Sunday, November 15, 2009

ಮಾಯಾಂಗನೆಯ ಸೆರಗು ಹಿಡಿದು

i am leaving the hell. that means benglore

ನಾನು ನರಕವನ್ನು ಬಿಡುತ್ತಿದ್ದೇನೆ. ಅಂದರೆ ಬೆಂಗಳೂರಿಂದ ಹೊರಗಡೆ ಹೋಗುತ್ತಿದ್ದೇನೆ. ಇದು ಟ್ವಿಟರ್‌ ಎನ್ನುವ ಅಂತರ್ಜಾಲ ತಾಣದಲ್ಲಿ ಕಂಡ ವಾಕ್ಯ.

ನಿಜ, ಬೆಂಗಳೂರು ಸ್ವರ್ಗ ಎಂದು ತಿಳಿದು ಬಂದ ಅದೆಷ್ಟೋ ಮಂದಿಗೆ ಹೀಗೆ ಅನ್ನಿಸುತ್ತಿದ್ದರೆ ಸುಳ್ಳಲ್ಲ. ದೇವಲೋಕದ ಸ್ವರ್ಗದ ಕಲ್ಪನೆಯಲ್ಲೇ ಬೆಂಗಳೂರನ್ನು ಗ್ರಹಿಸಿ ಬಂದವರ ಸಂಖ್ಯೆ ಅಧಿಕ. ನಾನು ನನ್ನಂಥ ಅನೇಕ ಮಂದಿ ಕೆಲಸವನ್ನು ಅರಸಿ ಇಲ್ಲಿಗೆ ಬರುವಾಗ ಹೊರಲಾದಷ್ಟು ಭಾರದ ಕನಸಿನ ಮೂಟೆ ಹೊತ್ತು ಕೊಂಡೇ ಬಂದೆವು. ಆ ಕನಸಿನ ಮೂಟೆಯ ಭಾರ ಮಾತ್ರ ಇನ್ನೂ ಕಡಿಮೆಯಾಗಲಿಲ್ಲ. ವಜ್ಜೆ ತಡೆದುಕೊಳ್ಳಲಿಕ್ಕೂ ಆಗುತ್ತಿಲ್ಲ.
ಬೆಂಗಳೂರು ಬದುಕುವುದನ್ನು ಕಲಿಸುತ್ತದೆ. ಸತ್ಯ, ಆದರೆ ಜೀವನ ಅನುಭವಿಸುವುದನ್ನು ಕಲಿಸುವುದಿಲ್ಲ ಎಂಬುದು ಅಷ್ಟೇ ಸತ್ಯ.
ರಾಜಧಾನಿಗೆ ಬರುವ ಪೂರ್ವದ ಕತೆಗಳನ್ನು ಸ್ವಲ್ಪ ಹೇಳಬೇಕಾಗುತ್ತದೆ. ಪದವಿಯನ್ನು ಮುಗಿಸಿದ ಆ ದಿನಗಳಲ್ಲಿ ಬೆಂಗಳೂರು ಸೇರಿದ ಅನೇಕ ಮಂದಿ ಮಿತ್ರರು ಹೇಳುತ್ತಿದ್ದರು `ಇಲ್ಲಿಗೆ ಬಾರಯ್ಯ, ಸಕತ್ತಾಗಿದೆ. ಬ್ರಿಗೇಡ್‌, ಎಂ.ಜಿ. ರೋಡ್‌ ವೀಕೆಂಡ್‌ ಮಜಾ ಮಾಡಬಹುದು. ಬೇಸರ ಆದಾಗಲೆಲ್ಲ ಕಬ್ಬನ್‌ ಪಾರ್ಕ್‌, ಲಾಲ್‌ ಬಾಗ್‌ ಓಡಾಡಲಿಕ್ಕೆ ಆಗುತ್ತೆ. ತಿಂಗಳ ಕೊನೆಗೆ ಸಂಬಳ. ಹಣಕ್ಕಾಗಿ ಬೇರೆಯವರನ್ನು ಕೇಳುವ ಕೆಲಸವಿರಲ್ಲ, ಎಂಬೆಲ್ಲ ಕನಸನ್ನು ಕಟ್ಟಿದರು. ಯಾವುದೋ ಹಳ್ಳಿಯ ಮೂಲೆಯಲ್ಲಿರುವ ನಾನು, ನನ್ನಂತಹ ಅನೇಕ ಮಂದಿಗೆ ಮಿತ್ರರ ಮಾತು ವಜ್ರದ ಹರಳಿನಂತೆ ಹೊಳೆಯಿತು.
ಜಾಗರೂಕನಾಗಿರುವವ ಒಂದು ಕೆಲಸ ಹುಡುಕಿ ಇಲ್ಲಿಗೆ ಬರುತ್ತಾನೆ. ಬೆಂಗಳುರು ಆದಷ್ಟು ಬೇಗನೆ ಸೇರಬೇಕು ಎಂಬ ಉಮೇದಿ ಇರುವವನು ಬಂದು ಹುಡುಕಿದರಾಯಿತು ಎಂದು ಬಸ್‌ ಹತ್ತುತ್ತಾನೆ. ಇಲ್ಲಿಗೆ ಬಂದ ಮೇಲೆ ಮಾಯಾನಗರಿಯ ವಿಲಾಸ ತಿಳಿಯುತ್ತದೆ. ಮೆಜೆಸ್ಟಿಕ್‌ಗೆ ಬಂದು `ಗೆಳೆಯನೊಬ್ಬ ಇದ್ದಾನೆ, ಅವನಿಗೆ ಫೋನ್‌ ಮಾಡುವ ಎಂದು ಕೊಯ್ನ್‌ ಬಾಕ್ಸ್‌ಗೆ ಹೋಗಿ ಕಾಲ್‌ ಮಾಡಿದರೆ `ನೀವು ಕರೆ ಮಾಡಿದ ಚಂದಾದಾರರು ಯಾವುದೇ ಕರೆಯನ್ನು ಸ್ವೀಕರಸುತ್ತಿಲ್ಲ' ಎಂಬ ಅಶರೀರ ವಾಣಿ ಕೇಳ ಬೇಕಾದ ಸ್ಥಿತಿಯೂ ಬರುತ್ತದೆ. ಒಮ್ಮೆ ಕರೆ ಸ್ವೀಕಾರ ಮಾಡಿದರೆ ನಾನು ಹೊಸ್ಕೆರೆಹಳ್ಳಿಯಲ್ಲಿರುವುದು. ಇಂತ ನಂಬರ್‌ ಬಸ್‌ ಹತ್ತಿ ಬಾ, ನಾನು ಅಲ್ಲಿ ನಿನ್ನ ಪಿಕ್‌ಅಪ್‌ ಮಾಡುತ್ತೇನೆ ಅನ್ನುತ್ತಾನೆ.
`ನಮ್ಮ ರಾಜ್ಯಧಾನಿ ಬೆಂಗಳೂರು' ಎಂದು ಪ್ರಾಥಮಿಕ ಶಾಲೆಯಲ್ಲಿ ಮೇಸ್ಟ್ರು ಹೇಳಿದನ್ನು ಕೇಳಿದ ಅನುಭವವಿರುವ ಹೊಸಮುಖ ಕಪ್ಪಿಡುತ್ತದೆ. ಯಾರ ಹತ್ತಿರವಾದರೂ ಕೇಳುವ ಎಂದರೆ ಅಲ್ಲಿರುವ ಎಲ್ಲರೂ ಗಡಬಿಡಿಯಲ್ಲಿ ಓಡಾಡುತ್ತಿರುತ್ತಾರೆ. ಆದರೂ ಕೇಳಿದ ಅಂತಿಟ್ಕೋಳಿ, ಅವರೆನೋ ಅನ್ನುತ್ತಾರೆ. ಇವನಿಗೆ ಎನೋ ಕೇಳುತ್ತದೆ. ಇದು ಬೆಂಗಳೂರಿಗೆ ಬಂದಾಗ ಆಗುವ ಮೊದಲ ಅನುಭವ.
ಆದರೂ ಬೆಂಗಳೂರು ಸುಂದರ. ನಂತರ ಜ್ಞಾನೋದಯವಾಗುತ್ತ ಹೋಗುತ್ತದೆ. ಬೆಂಗಳೂರು ಎಂದರೆ ರಭಸವಾಗಿ ಹರಿಯುವ ನೀರು. ಇಲ್ಲಿನ ಸುಳಿಯಲ್ಲಿ ಜೀವನ ಕೊಚ್ಚಿ ಹೋಗುತ್ತದೆ. ನಾವು ಎಲ್ಲಿದ್ದೇವೆ ಎಂದು ಯೋಚಿಸುವ ಹೊತ್ತಿಗೆ ಎಲ್ಲಿಗೆ ಹೋಗಿ ತಲುಪಿರುತ್ತೇವೆ. ಅಂದರೆ ಇಲ್ಲಿಗೆ ಬಂದ ವ್ಯಕ್ತಿ ಬೇಗನೆ ಹಣ ಸಮಪಾದನೆ ಮಾಡಬಹುದು, ಒಳ್ಳೆಯ ಹೆಸರನ್ನು ಗಳಿಸಬಹುದು, ಕೆಟ್ಟ ಕೆಲಸ ಮಾಡಿ ಕುಖ್ಯಾತಿಯನ್ನೂ ಗಳಿಸಬಹುದು. ಬೆಳವಣಿಗೆ, ಪತನ, ಸಂಪಾದನೆ ಎಲ್ಲವೂ ಇಲ್ಲಿ ಸಾಧ್ಯ. ನೆಮ್ಮದಿಯ ಜೀವನವೊಂದನ್ನು ಬಿಟ್ಟು.
`ನನಗೆ ಕಮರ್ಷಿಯಲ್‌ ಸ್ಟ್ರೀಟ್‌ನಲ್ಲಿ ಮನೆ ಇತ್ತು. ಅಲ್ಲಿ ಗಲಾಟೆ ಎಂದು ಕತ್ರಿಗುಪ್ಪೆಯಲ್ಲಿ ಮನೆ ಮಾಡಿದೆ. ಈಗ ಅಲ್ಲಿಯೂ ಗೌಜು ಅದಕ್ಕಾಗಿ ಇಲ್ಲಿ ಮನೆ ಮಾಡುತ್ತಿದ್ದೇವೆ ' ಎನ್ನುವ ಮಾತನ್ನು ಉತ್ತರಹಳ್ಳಿಯಲ್ಲಿ ಮನೆಕಟ್ಟುತ್ತಿರುವ ಒಬ್ಬರ ಮಾತು. ಇಲ್ಲೇ ಹುಟ್ಟಿ ಬೆಳದವರಿಗೆ ಇಲ್ಲಿನ ವಾತಾವರಣ `ಗಲಾಟೆ' ಎಂದಾಗ ಹಳ್ಳಿಯಲ್ಲಿ ಹುಟ್ಟಿ ಬೆಳೆದವರ ಕತೆ ಎನಾಗಬಹುದು? ಅದಕ್ಕೆ ಬೆಟ್ಟದಾ ಮೇಲೊಂದು ಮನೆಯ ಮಾಡಿ ವಚನವೇ ಸಾಂತ್ವಾನ ಹೇಳುತ್ತದೆ
ಇಲ್ಲಿನ ವಾತಾವರಣ ಕಲುಷಿತ ಗೊಳ್ಳುತ್ತಿದೆ. ಮೂರು ದಿನ ಕಣ್ಮುಚ್ಚಿ ಮಳೆಹೊಯ್ದರೆ ಮಹಾನಗರಿ ತತ್ತರಿಸುತ್ತದೆ. ತಾಪ ಹೆಚ್ಚಾಗ ತೊಡಗಿದೆ. ದೂಳು ಯಥೇಚ್ಚ. ಇದು ಪ್ರಾಕೃತಿಕ ತೊಂದರೆಯಾದರೆ, ಸಮಾಜದೊಡನೆ ಬದುಕುವ ಮನುಷ್ಯ ಮನುಷ್ಯನ ಸಂಬಂಧವೇ ಹಳಸುತ್ತಿದೆ. ಪಕ್ಕದ ಮನೆಯವರ ಪರಿಚಯ ಇಲ್ಲದ ಸ್ಥಿತಿ ಇದೆ. ಎಲ್ಲರಿಗೂ ಅವರರವರ ಕೆಲಸವೇ ಮುಖ್ಯವಾಗುತ್ತಿದೆ. ಸಾವಿರ ಸಾವಿರ ಮನೆಗಳ ಮಧ್ಯೆ ಒಂಟಿ ಮನೆ. ಲಕ್ಷಾಂತರ ಜನರಿದ್ದರು ಎಕಾಂಗಿ ಎನ್ನುವ ಸ್ಥಿತಿ ಇಲ್ಲಿದೆ.
ಒಂದು ಕಡೆಯಲ್ಲಿ ರಾಜಧಾನಿಗೆ ಸಹಸ್ರದ ಲೆಕ್ಕಾಚಾರದಲ್ಲಿ ಜನರು ಬರುತ್ತಿದ್ದರೆ, ಮತ್ತೊಂದೆಡೆ ಇಲ್ಲಿಂದ ಬೇರೆಡೆ ಹೋಗಬೇಕು ಎಂದು ದಿನವೂ ಯೋಚಿಸುತ್ತ ಇಲ್ಲೇ ಇದ್ದವರಿದ್ದಾರೆ. ಹೊಟ್ಟೆಪಾಡಿಗಾಗಿ ಬಂದು ಬೇರೆಡೆ ಹೋಗಲಾರದ ಸ್ಥಿತಿಯಲ್ಲಿರುವವರು ಇಲ್ಲಿನ ಬದಲಾವಣೆಗೆ ಒಳಗೊಳಗೆ ಬಯ್ದುಕೊಳ್ಳುತ್ತಾ ಇಲ್ಲೆ ಇರಬೇಕಾಗುತ್ತದೆ. ಅಂದರೆ ಸಾವಿರ ಲೆಕ್ಕದಲ್ಲಿ ಕನಸು ಕಂಡು ಇಲ್ಲಿಗೆ ಬಂದವರು ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಾ ಇರಬೇಕಾಗುತ್ತದೆ. ಅದೇ ಇಂಜನಿಯರಿಂಗ್‌ ಕಲಿತು ಬಂದವರು ಲಕ್ಷಾಂತರ ಗಳ ಕನಸು ಕಂಡು ಬಂದವರು ನಗರದ ಹೊರವಲಯದಲ್ಲಿ ಅಥವಾ ಯಾವುದಾದರೂ ಹಳ್ಳಿಯಲ್ಲಿ ಭೂಮಿ ಖರೀದಿಸಿ ತಂಪನೆ ಜೀವನ ಸಾಗಿಸಲಿಕ್ಕೆ ಹೊರಡುತ್ತಾರೆ. ಇನ್ನೂ ಕೆಲವರು ಹೇಳುತ್ತಾರೆ ` ಇನ್ನೊಂದು ನಾಲ್ಕು ವರ್ಷ ಎಲ್ಲಿಯಾದರೂ ಹಳ್ಳಿಯಲ್ಲಿ ಸ್ವಲ್ಪ ಜಮೀನು ತೆಗೆದುಕೊಂಡು ಆರಾಮ ಇದ್ದುಬಿಡ್ತೀನಿ' ಎಂದು.
ಶೇಕಡಾ 80ಕ್ಕೂ ಹೆಚ್ಚು ಜನರಿಗೆ ಅಲ್ಲದೆ ನಮ್ಮನೆ ಅವರೆಲ್ಲ ಇಲ್ಲಿರುವುದು ಸುಮ್ಮನೆ ಅಷ್ಟೇ. ಹೀಗಾಗಿ ಬೆಂಗಳೂರಿಂದ ಹೋಗುವವರು ಹೋಗುತ್ತಾರೆ. ಬರವವರು ಬರುತ್ತಾರೆ.

4 comments:

ಅಲೆಮಾರಿ said...

ಅಂತೂ ಈ ಲೇಖನಾನ ಬ್ಲಾಗ್ ಗೆ ಹಾಕದೆ ಹೇಳಾತು. :)

Dileep Hegde said...

ಇಷ್ಟೊಂದ್ ಮನೆ ಇಲ್ಲಿ ಎಲ್ಲಿ ನನ್ಮನೆ..?
ಇಷ್ಟೊಂದ್ ಜನ ಇಲ್ಲಿ ಯಾರು ನನ್ನೋರು..??
ಕಟು ಸತ್ಯವನ್ನ ನಿಮ್ಮ ಲೇಖನ ನಮ್ಮ ಮುಂದಿಟ್ಟಿದೆ...
ಉತ್ತಮ ಬರಹ.. :)

Pramod P T said...

ಬರಹ ಚೆನ್ನಾಗಿದೆ ಕಣೊ.
(ವಜ್ಜೆ - ಈ ಪದದ ಅರ್ಥ ಎಲ್ರಿಗೂ ಗೊತ್ತಿರ್ಲಿಕ್ಕಿಲ್ಲಾ ಅಂದ್ಕೊಳ್ತಿನಿ :). ಬರಹದ ಕೊನೆಗೆ ಸೇರಿಸಿದ್ರೆ ಉತ್ತಮ.

ಚುಕ್ಕಿಚಿತ್ತಾರ said...

ಬೆ೦ಗ್ಳೂರಲ್ಲಿ ಇರದು ಭಾಳಾ ಕಷ್ಟ್ವೇಯಾ.. ಎಲ್ಲಾದಕ್ಕೂ ದುಡ್ಡ್ ಕೊಡವೂ..
ಗಾಳೀಗೂ.. ಉಸಿರಾಡಿದ್ ಮೇಲೆ ಡಾಕ್ಟ್ರೀಗೆ...
ಊರೇ ಚೊಲೊವಪಾ...

FEEDJIT Live Traffic Feed