Saturday, February 14, 2009

ಹಗಲು ಕಳೆಯುವ ಸಮಯ


ಎಂದಿನಂತೆ ಅಂದೂ ನಾನು ಬೆಳಿಗ್ಗೆ ಆರರ ಫಸ್ಟ ಬಸ್ಸಿಗೆ ಹೊರಟಿದ್ದೆ. ದಿನಾಲೂ ಕಾಣುವ ವೆಂಕಟರಾಯರು ಅವತ್ತು ಕಾಣಲಿಲ್ಲ. ಆಶ್ಚರ್ಯ! ಐದು ವರ್ಷದದಿಂದ ಬೇಸಿಗೆ, ಮಳೆ, ಚಳಿಗಾಲದ ಪ್ರತಿದಿನವು ಅವರ ದರ್ಶನವನ್ನು ಮಾಡದೆ ನಾ ಹೋದದ್ದಿಲ್ಲ. ಅವರು ಹಾಗೇ ನಾನು ಕಾಣುವವರೆಗೆ ವಾಕಿಂಗಿಂದ ಮನೆಗೆ ಹೋಗುತ್ತಿರಲಿಲ್ಲ. ಯಾಕೆಂದರೆ ಅವರ ಮನೆಗೆ ಏನೇ ಸಾಮಾನು ಸರಂಜಾಮು ಬೇಕಿದ್ದರು ನನ್ನ ಹತ್ತಿರವೇ ಹೇಳುತ್ತಿದ್ದರು, ನಾನೂ ತಂದು ಕೊಡುತ್ತಿದ್ದೆ. ನಮ್ಮಲ್ಲಿ ಒಂದು ರೀತಿಯ ಆತ್ಮೀಯತೆ. ಸ್ನೇಹ, ಪ್ರೀತಿ, ಎಲ್ಲವೂ ಇತ್ತು. ನಾನೂ ಭಾನುವಾರ ಅವರ ಮನೆಗೆ ಚಹಾ ಕುಡಿಯಲಿಕ್ಕೆ ಹೋಗುತ್ತಿದ್ದೆ. ಅಪರೂಪಕ್ಕೆ ಊಟಕ್ಕೂ.
ವೆಂಕಟರಾಯರ ಹೆಂಡತಿ ರಮಾಬಾಯಿ. ಮನೆಗೆ ಹೋದರೆ ಉತ್ತಮ ಆಧರಾತಿಥ್ಯ. ತುಂಬಾ ಹತ್ತಿರವಾಗುತ್ತಿದ್ದರು. ಇಂತಿರುವಾಗ ದಿನಾಲೂ ಕಾಣುವವರು ಕಾಣದಿದ್ದಾಗ ಎನೋ ಕಳೆದು ಕೊಂಡ ಹಾಗೇ ಅನ್ನಿಸುತ್ತದೆ. ಅದಕ್ಕಾಗಿ ತಡ ಮಾಡಲಿಲ್ಲ. ನೇರ ಅವರ ಮನೆಗೆ ಹೋದೆ. ಮೊದಲೇ ವಯಸ್ಸಾದವರು. ಗಂಡನಿಗೆ ಹೆಂಡತಿ ; ಹೆಂಡತಿಗೆ ಗಂಡ ಆಶ್ರಯ
ಅವರ ಮನೆಯೊಳಗೆ ನಾ ಕಂಡಿದ್ದೇನು! ರಾಯರು ಎಡ ಕೈಯನ್ನು ಎದೆಯ ಮೇಲೆ ಒತ್ತಿಕೊಂಡಿದ್ದಾರೆ. ಉಸಿರಾಟಕ್ಕೆ ತೊಂದರೆ ಆಗಿರುವುದು ಸ್ಪಷ್ಟ. ರಮಾಬಾಯಿ ಅವರು ಟೆನ್ಷನ್‌ ಮಾಡಿಕೊಂಡು ಕುಳಿತಿದ್ದಾರೆ. ಅಮ್ಮ , ಎನಾಯ್ತು ರಾಯರಿಗೆ ಅಂದೆ. ಎನೋಪ್ಪಾ ರಾತ್ರಿ ಇದ್ದಕ್ಕಿದ್ದ ಹಾಗೇ ಎದೆ ನೋವು ಬಂತು . ಡಾಕ್ಟ್ರಿಗೆ ಪೋನ್‌ ಮಾಡಿದೆ. ಬಂದು ಔಷಧಿ ಕೊಟ್ಟು ಹೋಗಿದ್ದಾರೆ. ಮತ್ತೇನು ಹೇಳಲಿಲ್ಲ. ನಿಮ್ಮವರು ಯಾರಾದ್ರು ಇದ್ರೆ ಬೆಳಿಗ್ಗೆ ದವಾಖಾನೆಗೆ ಕಳಿಸಿ ಎಂದಿದ್ದಾರೆ ನೀ ಸ್ವಲ್ಪ ಹೋಗಿ ಬರ್ತೀಯಾ? ಅಂದರು ರಮಾ ಬಾಯಿಯವರು .ಆಯ್ತು ಎಂದವನೆ ಹೊರಟೆ.
ಹೊರನೋಟಕ್ಕೆ ಸುಖಿಸಂಸಾರ. ಗಂಡ ಹೆಂಡತಿ ಇಬ್ಬರೇ ಇರೋದು. ಇಬ್ಬರು ರೀಟೈಡ್‌ ಟೀಚರ್ಸ್‌. ಹಣಕಾಸಿನ ತೊಂದರೆ ಎನೂ ಇಲ್ಲ. ಒಬ್ಬನೇ ಮಗ ಇರೋದು. ಹೊರ ದೇಶದಲ್ಲಿ ಇದಾನಂತೆ. ಮಗನ ಬಗ್ಗೆ ಒಂದು ದಿನಾನೂ ನನ್ನಲ್ಲಿ ಪ್ರಸ್ತಾವಿಸಿಲ್ಲ, ಈ ಐದು ವರ್ಷದಲ್ಲಿ ; ನಾನಾಗಿಯೂ ಕೇಳಲಿಲ್ಲ. ಅವರು ಯಾವತ್ತು ತಮ್ಮ ವೈಯಕ್ತಿಕ ವಿಚಾರವನ್ನು ಹೇಳಲಿಲ್ಲ ನನಗೆ ರಾಯರ ಬಗ್ಗೆ ಗೊತ್ತಿರುವುದನ್ನು ಹೇಳಿ ಹೊರಟೆ.
***************************
ವೆಂಕಟರಾಯರು ತೀರ್ಥಳ್ಳಿ ಹತ್ತಿರದ ಕೋಣಂದೂರಿನವರು. ಪ್ರಾಥಮಿಕ ಶಿಕ್ಷಣವನ್ನು ಮುಗಿದ ಕೂಡಲೇ ಊರನ್ನು ಬಿಟ್ಟವರು ಮತ್ತೆ ಊರಿನ ಕಡೆ ಮುಖವನ್ನು ಹಾಕಿದವರಲ್ಲ, ಮೈಸೂರು ಸೇರಿ, ಅಲ್ಲೇ ವಿದ್ಯಾಭ್ಯಾಸ. ಅಲ್ಲಿಯೇ ಹೈಸ್ಕೂಲ್‌ ಮೇಸ್ಟ್ರಾಗಿ ವೃತ್ತಿ ಜೀವನ ಪ್ರಾರಂಭ. ರಮಾಭಾಯಿಯವರು ನಂಜನಗೂಡಿನವರು. ರಾಯರ ಸಹೋದ್ಯಗಿ ಕೂಡಾ. ಪ್ರೀತಿಸಿ ಮದುವೆಯಾದರು ಅನ್ನುವುದಕ್ಕಿಂತ ಪರಸ್ಪರ ಪರಿಚಯ. ಒಟ್ಟಿಗೆ ಎರಡು ವರ್ಷ ಕೆಲಸ ಮಾಡಿ ರೂಢಿ. ಜೀವನ ಪೂರ್ತಿ ಒಟ್ಟಿಗೆ ಇದ್ದರೆ ಹೇಗೆ? ಎಂದು ಯೋಚಿಸಿ ಸಂಸಾರ ಪ್ರಾರಂಭಿಸಿದರು.
ಮೊದಲೇ ಇಬ್ಬರ ಒಪ್ಪಂದಮೊಂದಿತ್ತು. ಗಂಡಾಗಲಿ ಹೆಣ್ಣಾಗಲಿ ಒಂದೇ ಮಗು ಸಾಕು ಎಂದು. ಅದರಂತೆ ರಾಯರ ಯೋಗವೆಂಬಂತೆ ಗಂಡು ಮಗುವೇ ಆಯಿತು. ಸದಾನಂದ ಎಂಬ ನಾಮಕರಣವು ಆಯಿತು. ತಮ್ಮನ್ನು ಸದಾ ಆನಂದದಲ್ಲಿ ಇಡಬೇಕು ಎಂಬ ಬಯಕೆಯಿಂದ. ಉತ್ತಮ ಸಂಸ್ಕಾರ ನೀಡಿದರು. ಮೊದಲೇ ಹೇಳಿ ಕೇಳಿ ಮಾಸ್ತರ್‌ ಮಂದಿ . ಮಗನ್ನು ಸ್ಟ್ರಿಕ್ಟಾಗಿ ಬೆಳಸಿದರು. ಇಂಜನಿಯರಿಂಗ್‌ ಕಲಿಸಿದರು. ಮಗ ಬುದ್ಧಿವಂತ ಕೊನೆಯ ಸೆಮಿಸ್ಟರಲ್ಲೆ ನೌಕರಿಯು ದೊರೆಯಿತು ವಿಪ್ರೋದಲ್ಲಿ. ಎರಡನೆ ವರ್ಷಕ್ಕೆ ವಿದೇಶಕ್ಕೆ ಹೋಗುವ ಯೋಗ . ರಾಯರ ಸಂತೋಷಕ್ಕೆ ಎಣೆಯಿರಲಿಲ್ಲ. ನಮ್ಮ ಕುಟುಂಬದಲ್ಲಿ ಒಬ್ಬನಾದರು ಹೊರ ದೇಶಕ್ಕೆ ಹೋಗುತ್ತಿದ್ದಾನಲ್ಲ ಎಂಬುದೊಂದೆ ಸಡಗರಕ್ಕೆ ಕಾರಣವಾಗಿತ್ತು.
ಸಮುದ್ರವನ್ನು ಉತ್ತರಿಸಿ ಹೋಗುವ ಮಗನಿಗೊಂದು ಮದುವೆ ಎಂಬುದೊಂದನ್ನು ಮಾಡಿ ಕಳಿಸಿದರೆ ತಮ್ಮ ಜವಾಬ್ದಾರಿ ಮುಗಿತು ಎಂಬ ಅನಿಸಿಕೆ. ಮಗನ ಹತ್ತಿರ ಕೇಳಲಿಲ್ಲ ನೀನು ಯಾರನ್ನಾದರನ್ನು ಮೆಚ್ಚಿದ್ದಿಯಾ ಎಂದು. ತಾವೇ ಹೆಣ್ಣೊಂದನ್ನು ನೋಡಿದರು. ಮಗನಿಗೆ ಹೇಳಬೇಕು ಎಂಬಷ್ಟರಲ್ಲಿ, ಸದಾನಂದ ಸತಿ ಸಂತಿಗೆ ಮನೆಗೆ ಅಡಿಯಿಟ್ಟ. ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡರು ರಾಯರು. ಅಲ್ಲಿಂದ ಈ ಮಗ ನಮ್ಮ ಅಂಕೆಯನ್ನು ಮೀರಿ ದೂರ ಹೊರಟಿದ್ದಾನೆ ಎನ್ನುವುದನ್ನು ಮನಗಂಡರು.
ಮಗನ ಅಪ್ಪನ ಸಂಬಂದ ಮೊದಲಿಂದಲು ಅಷ್ಟಕ್ಕಷ್ಟೆ. ಮೊದಲು ಅಪ್ಪನ ಕಂಡರೆ ಮಗನಿಗೆ ಹೆದರಿಕೆ ಇತ್ತು, ನಂತರ ಅಪ್ಪನಿಗೆ ಮಗನ ಬಗ್ಗೆ ಭಯ ಪ್ರಾರಂಭವಾಯಿತು, ಕೊನೆಗಾಲಕ್ಕಾದರೂ ಮಗ ಜೊತೆಯಲ್ಲಿ ಇರುತ್ತಾನೋ ಇಲ್ಲವೋ ಎಂದು. ಆದರೆ ಅಮ್ಮನೊಂದಿಗೆ ಸದಾನಂದನ ಸಹವಾಸ ಸದಾಕಾಲವಿತ್ತು. ವಾರಕ್ಕೊಮ್ಮೆಯಾದರು ಫೋನ್‌ ಮಾಡುತ್ತಿದ್ದ.

ವೆಂಕಟರಾಯರಿಗೆ ಆರೋಗ್ಯ ಹದಗೆಟ್ಟ ದಿನವೇ ಸದಾನು ಅಮ್ಮನಿಗೆ ಕರೆ ಮಾಡಿದ್ದ. ರಮಾಬಾಯಿಯವರು ವಿಷಯವನ್ನು ತಿಳಿಸಿದರು ಅಂತಹ ಪ್ರತಿಕ್ರಿಯೆಯಿರಲಿಲ್ಲ. ಹಣದ ಬಗ್ಗೆ ಯೋಚಿಸಬೇಡ, ಒಳ್ಳೆ ಡಾಕ್ಟ್ರಿಗೆ ತೊರಿಸು. ನಾನಂತು ಬರಲಿಕ್ಕೆ ಆಗಲ್ಲ. ಯಾವುದಾದರು ಆಶ್ರಮದಲ್ಲಿ ಇರಿ. ನನ್ನ ಗೆಳೆಯರಿಗೆ ಹೇಳಿ ವ್ಯವಸ್ಥೆ ಮಾಡಿಸುತ್ತೇನೆ ಎಂದಿದ್ದಾನೆ.

ನೋಡಿದೇಯಾ, ಹೀಗಿದೆ ನಮ್ಮ ಸ್ಥಿತಿ ಎಂದ ರಮಾಬಾಯಿ ಅವರ ಕಣ್ಣಲ್ಲಿ ನೀರು ಜಿನುಗಿದ್ದು ಕಾಣುತ್ತಿತ್ತು. ನಾನು ಎನು ಮಾತಾಡದೆ ಅಲ್ಲಿಂದ ಹೊರಟೆ, ಈಗ ಚಿಂತೆ ಮಾಡುವ ಸರದಿ ನನ್ನದ್ದಾಗಿತ್ತು.
************

ಒಂದೇ ಮಗನಾಗಿ ಹುಟ್ಟಬಾರದು ಯಾಕೆಂದರೆ ನಮ್ಮ ಬಗ್ಗೆ ನಮ್ಮ ತಂದೆ ತಾಯಿಗಳು ಬಹಳ ನಮ್ಮಿಂದ ಬಯಸಿರುತ್ತಾರೆ. ನಾವು ಹೇಳಿದಂತೆ ಎಂದು ಕೇಳುತ್ತಾನೆ. ನಮ್ಮಿಷ್ಟಾನೇ ಅವನದ್ದು ಕೂಡಾ ಆಗಿರುತ್ತದೆ. ಅಡಿಯಿಂದ ಮುಡಿಯವರೆಗೂ ಅವರ ಎಣಿಕೆಯಂತೆ ನಡೆಯಬೇಕು. ಅವನಿಗೆ ನಾವು ಮಾಡುವುದು ಬೇಕಾಗಿದೆಯೋ ಇಲ್ಲವೋ ಎಂಬುದು ಬೇಡಾ. ಆದರೆ ಕೆಲವು ಅಪ್ಪ ಅಮ್ಮ ಹಾಗಲ್ಲ ಮಗ ಅವನಷ್ಟಕ್ಕೆ ಅವನು ಬೆಳೆಯಲಿ. ಅವನ ಪ್ರತಿಭೆ ಅವನೆ ಪ್ರಚುರ ಪಡಿಸಿ ಕೊಳ್ಳಲಿ, ನಾವು ಪೋಷಿಸಿದರಾಯಿತು ಎಂದಿರುತ್ತದೆ. ಆದರೆ ವೆಂಕಟ ರಾಯರು ಒಂದನೆ ಸಾಲಿನ ಅಪ್ಪ. ಅದಕ್ಕೆ ಮಗ ಅವರಂದು ಕೊಂಡಂತೆ ಮಾಡದಿದ್ದರೆ, ನಿರಾಶೆ ಸಿಟ್ಟು. ರಮಾಬಾಯಿಯವರು ಎರಡನೇ ಸಾಲಿಗೆ ಸೇರಿದ ಅಮ್ಮ . ಅದಕ್ಕೆ ಇಲ್ಲಿ ಸ್ವಲ್ಪ ವ್ಯತ್ಯಾಸ.
ಅಚ್ಯುತ ಲಕ್ಷಗಟ್ಟಲೆ ಖರ್ಚು ಮಾಡಿ ಏನೆನೆಲ್ಲ ಕಲ್ತಿದೀಯಾ. ಏನಾದರೂ ಕೆಲಸ ಮಾಡು. ಮನೆಯಿಂದ ಹೊರಬಿದ್ದು ನಿನ್ನ ಹತ್ತಿರ ಆದ ಸಾಧನೆಯನ್ನು ಮಾಡು ಎಂದು ಒಂದು ದಿನ ಅಪ್ಪ ತಮ್ಮ ಬುಡದಲ್ಲಿ ಕುಳ್ಳಿರಿಸಿಕೊಂಡು ಹೇಳಿದ್ದರು. ಅಂದು ನಾನು ಕೇಳಿದ್ದೆ ಅಪ್ಪ ನಾನು ನಿನಗಿರುವ ಒಬ್ಬನೇ ಮಗ. ನಾನು ನಿಮ್ಮನ್ನು ಬಿಟ್ಟು ದೂರ ಉಳಿಯುವುದು ಸರಿಯೇ? ಎಂದು. ಅದಕ್ಕವರು ಮಗ ಇದು ಸರಿತಪ್ಪಿನ ವಿಚಾರವಲ್ಲ. ಹೊರಗಡೆ ಉಳಿದರೆ ಜಗತ್ತಿನ ಅರಿವಾಗುತ್ತದೆ. ನೋಡು, ಇನ್ನು ಹತ್ತುವರ್ಷವಂತೂ ಮನೆ ಕಡೆ ಚಿಂತೆ ಇಲ್ಲ. ಎಂಬ ಧೈರ್ಯದ ಮಾತನ್ನಾಡಿದರು. ಆಗಲೇ ನನ್ನ ಮನಸ್ಸಿನಲ್ಲಿ : ವೃದ್ಧಾಶ್ರಮವನ್ನು ಮಾಡಬೇಕು ಎಂಬ ಯೋಚನೆ ಬಂದಿತ್ತು. ಇದನ್ನು ಅಪ್ಪನ ಹತ್ತಿರವೂ ಹೇಳಿದ್ದೆ. ಅಪ್ಪನಿಗೂ ಇದರ ಕುರಿತು ಆಸಕ್ತಿಯಿತ್ತು. ನನ್ನ ದುಡಿಮೆಯ ಆದಾಯವನ್ನು ಇದಕ್ಕೆ ಬಳಸಬೇಕೆಂಬ ಬಯಕೆ ನನ್ನದಾಗಿತ್ತು. ಅದಕ್ಕೆ ಪ್ರಯತ್ನ ಪಡುತ್ತಿದ್ದೆ. ಫೋನ್‌ ರಿಂಗಾಯಿತು. ಸದಾನಂದ! ನನ್ನ ಅಲೋಚನೆಗಳಿಗೆ ಬ್ರೇಕ್‌ ಬಿತ್ತು.

*****************

ನಾನು ಬೆಂಗಳೂರು ಸೇರುವಾಗಲೇ
ಇಪ್ಪತ್ನಾಲ್ಕು ವರ್ಷ ವಯಸ್ಸಾಗಿತ್ತು. ನಾನು ಹತ್ತನೇ ತರಗತಿಯಲ್ಲಿರುವಾಗಲೇ ನಾನೊಬ್ಬಳನ್ನು ಇಷ್ಟಪಡುತ್ತಿದ್ದೆ. ಯಾವ ಯೋಗವೋ ಏನೋ ಗ್ರಾಜ್ಯುಯೇಷನ್‌ ಮುಗಿಯುವವರೆಗೂ ಒಂದೇ ಊರಿನಲ್ಲಿ ನಾನು ಅವಳು ಕಲಿತೆವು. ನಿತ್ಯ ಸಂಪರ್ಕ ನಮ್ಮಿರ್ವರ ನಡುವೆ ಇತ್ತು. ನಾನು ಕಾಮರ್ಸ್‌ ತೆಗೆದುಕೊಂಡೆ. ಅವಳು ಸೈನ್ಸ್‌ ಆಯ್ಕೆ ಮಾಡಿಕೊಂಡಳು. ನಾನು ಬಿ.ಬಿ.ಎಂ. ಮಾಡಿದೆ. ಅವಳು ಎಂ.ಬಿ.ಬಿ.ಎಸ್‌. ನಾನು ಎಂ.ಸಿ.ಎ. ಅವಳು ಎಂ.ಡಿ. ಆದರೆ ಇಬ್ಬರೂ ಒಂದೇ ಊರಿನಲ್ಲಿ. ನನಗಂತೂ ಅವಳ ಮೇಲೆ ಪ್ರೀತಿಯಿತ್ತು. ಆತ್ಮೀಯತೆ ಇತ್ತು. ಜೀವದ ಗೆಳತಿಯನ್ನಾಗಿ ಸ್ವೀಕರಿಸಿದ್ದೆ. ಅವಳಿಗೂ ಅಷ್ಟೇ ಪ್ರೀತಿ ಇತ್ತೋ ಇಲ್ಲವೋ ಗೊತ್ತಿಲ್ಲ. ಆತ್ಮೀಯತೆಯಂತೂ ಬಹಳವಿತ್ತು. ಇಬ್ಬರೂ ವೈಯಕ್ತಿಕ ವಿಷಯಗಳನ್ನು ಮಾತಾಡಿಕೊಳ್ಳುತ್ತಿದ್ದೆವು. ಕೆಲಮೊಮ್ಮೆ ನನ್ನ ಕನಸನ್ನು ಅವಳೆದುರು ಬಿಚ್ಚಿಡುತ್ತಿದ್ದೆ. ಅವಳಿಗೂ ನನ್ನ ಮೇಲೆ ಪ್ರೀತಿಯಿತ್ತು. ಪ್ರಪೋಸ್‌ ಮಾಡುವ ಧೈರ್ಯ ಇಬ್ಬರಿಗೂ ಇರದೇ ಕೊನೆಗೆ ಹಿರಿಯರ ಸಹಕಾರ ಬೇಕಾಯಿತು.
ನಾನು ನನ್ನವಳಿಗೆ ಒಂದು ದಿನ ವೆಂಕಟರಾಯರ ಸಂಕಟದ ಕತೆ ಹೇಳಿದೆ. ನಾನೂ ಊರಿಗೆ ಹಿಂತಿರುಗುವ ವಿಷಯವನ್ನು ಅವಳಿಗೆ ತಿಳಿಸಿದೆ. ಮತ್ತು ನನ್ನ ಯೋಚನೆಯ ಕುರಿತು ತಿಳಿಸಿದ್ದೆ. ಅವಳು ಸಂಪೂರ್ಣ ಸಮ್ಮತಿಸಿದ್ದಳು. ಅಪ್ಪನನ್ನು ಕಳೆದುಕೊಂಡ ಅವಳಿಗೆ ಅವಳಮ್ಮ ಹಾಗೂ ನಾನು ಏನು ಹೇಳಿದರೂ ಅವಳ ಒಪ್ಪಿಗೆ ಗ್ಯಾರಂಟಿ.
**************

ಸದಾನಂದನ ಕಾಲ್‌ ಬಂದ ಮರುದಿನ ರಾಯರ ಮನೆಗೆ ಹೋದೆ. ಚಹಾ ಕುಡಿಯುತ್ತಿದ್ದರು ದಂಪತಿಗಳು. ನಿಮ್ಮ ಹತ್ತಿರ ಒಂದು ವಿಷಯ ಮಾತಾಡಬೇಕು.
ನಾವು ಊರಿಗೆ ಬರುವ ವೇಳೆಗೆ ಮರುಮನೆ ಮುಕ್ತಾಯ ಹಂತದಲ್ಲಿತ್ತು. ಅಪ್ಪನಿಗೂ ರಾಯರಿಗೂ ಪರಿಚಯವಾಯಿತು. ನಾಲ್ಕೇ ದಿನದಲ್ಲಿ ಐವತ್ತು ವರ್ಷದ ಸ್ನೇಹಿತರಂತೆ ನಡೆದುಕೊಳ್ಳ ತೊಡಗಿದರು. ಆಶ್ರಮದ ಮುಕ್ತಾಯ ವಾಗುವವರೆಗೂ ಇಬ್ಬರು ಸಮಾನವಾಗಿ ದುಡಿದರು. ಈ ಮಧ್ಯೆ ನನ್ನ ಮದುವೆಯ ಆಯಿತು ಸಿಂಪಲ್ಲಾಗಿ !
ವೆಂಕಟರಾಯರು ನಮ್ಮಲ್ಲಿಗೆ ಬಂದು ನಾಲ್ಕು ವರ್ಷ ಕಳೆಯುತ್ತ ಬಂದಿತ್ತು. ಆಶ್ರಮಕ್ಕೆ ಮತ್ತಷ್ಟು ಮಂದಿ ವಯೋವೃದ್ದರು ಸೇರಿದ್ದರು. ನನಗೂ ಒಂದು ಮಗುವಾಗಿತ್ತು. ಹತ್ತು ಜನ ಅಜ್ಜ, ಅಜ್ಜಿಯರ ಪ್ರೀತಿ ಅದಕ್ಕೆ ದೊರಕುತ್ತಿತ್ತು. ನಮ್ಮ ಮರುಮನೆ ಯಲ್ಲಿರುವ ವೃದ್ದರ ಕತೆಯನ್ನು ಕೇಳಿದಾಗ ನನಗನಿಸಿತು. ಇಂದು ವೃದ್ದಾಶ್ರಮ ಅನಿವಾರ್ಯವೂ ಹೌದು ಅಗತ್ಯವು ಕೂಡಾ ಮಕ್ಕಳ ಪ್ರೀತಿ ಬೇಕೆಂಬ ಹಿರಿಯರು, ಮಕ್ಕಳಿಗೆ ಹಿರಿಯರು ಹೊರೆ. ತಮ್ಮ ಕೆಲಸವೇ ನಮಗಾಗಲ್ಲ ಇವರದೊಂದು ಎನ್ನುವ ಬದಲು ವೃದ್ದಾಶ್ರಮಕ್ಕೆ ಸೇರಿಸಿ ದೂರದಿಂದಲೇ ನೀಡುವ ಎನ್ನುವ ಬಾವ ಇವರಿಗೆ. ನಾನು ತೀರ್ಮಾನಿಸಿದ್ದೆ. ಈ ಮರುಮನೆ ನಮಗೆ ಮುಂದೆ ಉಪಯೋಗಕ್ಕೆ ಬರುವಂತಹದ್ದು. ನಮ್ಮ ಮಕ್ಕಳು ಮುಂದೇ ಹೇಗಿರುತ್ತಾರೋ? ಅವರು ದೂರವಿರಲಿ. ನಾವು ಹತ್ತಿರ ವಿದ್ದು ಹೊರೆಯಾಗುವುದಕ್ಕಿಂತ ದೂರವಿದ್ದೇ ಪ್ರೀತಿ ನೀಡೋಣ ಅಲ್ವೇ?
************
ನನ್ನ ಕೂದಲು ಬೆಳ್ಳಗಾಗಿತ್ತು . ಮಗನ ಮದುವೆಯಾಗಿ ವರ್ಷ ಕಳೆದಿತ್ತು. ಬೆಳಂಬೆಳಿಗ್ಗೆ ಒಂದು ಮೆಸೇಜ್‌ ಸೆಲ್‌ಗೆ ಬಂದಿತ್ತು. ನಾನು ಸದಾನಂದ, ವೆಂಕಟರಾಯರ ಮಗ. ನಿಮ್ಮ ಆಶ್ರಮದಲ್ಲಿ ನಮಗೊಂದು ಜಾಗವಿದೆಯೇ? ಎಂದು.
-ನಾಗರಾಜ ಮತ್ತಿಗಾರ

2 comments:

ಕ್ಷಮಿಸಿ ನಾ ಹೇಳೋದೆಲ್ಲ ತಮಾಷೆಗಾಗಿ said...

ಮೊದಲು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ತಂದೆ ಮಕ್ಕಳ ಸಂಭಂದ ಗಳು ಹೀಗಿರುತ್ತವೆ ಎಂದು ಕೇಳಿ ಆಶ್ಚರ್ಯ ಪಡುತ್ತಿದ್ದೆವು. ಇವತ್ತು ನಮ್ಮಲ್ಲಿ ಕೂಡಾ ಇಂತಹಾ ಪರಿಸ್ತಿತಿ ಇದೆ ಎಂಬುದನ್ನ ಚಂದವಾಗಿ ವಿವರಿಸಿದ್ದೀರಿ ಧನ್ಯವಾದಗಳು.

ವಿನಾಯಕ ಕೆ.ಎಸ್ said...

ಮತ್ತಿಗಾರರೇ,
ಬ್ಲಾಗ್‌ ಚೆನ್ನಾಗಿದೆ. ಬರಹಗಳು ಕೂಡ...
ವಿನಾಯಕ ಕೋಡ್ಸರ

FEEDJIT Live Traffic Feed