತಂದು ಕೊಡುತ್ತಿದ್ದೆ. ನಮ್ಮಲ್ಲಿ ಒಂದು ರೀತಿಯ ಆತ್ಮೀಯತೆ. ಸ್ನೇಹ, ಪ್ರೀತಿ, ಎಲ್ಲವೂ ಇತ್ತು. ನಾನೂ ಭಾನುವಾರ ಅವರ ಮನೆಗೆ ಚಹಾ ಕುಡಿಯಲಿಕ್ಕೆ ಹೋಗುತ್ತಿದ್ದೆ. ಅಪರೂಪಕ್ಕೆ ಊಟಕ್ಕೂ.
ವೆಂಕಟರಾಯರ ಹೆಂಡತಿ ರಮಾಬಾಯಿ. ಮನೆಗೆ ಹೋದರೆ ಉತ್ತಮ ಆಧರಾತಿಥ್ಯ. ತುಂಬಾ ಹತ್ತಿರವಾಗುತ್ತಿದ್ದರು. ಇಂತಿರುವಾಗ ದಿನಾಲೂ ಕಾಣುವವರು ಕಾಣದಿದ್ದಾಗ ಎನೋ ಕಳೆದು ಕೊಂಡ ಹಾಗೇ ಅನ್ನಿಸುತ್ತದೆ. ಅದಕ್ಕಾಗಿ ತಡ ಮಾಡಲಿಲ್ಲ. ನೇರ ಅವರ ಮನೆಗೆ ಹೋದೆ. ಮೊದಲೇ ವಯಸ್ಸಾದವರು. ಗಂಡನಿಗೆ ಹೆಂಡತಿ ; ಹೆಂಡತಿಗೆ ಗಂಡ ಆಶ್ರಯ
ಅವರ ಮನೆಯೊಳಗೆ ನಾ ಕಂಡಿದ್ದೇನು! ರಾಯರು ಎಡ ಕೈಯನ್ನು ಎದೆಯ ಮೇಲೆ ಒತ್ತಿಕೊಂಡಿದ್ದಾರೆ. ಉಸಿರಾಟಕ್ಕೆ ತೊಂದರೆ ಆಗಿರುವುದು ಸ್ಪಷ್ಟ. ರಮಾಬಾಯಿ ಅವರು ಟೆನ್ಷನ್‌ ಮಾಡಿಕೊಂಡು ಕುಳಿತಿದ್ದಾರೆ. ಅಮ್ಮ , ಎನಾಯ್ತು ರಾಯರಿಗೆ ಅಂದೆ. ಎನೋಪ್ಪಾ ರಾತ್ರಿ ಇದ್ದಕ್ಕಿದ್ದ ಹಾಗೇ ಎದೆ ನೋವು ಬಂತು . ಡಾಕ್ಟ್ರಿಗೆ ಪೋನ್‌ ಮಾಡಿದೆ. ಬಂದು ಔಷಧಿ ಕೊಟ್ಟು ಹೋಗಿದ್ದಾರೆ. ಮತ್ತೇನು ಹೇಳಲಿಲ್ಲ. ನಿಮ್ಮವರು ಯಾರಾದ್ರು ಇದ್ರೆ ಬೆಳಿಗ್ಗೆ ದವಾಖಾನೆಗೆ ಕಳಿಸಿ ಎಂದಿದ್ದಾರೆ ನೀ ಸ್ವಲ್ಪ ಹೋಗಿ ಬರ್ತೀಯಾ? ಅಂದರು ರಮಾ ಬಾಯಿಯವರು .ಆಯ್ತು ಎಂದವನೆ ಹೊರಟೆ.
ಹೊರನೋಟಕ್ಕೆ ಸುಖಿಸಂಸಾರ. ಗಂಡ ಹೆಂಡತಿ ಇಬ್ಬರೇ ಇರೋದು. ಇಬ್ಬರು ರೀಟೈಡ್‌ ಟೀಚರ್ಸ್‌. ಹಣಕಾಸಿನ ತೊಂದರೆ ಎನೂ ಇಲ್ಲ. ಒಬ್ಬನೇ ಮಗ ಇರೋದು. ಹೊರ ದೇಶದಲ್ಲಿ ಇದಾನಂತೆ. ಮಗನ ಬಗ್ಗೆ ಒಂದು ದಿನಾನೂ ನನ್ನಲ್ಲಿ ಪ್ರಸ್ತಾವಿಸಿಲ್ಲ, ಈ ಐದು ವರ್ಷದಲ್ಲಿ ; ನಾನಾಗಿಯೂ ಕೇಳಲಿಲ್ಲ. ಅವರು ಯಾವತ್ತು ತಮ್ಮ ವೈಯಕ್ತಿಕ ವಿಚಾರವನ್ನು ಹೇಳಲಿಲ್ಲ ನನಗೆ ರಾಯರ ಬಗ್ಗೆ ಗೊತ್ತಿರುವುದನ್ನು ಹೇಳಿ ಹೊರಟೆ.
***************************
ವೆಂಕಟರಾಯರು ತೀರ್ಥಳ್ಳಿ ಹತ್ತಿರದ ಕೋಣಂದೂರಿನವರು. ಪ್ರಾಥಮಿಕ ಶಿಕ್ಷಣವನ್ನು ಮುಗಿದ ಕೂಡಲೇ ಊರನ್ನು ಬಿಟ್ಟವರು ಮತ್ತೆ ಊರಿನ ಕಡೆ ಮುಖವನ್ನು ಹಾಕಿದವರಲ್ಲ, ಮೈಸೂರು ಸೇರಿ, ಅಲ್ಲೇ ವಿದ್ಯಾಭ್ಯಾಸ. ಅಲ್ಲಿಯೇ ಹೈಸ್ಕೂಲ್‌ ಮೇಸ್ಟ್ರಾಗಿ ವೃತ್ತಿ ಜೀವನ ಪ್ರಾರಂಭ. ರಮಾಭಾಯಿಯವರು ನಂಜನಗೂಡಿನವರು. ರಾಯರ ಸಹೋದ್ಯಗಿ ಕೂಡಾ. ಪ್ರೀತಿಸಿ ಮದುವೆಯಾದರು ಅನ್ನುವುದಕ್ಕಿಂತ ಪರಸ್ಪರ ಪರಿಚಯ. ಒಟ್ಟಿಗೆ ಎರಡು ವರ್ಷ ಕೆಲಸ ಮಾಡಿ ರೂಢಿ. ಜೀವನ ಪೂರ್ತಿ ಒಟ್ಟಿಗೆ ಇದ್ದರೆ ಹೇಗೆ? ಎಂದು ಯೋಚಿಸಿ ಸಂಸಾರ ಪ್ರಾರಂಭಿಸಿದರು.
ಮೊದಲೇ ಇಬ್ಬರ ಒಪ್ಪಂದಮೊಂದಿತ್ತು. ಗಂಡಾಗಲಿ ಹೆಣ್ಣಾಗಲಿ ಒಂದೇ ಮಗು ಸಾಕು ಎಂದು. ಅದರಂತೆ ರಾಯರ ಯೋಗವೆಂಬಂತೆ ಗಂಡು ಮಗುವೇ ಆಯಿತು. ಸದಾನಂದ ಎಂಬ ನಾಮಕರಣವು ಆಯಿತು. ತಮ್ಮನ್ನು ಸದಾ ಆನಂದದಲ್ಲಿ ಇಡಬೇಕು ಎಂಬ ಬಯಕೆಯಿಂದ. ಉತ್ತಮ ಸಂಸ್ಕಾರ ನೀಡಿದರು. ಮೊದಲೇ ಹೇಳಿ ಕೇಳಿ ಮಾಸ್ತರ್‌ ಮಂದಿ . ಮಗನ್ನು ಸ್ಟ್ರಿಕ್ಟಾಗಿ ಬೆಳಸಿದರು. ಇಂಜನಿಯರಿಂಗ್‌ ಕಲಿಸಿದರು. ಮಗ ಬುದ್ಧಿವಂತ ಕೊನೆಯ ಸೆಮಿಸ್ಟರಲ್ಲೆ ನೌಕರಿಯು ದೊರೆಯಿತು ವಿಪ್ರೋದಲ್ಲಿ. ಎರಡನೆ ವರ್ಷಕ್ಕೆ ವಿದೇಶಕ್ಕೆ ಹೋಗುವ ಯೋಗ . ರಾಯರ ಸಂತೋಷಕ್ಕೆ ಎಣೆಯಿರಲಿಲ್ಲ. ನಮ್ಮ ಕುಟುಂಬದಲ್ಲಿ ಒಬ್ಬನಾದರು ಹೊರ ದೇಶಕ್ಕೆ ಹೋಗುತ್ತಿದ್ದಾನಲ್ಲ ಎಂಬುದೊಂದೆ ಸಡಗರಕ್ಕೆ ಕಾರಣವಾಗಿತ್ತು.
ಸಮುದ್ರವನ್ನು ಉತ್ತರಿಸಿ ಹೋಗುವ ಮಗನಿಗೊಂದು ಮದುವೆ ಎಂಬುದೊಂದನ್ನು ಮಾಡಿ ಕಳಿಸಿದರೆ ತಮ್ಮ ಜವಾಬ್ದಾರಿ ಮುಗಿತು ಎಂಬ ಅನಿಸಿಕೆ. ಮಗನ ಹತ್ತಿರ ಕೇಳಲಿಲ್ಲ ನೀನು ಯಾರನ್ನಾದರನ್ನು ಮೆಚ್ಚಿದ್ದಿಯಾ ಎಂದು. ತಾವೇ ಹೆಣ್ಣೊಂದನ್ನು ನೋಡಿದರು. ಮಗನಿಗೆ ಹೇಳಬೇಕು ಎಂಬಷ್ಟರಲ್ಲಿ, ಸದಾನಂದ ಸತಿ ಸಂತಿಗೆ ಮನೆಗೆ ಅಡಿಯಿಟ್ಟ. ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡರು ರಾಯರು. ಅಲ್ಲಿಂದ ಈ ಮಗ ನಮ್ಮ ಅಂಕೆಯನ್ನು ಮೀರಿ ದೂರ ಹೊರಟಿದ್ದಾನೆ ಎನ್ನುವುದನ್ನು ಮನಗಂಡರು.
ಮಗನ ಅಪ್ಪನ ಸಂಬಂದ ಮೊದಲಿಂದಲು ಅಷ್ಟಕ್ಕಷ್ಟೆ. ಮೊದಲು ಅಪ್ಪನ ಕಂಡರೆ ಮಗನಿಗೆ ಹೆದರಿಕೆ ಇತ್ತು, ನಂತರ ಅಪ್ಪನಿಗೆ ಮಗನ ಬಗ್ಗೆ ಭಯ ಪ್ರಾರಂಭವಾಯಿತು, ಕೊನೆಗಾಲಕ್ಕಾದರೂ ಮಗ ಜೊತೆಯಲ್ಲಿ ಇರುತ್ತಾನೋ ಇಲ್ಲವೋ ಎಂದು. ಆದರೆ ಅಮ್ಮನೊಂದಿಗೆ ಸದಾನಂದನ ಸಹವಾಸ ಸದಾಕಾಲವಿತ್ತು. ವಾರಕ್ಕೊಮ್ಮೆಯಾದರು ಫೋನ್‌ ಮಾಡುತ್ತಿದ್ದ.

ವೆಂಕಟರಾಯರಿಗೆ ಆರೋಗ್ಯ ಹದಗೆಟ್ಟ ದಿನವೇ ಸದಾನು ಅಮ್ಮನಿಗೆ ಕರೆ ಮಾಡಿದ್ದ. ರಮಾಬಾಯಿಯವರು ವಿಷಯವನ್ನು ತಿಳಿಸಿದರು ಅಂತಹ ಪ್ರತಿಕ್ರಿಯೆಯಿರಲಿಲ್ಲ. ಹಣದ ಬಗ್ಗೆ ಯೋಚಿಸಬೇಡ, ಒಳ್ಳೆ ಡಾಕ್ಟ್ರಿಗೆ ತೊರಿಸು. ನಾನಂತು ಬರಲಿಕ್ಕೆ ಆಗಲ್ಲ. ಯಾವುದಾದರು ಆಶ್ರಮದಲ್ಲಿ ಇರಿ. ನನ್ನ ಗೆಳೆಯರಿಗೆ ಹೇಳಿ ವ್ಯವಸ್ಥೆ ಮಾಡಿಸುತ್ತೇನೆ ಎಂದಿದ್ದಾನೆ.

ನೋಡಿದೇಯಾ, ಹೀಗಿದೆ ನಮ್ಮ ಸ್ಥಿತಿ ಎಂದ ರಮಾಬಾಯಿ ಅವರ ಕಣ್ಣಲ್ಲಿ ನೀರು ಜಿನುಗಿದ್ದು ಕಾಣುತ್ತಿತ್ತು. ನಾನು ಎನು ಮಾತಾಡದೆ ಅಲ್ಲಿಂದ ಹೊರಟೆ, ಈಗ ಚಿಂತೆ ಮಾಡುವ ಸರದಿ ನನ್ನದ್ದಾಗಿತ್ತು.
************

ಒಂದೇ ಮಗನಾಗಿ ಹುಟ್ಟಬಾರದು ಯಾಕೆಂದರೆ ನಮ್ಮ ಬಗ್ಗೆ ನಮ್ಮ ತಂದೆ ತಾಯಿಗಳು ಬಹಳ ನಮ್ಮಿಂದ ಬಯಸಿರುತ್ತಾರೆ. ನಾವು ಹೇಳಿದಂತೆ ಎಂದು ಕೇಳುತ್ತಾನೆ. ನಮ್ಮಿಷ್ಟಾನೇ ಅವನದ್ದು ಕೂಡಾ ಆಗಿರುತ್ತದೆ. ಅಡಿಯಿಂದ ಮುಡಿಯವರೆಗೂ ಅವರ ಎಣಿಕೆಯಂತೆ ನಡೆಯಬೇಕು. ಅವನಿಗೆ ನಾವು ಮಾಡುವುದು ಬೇಕಾಗಿದೆಯೋ ಇಲ್ಲವೋ ಎಂಬುದು ಬೇಡಾ. ಆದರೆ ಕೆಲವು ಅಪ್ಪ ಅಮ್ಮ ಹಾಗಲ್ಲ ಮಗ ಅವನಷ್ಟಕ್ಕೆ ಅವನು ಬೆಳೆಯಲಿ. ಅವನ ಪ್ರತಿಭೆ ಅವನೆ ಪ್ರಚುರ ಪಡಿಸಿ ಕೊಳ್ಳಲಿ, ನಾವು ಪೋಷಿಸಿದರಾಯಿತು ಎಂದಿರುತ್ತದೆ. ಆದರೆ ವೆಂಕಟ ರಾಯರು ಒಂದನೆ ಸಾಲಿನ ಅಪ್ಪ. ಅದಕ್ಕೆ ಮಗ ಅವರಂದು ಕೊಂಡಂತೆ ಮಾಡದಿದ್ದರೆ, ನಿರಾಶೆ ಸಿಟ್ಟು. ರಮಾಬಾಯಿಯವರು ಎರಡನೇ ಸಾಲಿಗೆ ಸೇರಿದ ಅಮ್ಮ . ಅದಕ್ಕೆ ಇಲ್ಲಿ ಸ್ವಲ್ಪ ವ್ಯತ್ಯಾಸ.
ಅಚ್ಯುತ ಲಕ್ಷಗಟ್ಟಲೆ ಖರ್ಚು ಮಾಡಿ ಏನೆನೆಲ್ಲ ಕಲ್ತಿದೀಯಾ. ಏನಾದರೂ ಕೆಲಸ ಮಾಡು. ಮನೆಯಿಂದ ಹೊರಬಿದ್ದು ನಿನ್ನ ಹತ್ತಿರ ಆದ ಸಾಧನೆಯನ್ನು ಮಾಡು ಎಂದು ಒಂದು ದಿನ ಅಪ್ಪ ತಮ್ಮ ಬುಡದಲ್ಲಿ ಕುಳ್ಳಿರಿಸಿಕೊಂಡು ಹೇಳಿದ್ದರು. ಅಂದು ನಾನು ಕೇಳಿದ್ದೆ ಅಪ್ಪ ನಾನು ನಿನಗಿರುವ ಒಬ್ಬನೇ ಮಗ. ನಾನು ನಿಮ್ಮನ್ನು ಬಿಟ್ಟು ದೂರ ಉಳಿಯುವುದು ಸರಿಯೇ? ಎಂದು. ಅದಕ್ಕವರು ಮಗ ಇದು ಸರಿತಪ್ಪಿನ ವಿಚಾರವಲ್ಲ. ಹೊರಗಡೆ ಉಳಿದರೆ ಜಗತ್ತಿನ ಅರಿವಾಗುತ್ತದೆ. ನೋಡು, ಇನ್ನು ಹತ್ತುವರ್ಷವಂತೂ ಮನೆ ಕಡೆ ಚಿಂತೆ ಇಲ್ಲ. ಎಂಬ ಧೈರ್ಯದ ಮಾತನ್ನಾಡಿದರು. ಆಗಲೇ ನನ್ನ ಮನಸ್ಸಿನಲ್ಲಿ : ವೃದ್ಧಾಶ್ರಮವನ್ನು ಮಾಡಬೇಕು ಎಂಬ ಯೋಚನೆ ಬಂದಿತ್ತು. ಇದನ್ನು ಅಪ್ಪನ ಹತ್ತಿರವೂ ಹೇಳಿದ್ದೆ. ಅಪ್ಪನಿಗೂ ಇದರ ಕುರಿತು ಆಸಕ್ತಿಯಿತ್ತು. ನನ್ನ ದುಡಿಮೆಯ ಆದಾಯವನ್ನು ಇದಕ್ಕೆ ಬಳಸಬೇಕೆಂಬ ಬಯಕೆ ನನ್ನದಾಗಿತ್ತು. ಅದಕ್ಕೆ ಪ್ರಯತ್ನ ಪಡುತ್ತಿದ್ದೆ. ಫೋನ್‌ ರಿಂಗಾಯಿತು. ಸದಾನಂದ! ನನ್ನ ಅಲೋಚನೆಗಳಿಗೆ ಬ್ರೇಕ್‌ ಬಿತ್ತು.

*****************

ನಾನು ಬೆಂಗಳೂರು ಸೇರುವಾಗಲೇ
ಇಪ್ಪತ್ನಾಲ್ಕು ವರ್ಷ ವಯಸ್ಸಾಗಿತ್ತು. ನಾನು ಹತ್ತನೇ ತರಗತಿಯಲ್ಲಿರುವಾಗಲೇ ನಾನೊಬ್ಬಳನ್ನು ಇಷ್ಟಪಡುತ್ತಿದ್ದೆ. ಯಾವ ಯೋಗವೋ ಏನೋ ಗ್ರಾಜ್ಯುಯೇಷನ್‌ ಮುಗಿಯುವವರೆಗೂ ಒಂದೇ ಊರಿನಲ್ಲಿ ನಾನು ಅವಳು ಕಲಿತೆವು. ನಿತ್ಯ ಸಂಪರ್ಕ ನಮ್ಮಿರ್ವರ ನಡುವೆ ಇತ್ತು. ನಾನು ಕಾಮರ್ಸ್‌ ತೆಗೆದುಕೊಂಡೆ. ಅವಳು ಸೈನ್ಸ್‌ ಆಯ್ಕೆ ಮಾಡಿಕೊಂಡಳು. ನಾನು ಬಿ.ಬಿ.ಎಂ. ಮಾಡಿದೆ. ಅವಳು ಎಂ.ಬಿ.ಬಿ.ಎಸ್‌. ನಾನು ಎಂ.ಸಿ.ಎ. ಅವಳು ಎಂ.ಡಿ. ಆದರೆ ಇಬ್ಬರೂ ಒಂದೇ ಊರಿನಲ್ಲಿ. ನನಗಂತೂ ಅವಳ ಮೇಲೆ ಪ್ರೀತಿಯಿತ್ತು. ಆತ್ಮೀಯತೆ ಇತ್ತು. ಜೀವದ ಗೆಳತಿಯನ್ನಾಗಿ ಸ್ವೀಕರಿಸಿದ್ದೆ. ಅವಳಿಗೂ ಅಷ್ಟೇ ಪ್ರೀತಿ ಇತ್ತೋ ಇಲ್ಲವೋ ಗೊತ್ತಿಲ್ಲ. ಆತ್ಮೀಯತೆಯಂತೂ ಬಹಳವಿತ್ತು. ಇಬ್ಬರೂ ವೈಯಕ್ತಿಕ ವಿಷಯಗಳನ್ನು ಮಾತಾಡಿಕೊಳ್ಳುತ್ತಿದ್ದೆವು. ಕೆಲಮೊಮ್ಮೆ ನನ್ನ ಕನಸನ್ನು ಅವಳೆದುರು ಬಿಚ್ಚಿಡುತ್ತಿದ್ದೆ. ಅವಳಿಗೂ ನನ್ನ ಮೇಲೆ ಪ್ರೀತಿಯಿತ್ತು. ಪ್ರಪೋಸ್‌ ಮಾಡುವ ಧೈರ್ಯ ಇಬ್ಬರಿಗೂ ಇರದೇ ಕೊನೆಗೆ ಹಿರಿಯರ ಸಹಕಾರ ಬೇಕಾಯಿತು.
ನಾನು ನನ್ನವಳಿಗೆ ಒಂದು ದಿನ ವೆಂಕಟರಾಯರ ಸಂಕಟದ ಕತೆ ಹೇಳಿದೆ. ನಾನೂ ಊರಿಗೆ ಹಿಂತಿರುಗುವ ವಿಷಯವನ್ನು ಅವಳಿಗೆ ತಿಳಿಸಿದೆ. ಮತ್ತು ನನ್ನ ಯೋಚನೆಯ ಕುರಿತು ತಿಳಿಸಿದ್ದೆ. ಅವಳು ಸಂಪೂರ್ಣ ಸಮ್ಮತಿಸಿದ್ದಳು. ಅಪ್ಪನನ್ನು ಕಳೆದುಕೊಂಡ ಅವಳಿಗೆ ಅವಳಮ್ಮ ಹಾಗೂ ನಾನು ಏನು ಹೇಳಿದರೂ ಅವಳ ಒಪ್ಪಿಗೆ ಗ್ಯಾರಂಟಿ.
**************

ಸದಾನಂದನ ಕಾಲ್‌ ಬಂದ ಮರುದಿನ ರಾಯರ ಮನೆಗೆ ಹೋದೆ. ಚಹಾ ಕುಡಿಯುತ್ತಿದ್ದರು ದಂಪತಿಗಳು. ನಿಮ್ಮ ಹತ್ತಿರ ಒಂದು ವಿಷಯ ಮಾತಾಡಬೇಕು.
ನಾವು ಊರಿಗೆ ಬರುವ ವೇಳೆಗೆ ಮರುಮನೆ ಮುಕ್ತಾಯ ಹಂತದಲ್ಲಿತ್ತು. ಅಪ್ಪನಿಗೂ ರಾಯರಿಗೂ ಪರಿಚಯವಾಯಿತು. ನಾಲ್ಕೇ ದಿನದಲ್ಲಿ ಐವತ್ತು ವರ್ಷದ ಸ್ನೇಹಿತರಂತೆ ನಡೆದುಕೊಳ್ಳ ತೊಡಗಿದರು. ಆಶ್ರಮದ ಮುಕ್ತಾಯ ವಾಗುವವರೆಗೂ ಇಬ್ಬರು ಸಮಾನವಾಗಿ ದುಡಿದರು. ಈ ಮಧ್ಯೆ ನನ್ನ ಮದುವೆಯ ಆಯಿತು ಸಿಂಪಲ್ಲಾಗಿ !
ವೆಂಕಟರಾಯರು ನಮ್ಮಲ್ಲಿಗೆ ಬಂದು ನಾಲ್ಕು ವರ್ಷ ಕಳೆಯುತ್ತ ಬಂದಿತ್ತು. ಆಶ್ರಮಕ್ಕೆ ಮತ್ತಷ್ಟು ಮಂದಿ ವಯೋವೃದ್ದರು ಸೇರಿದ್ದರು. ನನಗೂ ಒಂದು ಮಗುವಾಗಿತ್ತು. ಹತ್ತು ಜನ ಅಜ್ಜ, ಅಜ್ಜಿಯರ ಪ್ರೀತಿ ಅದಕ್ಕೆ ದೊರಕುತ್ತಿತ್ತು. ನಮ್ಮ ಮರುಮನೆ ಯಲ್ಲಿರುವ ವೃದ್ದರ ಕತೆಯನ್ನು ಕೇಳಿದಾಗ ನನಗನಿಸಿತು. ಇಂದು ವೃದ್ದಾಶ್ರಮ ಅನಿವಾರ್ಯವೂ ಹೌದು ಅಗತ್ಯವು ಕೂಡಾ ಮಕ್ಕಳ ಪ್ರೀತಿ ಬೇಕೆಂಬ ಹಿರಿಯರು, ಮಕ್ಕಳಿಗೆ ಹಿರಿಯರು ಹೊರೆ. ತಮ್ಮ ಕೆಲಸವೇ ನಮಗಾಗಲ್ಲ ಇವರದೊಂದು ಎನ್ನುವ ಬದಲು ವೃದ್ದಾಶ್ರಮಕ್ಕೆ ಸೇರಿಸಿ ದೂರದಿಂದಲೇ ನೀಡುವ ಎನ್ನುವ ಬಾವ ಇವರಿಗೆ. ನಾನು ತೀರ್ಮಾನಿಸಿದ್ದೆ. ಈ ಮರುಮನೆ ನಮಗೆ ಮುಂದೆ ಉಪಯೋಗಕ್ಕೆ ಬರುವಂತಹದ್ದು. ನಮ್ಮ ಮಕ್ಕಳು ಮುಂದೇ ಹೇಗಿರುತ್ತಾರೋ? ಅವರು ದೂರವಿರಲಿ. ನಾವು ಹತ್ತಿರ ವಿದ್ದು ಹೊರೆಯಾಗುವುದಕ್ಕಿಂತ ದೂರವಿದ್ದೇ ಪ್ರೀತಿ ನೀಡೋಣ ಅಲ್ವೇ?
************
ನನ್ನ ಕೂದಲು ಬೆಳ್ಳಗಾಗಿತ್ತು . ಮಗನ ಮದುವೆಯಾಗಿ ವರ್ಷ ಕಳೆದಿತ್ತು. ಬೆಳಂಬೆಳಿಗ್ಗೆ ಒಂದು ಮೆಸೇಜ್‌ ಸೆಲ್‌ಗೆ ಬಂದಿತ್ತು. ನಾನು ಸದಾನಂದ, ವೆಂಕಟರಾಯರ ಮಗ. ನಿಮ್ಮ ಆಶ್ರಮದಲ್ಲಿ ನಮಗೊಂದು ಜಾಗವಿದೆಯೇ? ಎಂದು.
-ನಾಗರಾಜ ಮತ್ತಿಗಾರ

Wednesday, January 7, 2009

ಚಂದ್ರ ದಾರಿಯ ಕಥನ


ಲೇಖ­ಕರು: ಟಿ. ಆರ್‌. ಶಿವ­ಪ್ರ­ಸಾದ್‌
ಬೆಲೆ: 120/-
ಪ್ರಥಮ ಮುದ್ರಣ: 2008
ಪ್ರಕಾ­ಶ­ಕರು: ಚಿಂತ­ನ­ಗಂಗಾ ಪ್ರಕಾ­ಶನ
ಲಲಿತ ನಿವಾಸ, ನಂ. 2036/3,
ಮಾಗ­ನೂರು ಬಡಾ­ವಣೆ, ವಿದ್ಯಾ­ನ­ಗರ, ದಾವ­ಣ­ಗೆರೆ


ಕೇರಳ ಸಮುದ್ರ ಅಂಚಿ­ನ­ಲ್ಲ­ರುವ ಅಗದಿ ಪುಟ್ಟ ಗ್ರಾಮ ತುಂಬಾ. ಇಲ್ಲಿ­ರು­ವುದು ಮೀನು­ಗಾ­ರರ ಗುಡಿ­ಸಲು. ಅಲ್ಲೊಂದು ಚರ್ಚ್‌. ರಸ್ತೆ ಸಂಪ­ರ್ಕ­ವಿಲ್ಲ. ಯಾವುದೇ ಮೂಲ ಸೌಕ­ರ್ಯವು ಇಲ್ಲ ಇಂತಹ ಕಡೆ ನಮ್ಮ­ದೇ­ಶದ ಹೆಮ್ಮೆಯ ಬಾಹ್ಯಾ­ಕಾಶ ಸಂಸ್ಥೆ ಇಸ್ರೊ ಮೊದಲ ಹೆಜ್ಜೆ­ಯನ್ನು ಇಲ್ಲಿಂ­ದಲೆ ಪ್ರಾರಂ­ಭಿ­ಸಿತು.
ಭಾರ­ತೀಯ ಬಾಹ್ಯಾ­ಕಾಶ ವಿಜ್ಞಾ­ನದ ಆವಿ­ಷ್ಕಾ­ರದ ಎಳೆ ಎಳೆ­ಯನ್ನು ಸವಿ­ವ­ರ­ವಾಗಿ ತಿಳಿ­ಸುವ ಅಪ­ರೂ­ಪದ ಪುಸ್ತಕ `ಚಂ­ದ್ರ­ಯಾನ'.
ಟಿವಿ 9 ಸುದ್ದಿ ವಾಹಿ­ನಿ­ಯಲ್ಲಿ ದೆಹಲಿ ವರ­ದಿ­ಗಾ­ರ­ರಾಗಿ ಕಾರ್ಯ­ನಿ­ರ್ವ­ಹಿ­ಸು­ತ್ತಿ­ರುವ ಟಿ.ಆರ್‌. ಶಿವ­ಪ್ರ­ಸಾದ್‌ ಸುಂದ­ರ­ವಾಗಿ ಬರೆ­ದಿ­ರುವ ಪುಸ್ತ­ಕ­ವಿದು. ಈ ಹೊತ್ತಿ­ಗೆ­ಯಲ್ಲಿ 5 ಹಂತ­ಗ­ಳಿವೆ. ಮೊದ­ಲನೆ ಹಂತ, ಸಾಧ­ನೆಯ ಹಾದಿ­ಯಲ್ಲಿ. ಇದ­ರಲ್ಲಿ ಮೊದಲ ಹೆಜ್ಜೆ, ತುಂಬಾ ತೀರ­ದಲ್ಲಿ, ಅಮೆ­ರಿಕಾ- ರಷ್ಯಾ ನಡುವೆ ಶೀತಲ ಸಮರ, ಇತಿ­ಹಾಸ ನಿರ್ಮಿ­ಸಿದ ಇಸ್ರೊ ಎನ್ನುವ ಶೀರ್ಷಿಕೆ ಅಡಿ­ಯಲ್ಲಿ ಲೇಖ­ನ­ಗಳು ಇವೆ.
ಎರ­ಡನೇ ಹಂತ ಎಂದೂ ಮುಗಿ­ಯದ ಅನಂತ ಯಾನ. ಇದ­ರಲ್ಲಿ ದೇಶ-ದೇ­ಶ­ಗ­ಳನ್ನು ಬೆಸೆವ ಚಂದ್ರ­ಯಾನ, ಚಂದ್ರ­ಯಾ­ನದ ಪ್ರಯೋಗ ಹಾಗೂ ಉದ್ದೇಶ, ಬ್ಯಾಲಾಳು ಗ್ರಾಮಕ್ಕೆ ಬಂದ ಭಾಗ್ಯ, ಶ್ರೀರಂ­ಗ­ಪ­ಟ್ಟ­ಣ­ದಿಂದ ಚಂದಿ­ರ­ನ­ವ­ರೆಗೆ, ಭಾರ­ತ­ದೆ­ಡೆಗೆ ಅಮೆ­ರಿಕಾ ಅನು­ಮಾನ, ಝಂಡಾ ಉಂಚಾ ರಹೇ ಹಮಾರಾ, ಚಂದ್ರ­ಯಾನ- ಭಾಗ 2 ಎನ್ನುವ ಲೇಖ­ನ­ಗ­ಳಿವೆ. ಮೂರನೇ ಹಂತ­ದಲ್ಲಿ ನಿಧಿ- ನೀರು- ನೆರಳು. ಇದ­ರಲ್ಲಿ ಚಂದ್ರನ ಜನ್ಮ ರಹಸ್ಯ, ಚಂದ್ರ­ನಲ್ಲಿ ಅಂತಾ­ದೇ­ನೈತಿ ?, ಚಂದ್ರನ ಮೇಲೆ ಹೀಲಿಯಂ ಎಂಬ ನಿಧಿ !, ಚಂದ್ರ­ನಲ್ಲಿ ನೀರಿ­ದೆಯೇ ?, ಚಂದ್ರನ ಮೇಲೊಂದು ಮನೆಯ ಮಾಡಿ, ಚಂದ್ರ, ಗ್ರಹ, ನಕ್ಷ­ತ್ರ­ಗಳು ಯಾರ ಆಸ್ತಿ ? ಎನ್ನುವ ಮಾಹಿ­ತಿ­ಗ­ಳಿವೆ. ನಾಲ್ಕನೇ ಹಂತ ಬಾಹ್ಯಾ­ಕಾ­ಶ­ವೆಂಬ ನಿತ್ಯ ಕೌತುಕ. ಇಲ್ಲಿ ಹೀಗೊಂದು ಚಂದ್ರನ ಪ್ರೇಮ ಪ್ರಸಂಗ, ಚಂದಿರ ತಂದಾ ಹುಣ್ಣಿಮೆ ರಾತ್ರಿ, ಅಂತ­ರಿ­ಕ್ಷ­ದಲ್ಲಿ ಅಪಾ­ಯ­ಕಾರಿ ಕಸ, ಬಾಹ್ಯಾ­ಕಾ­ಶ­ವೆಂಬ ಆಕ್ಸಿ­ಡೆಂಟ್‌ ಜೋನ್‌ ಎಂಬ ಅಧ್ಯಾ­ಗಳು ಬರು­ತ್ತವೆ. ಐದನೇ ಹಂತ ಎಲ್ಲಗೋ ಪಯಣ, ಯಾವುದೋ ದಾರಿ!. ದಿ ಗ್ರೇಟ್‌ ಮೂನ್‌ ಹೋಕ್ಸ್‌ಘ- 1835, ಚಂದ್ರನ ಮೇಲೆ ಮಾನ­ವನ ಮಹಾ­ಮೋಸ !?, ಮನು­ಕುಲ ಮರೆ­ಯ­ಲಾ­ಗದ ಪ್ರಾಣಿ, ಕೀಟ­ಗಳು, ಎಲ್ಲಿಗೋ ಪಯಣ, ಯಾವುದೋ ದಾರಿ ಎಂಬ ಲೆಖ­ನ­ಗಳ ಸಂಗ್ರ­ಹ­ಗಳು ಬರು­ತ್ತವೆ.
ಈ ಪುಸ್ತ­ಕ­ದ­ಲ್ಲಿ­ರುವ ಪ್ರತಿ­ಯೊಂದು ಹಂತವು ಅತ್ಯಂತ ಕೌತು­ಕ­ತೆ­ಯಿಂದ ಲೇಖ­ನ­ಗ­ಳನ್ನು ಓದಿ­ಕೊಂಡು ಹೋಗು­ತ್ತದೆ. ಶಿವ­ಪ್ರ­ಸಾದ್‌ ಅವರು ತಮ್ಮ ಲೇಖ­ನದ ಜೊತೆಗೆ ಪತ್ರ­ಕ­ರ್ತ­ರಾದ ವಿನಾ­ಯಕ ಭಟ್‌, ವೀರಣ್ಣ ಕಮ್ಮಾರ, ರಜನಿ ಎಂ. ಜಿ, ಚೀ.ಜ. ರಾಜೀವ್‌, ವಿಭವ್‌ ಬರೆದ ಮಾಹಿ­ತಿ­ಪೂರ್ಣ ಬರೆ­ಹ­ಗ­ಳನ್ನು ಇಟ್ಟಿ­ದ್ದಾರೆ. ಮೊದಲ ಹೆಜ್ಜೆ­ಯ­ಲ್ಲಿಯೇ ಲೇಖ­ನ­ಗಳು ಕುತೂ­ಹ­ಲ­ವನ್ನು ಕೆರ­ಳಿ­ಸುತ್ತಾ ಸಾಗು­ತ್ತದೆ. ನಮ್ಮ ದೇಶದ ವಿಜ್ಞಾ­ನಿ­ಗಳು ದನದ ಕೊಟ್ಟಿ­ಗೆ­ಯನ್ನೇ ಪ್ರಯೋ­ಗಾ­ಲ­ವಾಗಿ ಮಾಡಿ­ಕೊಂಡು ಯಶ­ಸ್ವಿ­ಯಾದ ಕತೆ­ಯನ್ನು ಓದುತ್ತ ಹೋದಂತೆ ನಮಗೆ ನಾವೇ ಹೆಮ್ಮೆ ಪಡುತ್ತಾ ಹೋಗು­ತ್ತೇವೆ. ಪ್ರತಿ­ಯೊಂದು ಲೇಖ­ನದ ಜೊತೆಗೆ ಆಸ­ಕ್ತಿ­ದಾ­ಯಕ ವಿಷ­ಯ­ಗ­ಳನ್ನು ಟಿಪ್ಸ್‌ ರೀತಿ ನೀಡುತ್ತಾ ಹೋಗಿ­ರು­ವುದು ಈ ಹೊತ್ತಿ­ಗೆಯ ವಿಶೇಷ.
ಬಾಹ್ಯಾ­ಕಾಶ ಸಂಶೋ­ಧ­ನೆ­ಗ­ಳಲ್ಲಿ ಬಲಿಷ್ಠ ರಾಷ್ಟ್ರ­ಗಳ ತೀವ್ರ ಪೈಪೋ­ಟಿ­ಯನ್ನು ಎದು­ರಿ­ಸುತ್ತಾ ನಮ್ಮ ಸಾಧ­ನೆ­ಯನ್ನು ಮಾಡುತ್ತಾ ಹೋದ ಭಾರ­ತೀಯ ವಿಜ್ಞಾ­ನಿ­ಗಳ ಸಾಧ­ನೆಯ ಹಾದಿ­ಯನ್ನು ಈ ಪುಸ್ತಕ ಸ್ಪಷ್ಟ­ಪ­ಡಿ­ಸು­ತ್ತದೆ. ಶಿವ­ಪ್ರ­ಸಾದ್‌ ಅವರು `ಚಂ­ದ್ರ­ಯಾನ'ದ ಮೂಲಕ ಬಾಹ್ಯಾ­ಕಾಶ ತಂತ್ರ­ಜ್ಞಾ­ನದ ವಿಭಿನ್ನ ಮಜ­ಲು­ಗ­ಳನ್ನು ಸ್ಪಷ್ಟ­ವಾಗಿ ತೋರಿ­ಸು­ವಲ್ಲಿ ಯಶ­ಸ್ವಿ­ಯಾ­ಗಿ­ದ್ದಾರೆ.

ನಾಗರಾಜ ಮತ್ತಿಗಾರ

(ಉದಯಾವಾಣಿ ಪುಸ್ತಕಸಂಪದದಲ್ಲಿ ಪ್ರಕಟಗೊಂಡ ಲೇಖನ)

FEEDJIT Live Traffic Feed