ಮನೆಯಿಂದ ಹೊರಗೆ ಬೀಳಲು ಆಸ್ಪದವಿಲ್ಲದಷ್ಟು ಮಳೆ. ’ಆಕಾಶಕ್ಕೆ ತೂತು ಬಿದ್ದಿದೆಯೋ’ ಎಂಬಂತೆ ಭಾಸವಾಗುತ್ತಿತ್ತು. ! ಅದು ಆರಿದ್ರಾ ಮಳೆ ಆರ್ಭಟ : ಇಗೊಂದು ನಾಲ್ಕೈದು ವರ್ಷದಿಂದ ಆದ್ರೆ ಮಾತ್ರ ಮಳೆಯಾಗಿತ್ತು ! ಈ ಬಾರಿ ಮಾತ್ರ ಪಕ್ಕಾ ಪಕ್ಕಾ ಆರಿದ್ರಾ ಮಳೆಯೇ ಸುರಿಯುತ್ತಿತ್ತು !! "ಮೂರ್ಖರ ಪೆಟ್ಟಿಗೆ’ ಎಂಬ ಅನ್ವರ್ಥನಾಮ ಪಡೆದು ತನಗೆ ಆ ಹೆಸರಿಟ್ಟವರನ್ನು ಬಿಡದೇ ತನ್ನ ಮುಂದೇ ಬಂದು ನಿಲ್ಲುವಂತೆ ಮಾಡಿದ ಸಮ್ಮೋಹಿನಿ ಯಾ ಮೋಹಿನಿ ರೂಪಿನ ಟಿ.ವಿ.ಯನ್ನು ನೋಡೋಣವೆಂದರೆ, ಕರೆಂಟೆಂಬ ಮಾಯಾಂಗನೆ ಒಮ್ಮೊಮ್ಮೆ ಮಾತ್ರ ಪ್ರತ್ಯಕ್ಷವಾಗಿ ಕೊನೆಯಲ್ಲಿ ಮಸುಕಾಗಿ ನಿಂತು ಮಾಯವಾಗಿತ್ತು. ಪುನಃ ದರ್ಶನ ಕೊಡದೆ ವಾರಗಳೇ ಸಂದಿದ್ದವು. ಎಂಬಿತ್ಯಾದಿ ಕಾರಣಗಳಿಂದ . . . . . . . ಯಾವ ಕಾರ್ಯಗಳನ್ನು ಮಾಡಲಾಗದೆ, ಹೆಬ್ಬಾಗಿಲಿನಲ್ಲಿ ಇರುವ ಏಕೈಕ್ ಬಾಂಕಿನ ಮಣೆಯನ್ನು ಬಿಸಿ ಮಾಡುವ ಕಾಯಕದಲ್ಲಿ ತೊಡಗಿದ್ದೆ. ಬಾಯಲ್ಲಿ ರಸಗವಳ ಮೆಲಿಯುತ್ತಿದ್ದೆ. ಅದು ಕರಗುತ್ತ ಬಂದಂತೆ, ಅಡಿಕೆ ಚೂರನ್ನು ಬಾಯಿಗೆ ಒಗೆಯುತ್ತ ಜೊತೆಯಲ್ಲಿ ತಂಬಾಕನ್ನು ಉಂಡೆ ಮಾಡಿ ಹೇಗೆಂದರೆ, ’ಘನ ಘೋರ ಸಮರ ನಡೆಯುತ್ತಿರುವಾಗ ಸೈನಿಕರು ತುಪಾಕಿಗೆ ಗುಂಡನ್ನು ತುಂಬುವ ತೆರದಿಂ ಬಾಯಿಗೆ ಒಗೆಯುತ್ತಿದ್ದೆ. ಈಡನ್ನು ಭರ್ತಿ ಮಾಡಿಕೊಳ್ಳುತ್ತಿದೆ.
ಈಂತಿಪ್ಪ ಸಮಯದೊಳ್ . . . . ಯಾಕೋ . . . . ಏನೋ . . . . ಮನಸ್ಸು ಭೂತಕಾಲದ ಬಾಲ್ಯದ ನೆನಪಿನ ಜಾಡನ್ನು ಕೆದಕಲು ಪ್ರಾರಂಭ ಮಾಡಿತ್ತು. ಎದುರಿಗೆ ಅಡ್ಡುದ್ದ ಬಿದ್ದುಕೊಂಡು ಬರೆಯುತ್ತಿದ್ದ ಅಣ್ಣಂದಿರ ಮಕ್ಕಳ ಪರದಾಟ, ಪಿಕಲಾಟ, ಹೋಮ್ ವರ್ಕ್ಸ್ ಮಾಡಿ ಮುಗಿಸಲೇ ಬೇಕೆಂಬ ಒತ್ತಡ. ಇದನ್ನೆಲ್ಲ ನೋಡುತ್ತಿರುವ ಕಾರಣದಿಂದಾಗಿಯೇ ನನ್ನ ಮನಸ್ಸು ಭೂತನ ಕಡೆಗೆ ವಾಲಿತ್ತು, ಓಡಿತ್ತು ಅಂತ ಕಾಣ್ಸುತ್ತೆ.
ಆ ನೆನಪು ಸರಿಸುಮಾರು ಇಪ್ಪತ್ತು ವರ್ಷ ರಿವರ್ಸ್‌ಗೆ ಹೋಗಿತ್ತು. ಅಂದು ನಮಗೆ ಈ ರೀತಿಯ ಪರದಾಟ, ಪಿಕಲಾಟ, ಒತ್ತಡ, . . . . . ಊಹೂಂ . . . . . ದೇವರಾಣೆ ಹಾಕಿ ಹೇಳ್ತೆನೆ, ನಾವ್ ಹ್ಯಾಂಗಪ್ಪಾ ಎಂದರೆ ಏಕ್‌ದಂ ಬಿಂದಾಸ್. ಅಂದು ಕಬ್ಬಡ್ಡಿ ಲಗೋರಿಯ ಗಮ್ಮತ್ತು ಇತ್ತು. ಕಣ್ಣಾಮುಚ್ಚಾಲೆ, ಕುಂಟಾಬಿಲ್ಲೆ ಮೋಜಿತ್ತು. ಕಳ್ಳಾ ಪೋಲಿಸ್, ಮುಟ್ಟಾಟದ ಮಜವಿತ್ತು. ಹುಡುಗಿಯರ ಜಡೆಗೆ ಬಾಲ ಕಟ್ಟುವ ಕಿಲಾಡಿಯಿತ್ತು. ಹುಡುಗಿಯರನ್ನು ಮರ ಹತ್ತಿಸಿ ಲಂಗದೊಳಗೆ ಇಣಕುವ ಪೋಲಿತನವಿತ್ತು. ಬಿಕ್ಕೆ ಗುಡ್ಡ, ನೇರಳೆ ಮರ, ಸಂಪಿಗೆ, ಕಾಳಿಗಿಡ, ಹಲಿಗೆ ಹಣ್ಣಿನ ಮಟ್ಟಿ, ಗುಡ್ಡೆಗೇರು, ಚಳ್ಳೆಹಣ್ಣು . . . . ಒಂದೇ ಎರಡೇ ಹತ್ತು ಹಲವು ಕಾಡು ಹಣ್ಣುಗಳ ರುಚಿಯನ್ನು ನೋಡುವ ಚಪಲ ನಾಲಿಗೆಯಿತ್ತು. ಅದನ್ನು ಹುಡುಕಿ ತಿರುಗಲು ನಮ್ಮ ಕಾಲಲ್ಲಿ ನಾಯಿಗೆರೆ ಇತ್ತು. ಪ್ರಾಥಮಿಕ ಶಾಲೆಯ ಲಿಗಾಡಿ ಬದುಕಿನ ದಿನಗಳು ’ಹಸಿಗೋಡೆಯ ಮೇಲೆ ಹರಳಿಟ್ಟಂತೆ’ ಸ್ಪಷ್ಟವಾಗಿ ನೆನಪು ನನ್ನ ಚಿತ್ತ ಪಟಲದಲ್ಲಿತ್ತು.
ಆ ದಿನಗಳು
ಸುತ್ತಣ ಮೂವತ್ತಕ್ಕೂ ಹೆಚ್ಚಿಗೆ ಊರಿಗೆ ನಮ್ಮೂರ ಶಾಲೆ ಒಂದೇ. ಈ ಶಾಲೆಗೆ ಒಂದೇ ಮಾಸ್ತರು. ಹಾಗೂ ಅವರ ಹೆಂಡತಿ ಮಂಡೆ ಸರಿಯಿಲ್ಲದ ಅಕ್ಕೋರು ಯಾನೆ ಮಳ್ಳಕೊರು ಅಲಿಯಾಸ್ ಮೇಡಂ. ಗುರೂಜಿ ಅಂದರೆ ಮಾಸ್ತರು ಹೈ ಬಿ.ಪಿ. ಇರೋ ಜನ. ಅಕ್ಕೋರು ಅಮಾವಾಸ್ಯೆ ಒಂದು ರೀತಿ, ಹುಣ್ಣಿಮೆಗೆ ಒಂದು ಥರಾ ವರ್ತನೆ. ಬದಲಾವಣೆಯಾಗುತ್ತಿತ್ತು. ತಲೆ ಸರಿಯಿಲ್ಲದ ಅಕ್ಕೋರು ಗುಳಿಗೆ ಮೇಲೆ ತಲೆ ಅಲ್ಲಾಡದಂತೆ ಇಟ್ಟುಕೊಂಡಿದ್ದರು. ಅಕ್ಕೋರು ಮಳ್ಳಿ, ತಲೆ ಹಾಳಾದವಳು ಎಂಬುದು ಸುತ್ತಣ ಮೂವತ್ತು ಊರಿಗೂ ಜಗಜ್ಜಾಹಿರಾಗಿತ್ತು. ಏಕೈಕ ಧರ್ಮ ಪತ್ನಿ, ತನ್ನ ಮಕ್ಕಳ ತಾಯಿಗೆ ತಲೆ ನೆಟ್ಟಗೆ ಇಲ್ಲ ಎಂದು ಮೂವತ್ತು ಹಳ್ಳಿಯಲ್ಲಿ ಲೋಕ ಪ್ರಸಿದ್ಧವಾದದ್ದು ಗಮನಕ್ಕೆ ಬಂದ ತಕ್ಷಣದಿಂದಲೇ ಮಾಸ್ತರಿಗೆ ಎಸಿಡಿಟಿ, ಗ್ಯಾಸ್, ಕೊಲೆಸ್ಟ್ರಾಲು, ಜೊತೆಯಲ್ಲಿ ಬಿ.ಪಿ. ಹೆಚ್ಚಾಗಿ ಇವರು ಮಾತ್ರೆ ತೆಗೆದುಕೊಳ್ಳತೊಡಗಿದರು.ಒಂದೇ ಮೇಸ್ಟ್ರು. ಒಂದೇ ಅಕ್ಕೋರು ಇರುವ ಶಾಲೆ ಸ್ಥಿತಿ, ದೇವರೆ ಗತಿ. ಸೋಮವಾರ ಕೇಂದ್ರ ಶಾಲೆಯಲ್ಲಿ ಮೀಟಿಂಗು, ಮಂಗಳವಾರ ಬೋರ್ಡು ಮೀಟಿಂಗು, ಬುಧವಾರ ಸಂತೆ, ಗುರುವಾರ ಮೇಸ್ಟ್ರಿಗೆ ಎಸಿಡಿಟಿ ಜೋರು ಅರಾಮಿಲ್ಲ. ಶುಕ್ರವಾರ ಮತ್ತೆ ಕೇಂದ್ರ ಶಾಲೆಯಲ್ಲಿ ಪುಸ್ತಕ ವಿತರಣೆ ಯಾ ಇನ್ನಾವುದೊ ಕೆಲಸ. ಶನಿವಾರ ಅರ್ಧದಿನ ಇತಿಹಾಸದ ಒಂಬತ್ತು ಪಾಠ ಎಮ್ಮೆ ಉಚ್ಚೆ ಹೊಯ್ದು ಹಾಗೇ ಒಂದೇ ಸಮನೆ ರಾಗ ಸಹಿತವಾಗಿ ನಿರ್ಭಾವದಿಂದ ಯಾರಿಗೂ ಅರ್ಥ ಆಗದ ರೀತಿಯಲ್ಲಿ ಓದಿ, ಮುಗಿಸಿದರೆ ಪೋರ್ಷನ್ ಕಂಪ್ಲೀಟು. ಇನ್ನು ಅಕ್ಕೋರು ಮೊದಲೇ ಮಳ್ಳಿ ಐ ಮೀನ್ ತಲೆ ಸರಿ ಇಲ್ಲದವರು. ನಮ್ಮಂತ ಎಡವಟ್ಟು ಹುಡುಗರನ್ನು ಕಂಟ್ರೋಲ್ ಮಾಡಲಿಕ್ಕಾಗದೆ ಬೆನ್ನು ಮುರಿದು ಕೊಡುತ್ತಿದ್ದರು. ಇವರದ್ದು ವಾರಕ್ಕೆ ಮೂರುದಿನ ರಜೆ. ಒಂದು ದಿನ ’ಮಾತ್ರೆಯನ್ನು ತಗೊಂಡಿದಿನಾ ಇಲ್ವಾ’ ಎಂದು ಮರೆತು ಎರಡೆರಡು ಬಾರಿ ಗುಳಿಗೆ ನುಂಗಿ ಜೋಮು ಹತ್ತಿ ಎಚ್ಚರನೇ ಆಗದೆ, ಎರಡು ದಿನ ಕಳೆದು ಬಿಡುತ್ತಿತ್ತು. ಒಂದಿನ ಅಕ್ಕೋರಿಗೂ ಮಾಸ್ತರಿಗೂ ಜಗಳ. ಅಕ್ಕೋರು ಮನೆಯಲ್ಲಿ , ಗುರುಜಿ ಸಂತೆಗೆ. ಉಳಿದೆರಡು ದಿನ ಅಕ್ಕೋರು ಒಂಥರಾ ಮಬ್ಬು ಅಥವಾ ಪುಲ್ ಉಲ್ಟಾ. ಹೀಗಿರುವ ಕಾಲದಲ್ಲಿ, ಹಳ್ಳಿಯ ಪ್ರೈಮರಿ ಸ್ಕೂಲು ಹುಡುಗರು ಎಂದರೆ ಮೊದಲೇ ಮಂಗ, ಅದಕ್ಕೆ ಕಳ್ಳನ್ನು ಕುಡಿಸಿ, ಮಧ್ಯೆ ಭೂತವು ಸಂಚಾರವಾಗಿ ಯದ್ವಾ ತದ್ವಾ ಭವಿಷ್ಯತಿ’ ವರಿಜನಲ್ ಮಾಸ್ಟ್ರು ಬರದೇ ಹೋದ ದಿನ. ಅಕ್ಕೋರಿಗೆ ಮೋದಕವಿದ ದಿನ. ಏಳನೇ ವರ್ಗದ ಹುಡುಗರು /ಹುಡುಗಿಯರು ಅಕ್ಕೋರು ಮಾಸ್ಟ್ರರು ಆಗುತ್ತಿದ್ದರು.ಮಾಸ್ತರು ಕೆಲಸದ ನಿಮಿತ್ತ ಹೊರಗಡೆ ನಿವಾಳಿಸಿದಾಗ, ಹುಡುಗ/ಹುಡುಗಿಯರಿಗೆ ಹೋಳಿ ಹುಣ್ಣಿಮೆ, ಓಕಳಿ, ಮಜವೆ ಮಜಾ. ಬಂಡಾರಮಕ್ಕಿ ಕಮಲ ವಿಳ್ಳೆದೆಲೆ ತರುತ್ತಿದ್ದ. ನನ್ನದು ಅಡಿಕೆ ಸಪ್ಲೈ. ಮೇಲಕೇರಿ ತಿಂಮ ಭಟ್ಟಂದು ತಂಬಾಕು, ಸುಣ್ಣ ಸರಬರಾಜು . ಮಂಜ ಶೆಟ್ಟಿ ಕೈ ಬೀಡಿ ತಂದರೆ ರಾಮ ಹೆಗಡೆ ಬೆಂಕಿಪಟ್ಟಣ ತರುತ್ತಿದ್ದ. ಕೆಳಗಿನಹಕ್ಲು ಚಂದ್ರಿಕಾ ಲಿಂಬೆಹಣ್ಣು ಮಡ್ಳೋಳಗೆ ಹಾಕಿಕೊಂಡು ಬಂದರೆ, ಮೂಲೆ ಮನೆ ಸಾವಿತ್ರಿ ಅರಮದ್ಲು ಕಾಯಿ ತರುತ್ತಿದ್ದಳು. ವೆಂಟ್ರಮಣ ಭಟ್ರ ಮಗಳು ಉಪ್ಪು, ಮೆಣಸಿನಕಾಯಿ ಜತೆಗೆ ಹುಳಿಪುಡಿ, ಹುಣಸೆ ಹಣ್ಣು ಪಟ್ಳ ಕಟ್ಟಿಕೊಂಡು ಬರುತ್ತಿದ್ದಳು. ಮತ್ತೆ ಇದೆಲ್ಲ ಕಾನೂನು ಪ್ರಕಾರ ಮನೆಯಲ್ಲಿ ಕೇಳಿಕೊಂಡು ತರುತ್ತಿದ್ದರು ಎಂದುಕೊಂಡರೆ ಶುದ್ಧ ತಪ್ಪು ಕಲ್ಪನೆ. ಎಲ್ಲವೂ ಹಿತ್ತಲ ಕಡೆಯಬಾಗಿಲ ಮೂಲಕವೇ ಕದ್ದು ತರುತ್ತಿದ್ದದ್ದು.
ಈಗಿನ ಹುಡುಗರಿಗೆ ಈ ಸೌಭಾಗ್ಯವಿಲ್ಲ. ಯಾಕೆಂದ್ರೆ ಶಾಲೆ ಬಾಗಿಲವರೆಗೆ ಅಪ್ಪ, ಅಮ್ಮ ಕೈ ಹಿಡಿದುಕೊಂಡು ಮಾಸ್ತರಿಗೆ ಒಪ್ಪಿಸಿ, ಸಂಜೆ ಮತ್ತೆ ಬಂದು ತಮಗಿರುವ ಒಂದು ಅಥವಾ ಎರಡು ಅಮೂಲ್ಯ ರತ್ನಗಳನ್ನು ಪರತ್ ಪಡೆದುಕೊಂಡು ಹೋಗುತ್ತಾರೆ.
ನಾಗರಾಜ ಮತ್ತಿಗಾರ
4 comments:
HAhahah ,..Mast baradya ...Valle enjoi madadi odikyandu ..Ninu heladu howdu igina kaladavke aa bhagya ille :( .aadru akkorige hangella helallgada ..nagaraja ;) ehhehe
thank u frind. satya vicharana hasyavagi helalakku ankandiddi.
ಚೊಲೋ ಬರಿತ ಇದ್ಯೋ
ನಿನ್ನ ಬರವಣಿಗೆ ಭಾರಿ ಸೂಪರ್ ಆಜು
,
Good one... bit exaggerating, but very similar situation i remembered too. Also remenber you seniors' MANGAATA.
Post a Comment