ಯಕ್ಷಗಾನದಲ್ಲಿ ಇಂದು ಬಹಳಷ್ಟು ಬದಲಾವಣೆಗಳಾಗಿವೆ. ಪೌರಾಣಿಕ ಪ್ರಸಂಗಗಳಿಗಿಂತ ನೂತನ ಪ್ರಸಂಗಗಳು ಹೆಚ್ಚು ಜನರನ್ನು ಆಕರ್ಷಿಸುತ್ತಿವೆ. ಆದರೆ ಪ್ರದರ್ಶನದ ವಿಧಾನದಲ್ಲಿ ಹೊಸತನವಿದ್ದರೆ ಪೌರಾಣಿಕ ಆಖ್ಯಾನಗಳಿಗೂ ಜನ ಬರುತ್ತಾರೆ ಎನ್ನುವುದಕ್ಕೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಯಕ್ಷಗಾನಕ್ಕೆ ಬಂದ ಜನಸ್ತೋಮವೇ ಸಾಕ್ಷಿ.
ಆ ದಿನ ಅಲ್ಲಿ `ಕಾರ್ತವೀರ್ಯಾರ್ಜುನ' ಆಖ್ಯಾನ ಮೂರು ಬಾರಿ ಪ್ರದರ್ಶನ ಕಂಡಿತು. ಒಂದೇ ರಾತ್ರಿಯಲ್ಲಿ ಬೇರೆ ಬೇರೆ ಕಲಾವಿದರು ಒಂದೇ ಆಖ್ಯಾನ ಪ್ರದರ್ಶಿಸುವ ಪ್ರಯೋಗ ಇದಾಗಿತ್ತು. ಹಿರಿ-ಕಿರಿಯ ಕಲಾವಿದರ ಕೂಡುವಿಕೆಯಲ್ಲಿ ಈ ಯಕ್ಷಗಾನವನ್ನು ಸಂಯೋಜಿಸಲಾಗಿತ್ತು. ಮೊದಲ ಪ್ರದರ್ಶನದಲ್ಲಿ ಸುಬ್ರಮಣ್ಯ ಚಿಟ್ಟಾಣಿ ಮತ್ತು ಚಿಟ್ಟಾಣಿ ರಾಮಚಂದ್ರ ಹೆಗಡೆ ಕಾರ್ತವೀರ್ಯನ ಪಾತ್ರವನ್ನು ನಿರ್ವಹಿಸಿದರು. ಚಿಟ್ಟಾಣಿ ಅವರು ತಮ್ಮ ವಯಸ್ಸನ್ನು ಮರೆತು `ವರವಿಲೋಚನ ಪುತ್ರನೂ ಸೆರೆಯೊಳಿರೆ' ಮತ್ತು `ಸಿಕ್ಕಿದೆಯ ಏಲೇ ದೈತ್ಯ ರಾಯ' ಪದ್ಯಕ್ಕೆ ಮೈಮರೆತು ಕುಣಿದರು. ಇವರೇ 74ರ ಪ್ರಾಯದ ಚಿಟ್ಟಾಣಿಯೋ ಎನ್ನುವ ಹಾಗೇ ಅಭಿನಯ ನೀಡಿದರು. ಇವರು ಎದುರು ರಾವಣನಾಗಿ ಬಳ್ಕೂರು ಕೃಷ್ಣಯಾಜಿ `ಖಳಕುಲೇಂದ್ರ ನಗುತ' ಎಂಬ ಪ್ರವೇಶ ಪದ್ಯದಲ್ಲಿಯೇ ಸಾಕ್ಷಾತ್ ರಾವಣ ಬಂದನೋ ಎಂಬ ಭಾವ ಮೂಡಿಸಿದರು.
ಕಾರ್ತವೀರ್ಯನ ದೂತನಾಗಿ ಹಳ್ಳಾಡಿ ಜಯರಾಂ ಶೆಟ್ಟಿ ಹಾಸ್ಯರಸಾಯನ ಉಣಬಡಿಸಿದರು. ವಿಭೀಷಣನ ಪಾತ್ರ ಮಾಡಿದ ಮಂಕಿ ಈಶ್ವರ ನಾಯ್ಕ ಅವರ ನೃತ್ಯ ಚೆನ್ನಾಗಿದ್ದರೂ ವಿಭೀಷಣನಂತಹ ಮುಂಡಾಸು ವೇಷದ ಗಂಭೀರ ವ್ಯಕ್ತಿತ್ವದ ಪಾತ್ರಕ್ಕೆ ಅದು ಹೆಚ್ಚಾಯಿತೇನೋ ಅನ್ನಿಸಿತು. ಕೊಳಗಿ ಕೇಶವ ಹೆಗಡೆ ಅವರ ಸುಶ್ರಾವ್ಯ ಭಾಗವತಿಕೆ ಪ್ರಸಂಗಕ್ಕೆ ಮತ್ತಷ್ಟು ರಂಗು ತುಂಬಿತು.
ಎರಡನೇ ಕಾರ್ತವೀರ್ಯನಾಗಿ ಬಂದವರು ಕಣ್ಣಿಮನೆ ಗಣಪತಿ ಭಟ್. ಪುಂಡು ವೇಷಕ್ಕೆ ಹೆಸರಾಗಿರುವ ಇವರಿಗೆ ರಾಜವೇಷ ಅಥವಾ ಕಿರೀಟ ವೇಷ ಅಷ್ಟು ಒಪ್ಪುವುದಿಲ್ಲ ಎಂದು ಯಾರಿಗಾದರೂ ಅನಿಸಿದರೆ ತಪ್ಪಲ್ಲ. ಆದರೂ ಅವರು ಕಾರ್ತವೀರ್ಯನ ಪಾತ್ರಕ್ಕೆ ನ್ಯಾಯ ಒದಗಿಸುವ ಪ್ರಯತ್ನ ಮಾಡಿದರು. ಭಿನ್ನ ಕುಣಿತಕ್ಕೆ ಹೆಸರಾದ ಇವರು `ಸರ್ಕಸ್'ಗಳು ಕಡಿಮೆ ಇದ್ದುದರಿಂದ ಪಾತ್ರ ಹಿತವೆನಿಸಿತು. ಇವರಿಗೆ ರಾವಣನಾಗಿ ಮತ್ತೋರ್ವ ಯುವ ಕಲಾವಿದ ತೋಟಿಮನೆ ಗಣಪತಿ ಹೆಗಡೆ ಅವರು ತಮ್ಮ ಸಾಮರ್ಥ್ಯಕ್ಕೆ ಮೀರಿ ಉತ್ತಮ ಅಭಿನಯ ನೀಡಲು ಪ್ರಯತ್ನಿಸಿದರು. ಆದರೆ ಇವರಿಗಿಂತ ಮೊದಲಿನ ಯಾಜಿ ರಾವಣನನ್ನು ಮರೆಸಲು ಸಾಧ್ಯವಾಗಲಿಲ್ಲ.
ದೂತನಾಗಿ ಉತ್ತಮವಾಗಿ ನಿರ್ವಹಿಸಿದ ಚಪ್ಪರಮನೆ ಶ್ರೀಧರ ಹೆಗಡೆ ಅವರ ಕುಣಿತದಲ್ಲಿ ವೈವಿಧ್ಯ ಇತ್ತು. ಮಾತಿನಲ್ಲಿ ಪಕ್ಕನೇ ನಗು ತರಿಸುವ ಚುರುಕುತನವಿತ್ತು. ರಾಘವೇಂದ್ರ ಮಯ್ಯ ಭಾಗವತಿಕೆ ಹಿತವೆನಿಸಿದರೂ ಪದ್ಯದ ಶಬ್ದಗಳು ಸ್ಪಷ್ಟವಾಗದೇ ಕಿರಿ ಕಿರಿಯೆನಿಸಿತು. ಪರಮೇಶ್ವರ ಬಂಡಾರಿ ಅವರ ಮದ್ದಳೆಯಲ್ಲಿ ಹೊಸತನವಿತ್ತು, ಸಖಿಯಾಗಿ ಶಶಿಕಾಂತ ಶೆಟ್ಟಿ ನೃತ್ಯ, ಮಾತು ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.
ಬೆಳಗಿನ ಜಾವದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ ಸುಂದರ ವೇಷಭೂಷಣ ಮತ್ತು ಸೃಜನಶೀಲ ಮಾತುಗಳ ಕಾರ್ತವೀರ್ಯನಾಗಿ ಗಮನಸೆಳೆದರು. ಪಾತ್ರದ ಚೌಕಟ್ಟಿನೊಳಗೇ ಹೊಸತನ ತುಂಬುವ ಅವರ ಶೈಲಿ ಆಕರ್ಷಕ. `ನೀಲ ಗಗನದೋಳು' ಪದ್ಯಕ್ಕೆ ಹೊಸ ರೀತಿಯಲ್ಲಿ ನೃತ್ಯ ಸಂಯೋಜನೆಯನ್ನು ಮಾಡಿರುವುದು ವಿಶೇಷವಾಗಿತ್ತು. ಹಡಿನಬಾಳು ಶ್ರೀಪಾದ ಹೆಗಡೆ ಅವರ ರಾವಣ, ಗತ್ತು ಮತ್ತು ಮಾತಿನಿಂದ ಜನರನ್ನು ಸೆಳೆಯಿತು. ಕ್ಯಾದಗಿ ಮಹಾಬಲೇಶ್ವರ ಅವರು ಹೊಸ ಪ್ರಸಂಗಗಳ ಹಾಸ್ಯ ಪಾತ್ರ ನಿರ್ವಹಿಸಿ ಜನರನ್ನು ಸೆಳೆಯುವುದರಲ್ಲಿ ನಿಪುಣರು. ಆದರೆ ಇಲ್ಲಿ ಅವರ ಪಾತ್ರ ಪರವಾಗಿಲ್ಲ ಎನ್ನುವಂತಿತ್ತು. ಹೆರಂಜಾಲು ಗೋಪಾಲ ಗಾಣಿಗರ ಭಾಗವತಿಗೆ ಸಾಂಪ್ರದಾಯಿಕ ಶೈಲಿಯಿಂದಾಗಿ ಖುಷಿ ನೀಡಿತು. ರಾತ್ರಿಯಿಂದ ಬೆಳಗಿನವರೆಗೆ ಕೋಟ ಶಿವಾನಂದ ಅವರ ಚಂಡೆ ವಾದನ ಪ್ರತಿಯೊಬ್ಬರ ಕುಣಿತಕ್ಕೂ ಮೆರುಗು ನೀಡಿತು.
ಈ ಪ್ರಯೋಗವೇನೋ ಉತ್ತಮ. ಆದರೆ ಒಂದೇ ಪ್ರಸಂಗವನ್ನು ಒಂದೇ ರಾತ್ರಿಯಲ್ಲಿ ಮೂರು ಬಾರಿ ನೋಡುವುದು ಪ್ರೇಕ್ಷಕನ ಸಹನೆಯನ್ನು ಪರೀಕ್ಷೆಗೆ ಒಡ್ಡುತ್ತದೆ. ಇದೊಂದು ಸ್ಪರ್ಧೆಯ ಉತ್ಸಾಹವನ್ನು ಪ್ರೇಕ್ಷಕರಲ್ಲಿ ಮೂಡಿಸಲು ಸಾಧ್ಯವಾಗದಿದ್ದರೆ ಅದು ಏಕತಾನತೆಯಿಂದ ಬಳಲಬೇಕಾಗುತ್ತದೆ. ಇಲ್ಲದಿದ್ದರೆ 'ಕೇಳಿದ್ದನ್ನೇ ಕೇಳುವ' ದೌರ್ಭಾಗ್ಯ ಪ್ರೇಕ್ಷಕನಾಗುತ್ತದೆ! ಎನ್ನುವುದು ಮೊನ್ನೆಯ ಪ್ರದರ್ಶನದಲ್ಲಿ ಸಾಬೀತಾಯಿತು. ಆದರೂ ಹೊಸ ಪ್ರಸಂಗಗಳ ಭರಾಟೆಯಲ್ಲಿ ಇಂತಹ ಪ್ರಯತ್ನಗಳ ಮೂಲಕ ಪೌರಾಣಿಕ ಪ್ರಸಂಗಗಳನ್ನು ಚಾಲ್ತಿಯಲ್ಲಿಡುವ ಯತ್ನ ಶ್ಲಾಘನೀಯ. ಸಾಲಿಗ್ರಾಮ ಮೇಳದವರ ಜೊತೆ ಹಲವಾರು ಖ್ಯಾತ ನಟರನ್ನು ಒಂದೇ ವೇದಿಕೆಯಲ್ಲಿ ಕುಣಿಸಿದ ಹೆಗ್ಗಾರಳ್ಳಿ ಮನೋಜ್ ಭಟ್ಟರು ಅಭಿನಂದನಾರ್ಹರು.
2 comments:
ವ್ಹಾ! ಬ್ಲಾಗ್ ಶೀರ್ಷಿಕೆಗೆ ಮಾಡಿದ್ದ ಫೋಟೋಶಾಪಿಂಗ್ ತುಂಬಾ ಚೊಲೋ ಆಜು. ನೀನೇ ಮಾಡಿದ್ದಾ? ಬರಹದ ಬಗ್ಗೆ ನಾ ಏನೋ ಹೇಳಲ್ಲ.. ನಂಗೆ ಯಕ್ಷಗಾನ ಕಂಡ್ರೆ ಅಷ್ಟಕಷ್ಟೇ :)
ಯಕ್ಷಗಾನವೆಂದರೆ ಮೈನವಿರೇಳುವಂತಹವರಲ್ಲಿ ನಾನೂ ಒಬ್ಬ
ಕೆಲಸದ ನಿಮಿತ್ತ ಕತಾರ್ ನಲ್ಲಿ ನಿಲೆಸಿರುವುದರಿಂದ ಈ ಮದ್ಯೆ ಇಂತಹ ಕಾರ್ಯಕ್ರಮ ಗಳಿಂದ ವಂಚಿತನಾಗಿದ್ದೇನೆ. ಇದೇ ಕಲಾವಿದರುಗಳ ಹಲಾವಾರು ಕಾರ್ತಿವೀರ್ಯಾರ್ಜುನ ನೋಡಿರುವ ನನಗೆ ಈ ಬರಹವನ್ನ ಓದುವಾಗ ಮತ್ತೊಮ್ಮೆ ನೋಡಿದ ಅನುಭವ ಆಯಿತು.ಇಂತಹ ವಸ್ತುನಿಷ್ಟ ವಿಮರ್ಶೆ ಗಳನ್ನ ಬರೆಯುತ್ತಿರಿ.
(ನಾರಾಯಣ ಮೂರ್ತಿ ಹೊಸಬಾಳೆ)
Post a Comment