Tuesday, April 21, 2009

ಇದು ಸಿನೆಮಾ ವರದಿ ಕತೆ


ಬಹಳ ಹಿಂದಿನ ಕತೆಯಲ್ಲ. ಈಗೊಂದು ವರ್ಷದ ಹಿಂದೆ. ಸಿನೆಮಾ, ಸಿನೆಮಾ ಜಗತ್ತು ಎಂದರೆ ತಲೆಯೊಳಗೆ ರಂಗುರಂಗಿನ ಕನಸುಗಳು ಬರುತ್ತಿದ್ದವು. ಅಬ್ಬಾ! ರಮ್ಯನ ಎದುರಿಂದ ನೋಡಿದರೆ ರಮ್‌ ಕುಡಿದಷ್ಟೇ ಖುಷಿಯಾಗಬಹುದೇನೋ!! ಮುಂಗಾರು ಮಳೆ ಪೂಜಾನ ನೋಡಿದರೆ ಪಾವನರಾಗುತ್ತೇವೆನೋ ಎಂದೆಲ್ಲಾ ಕಾಣುತ್ತಿತ್ತು. ಶಿವರಾಜ್‌ ಕುಮಾರ್‌, ಪುನೀತ್‌, ಮುರುಳಿ, ಕಿಟ್ಟಿ ಸಾಲು ಸಾಲಾಗಿ ಹೀರೋಗಳು ಕಣ್ಣೆದುರಿಗೆ ಬರುತ್ತಿದ್ದರು. ಆದರೆ ಅವೆಲ್ಲ ಸುಳ್ಳು, ಖಾಸಗಿ ಬದುಕೆಂಬುದು ಮೂರಾಬಟ್ಟೆಯಾಗಿ ಕೋಟಿ ಕೋಟಿ ದುಡಿದರು ಸರಿಯಾಗಿ ತಿನ್ನಲಿಕ್ಕೆ ಆಗದೆ, ಡೈಯಟ್ಟು ಪಯಟ್ಟು ಅನ್ಕೊಂಡು ಬದುಕುವ ಮಂದಿ ಎಂದು ಗೊತ್ತಾಗಿದ್ದೆ ನಾನೂ ಸಿನೆಮಾ ವರದಿಗೆ ಹೋಗತೊಡಗಿದಾಗ.
ನಾನು ಮೊದಲು ಹೋಗಿದ ಪ್ರೆಸ್‌ ಮೀಟ್‌ ಶಿವರಾಜ್‌ ಕುಮಾರ್‌ ಅಭಿನಯದ ನಂದ, ಈ ಚಿತ್ರ ಇಂದು ತೆರೆ ಕಂಡು ಸದ್ದು ಗದ್ದಲವಿಲ್ಲದೆ ಟ್ರಂಕ್‌ ಒಳಗಡೆ ಸೇರಿದೆ. ಇನ್ನೊಂದು ಪ್ರೀತಿಯ ತೇರು. ತೇರನ್ನು ಕಟ್ಟಿ ಬಹಳ ದಿನವಾದರೂ ಎಳೆಯಲು ಮಾತ್ರ ಆಗಲಿಲ್ಲ. ನಂತರ ಸುಮಾರು ಐವತ್ತು ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದೆ.
ಎಲ್ಲಾ ಪತ್ರಿಕಾ ಗೋಷ್ಠಿಗಳು ಬಹುತೇಕ ಒಂದೇತರ. ನಟರು, ನಿರ್ದೇಶಕರು, ನಿರ್ಮಾಪಕರು ಬೇರೆ ಇರುತ್ತಾರೆಯೇ ಹೊರತು ಮಾತುಗಳೆಲ್ಲ ಒಂದೆಸೇಮ್‌.
ಸಾಮಾನ್ಯವಾಗಿ ನಿರ್ದೇಶಕ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತಾಡಲಿಕ್ಕೆ ಪ್ರಾರಂಭಿಸುತ್ತಾರೆ. ಇವರ ಮೊದಲ ವಾಕ್ಯವೇ ಇದೊಂದು ಡಿಫರೆಂಟ್‌ ಸ್ಟೋರಿ ಇರೋ ಚಿತ್ರ. ಐದು ಹಾಡು ನಾಲ್ಕು ಹಾಡುಗಳು ಪಕ್ಕಾ ಜಾನಪದ ಶೈಲಿಯಲ್ಲೆ ಇದೆ. ಅದಕ್ಕೆ ಮಾರ್ಡನ್‌ ಟಚ್‌ ನೀಡಿದ್ದೇವೆ. ಒಂದು ಐಟಂ ಸಾಂಗು. ಕತೆಗೆ ಸರಿಯಾಗೇ ಐಟಂ ಸಾಂಗ್‌ ಇದೆ. ಫಾರೇನ್‌ ಲೋಕೆಶನ್‌ಗೆ ಹೋಗುವ ಪ್ಲಾನ್‌ ಮಾಡಿದ್ದೇವೆ. ಮೂರು ಕೋಟಿ ಬಜೆಟ್‌. ನಿರ್ಮಾಪಕರು ನಾವು ಕೇಳಿದಕ್ಕೆ ಇಲ್ಲಾ ಎನ್ನುವುದಿಲ್ಲ ಎನ್ನುವ ಭರವಸೆ ಇದೆ ಎನ್ನುತ್ತಾರೆ.
ನಂತರ ನಾಯಕನ ಸರದಿ ಪ್ರಾರಂಭವಾಗುತ್ತದೆ. ಚಿತ್ರದ ಕತೆ ಮಾತ್ರ ಸೂಪರ್‌, ನಿರ್ದೇಶಕರು ಬಂದು ಕತೆಯನ್ನು ಹೇಳಿದರು ಖುಷಿಯಾಯಿತು. ಮದರ್‌ ಸೆಮಟಿಮೆಂಟ್‌ ಇರೋ ಸಿನೆಮಾ. ಮ್ಯಾಸೇಜ್‌ ಇದೆ. ಚಿತ್ರ ಚೆನ್ನಾಗಿ ಬರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ ಎನ್ನುತ್ತಾರೆ.
ನೆಕ್ಷ್ಟ್‌ ನಾಯಕಿ, ದಿಸ್‌ ಇಸ್‌ ಮೈ ಥರ್ಡ್‌ ಮೂವಿ. ಬ್ಯುವ್ಟಿಫೂಲ್‌ ಸ್ಟೋರಿ. ಇಷ್ಟು ಹೇಳಿ ಮೌನಕ್ಕೆ ಶರಣಾಗುವರು ಹೆಚ್ಚಿಗೆ ಮಂದಿ.ನಾದರು ಹೆಚ್ಚಿಗೆ ಪ್ರಶ್ನೆ ಏನಾದರೂ ಕೇಳಿದರೆ, ನಿರ್ದೇಶಕರು ಅವರ ಸಹಾಯಕ್ಕೆ ಬರುತ್ತಾರೆ. ನಾಲಿಗೆಯ ಮೇಲೆ ಕನ್ನಡ ಎನ್ನುವ ಅಕ್ಷರ ಮರೆಯಾಗಿ ಇಂಗ್ಲಿಷ್‌ ನಲಿದಾಡುತ್ತದೆ. ಹಾಗೇ ಹೇಳಿ ನಿರ್ದೇಶಕರು ಇವರನ್ನು ಪರಿಚಯ ಮಾಡಿ ಕೊಡುವಾಗ ಇವರು ಕನ್ನಡ ಹುಡುಗಿ ಎಂದು ಪರಿಚಯ ಮಾಡಿ ಕೊಡುತ್ತಾರೆ.
ಹದಿನೈದು ನಿಮಿಷದ ಪತ್ರಿಕಾಗೊಷ್ಠಿಗೆ ಕನಿಷ್ಠ ಮೂರು ತಾಸು ವ್ಯಯ ಮಾಡಬೇಕಾಗುತ್ತದೆ ಎನ್ನುವುದು ವಿಶೇಷ. ಯಾರಾದರೂ ಪತ್ರಕರ್ತ ನಟಿ ಅಥವಾ ನಾಯಕನ್ನು ಹೊಗಳದೆ ತೆಗಳಿದರೆ ಕಚೇರಿಗೆ ಕಾಲ್‌ ಗ್ಯಾರಂಟಿ. ಅದೇ ಒಳ್ಳೆಯದಾಗಿ ಬರೆದರೆ ಮಾತು ಆಡಿಸುವುದಿಲ್ಲ. ಇದು ಸಿನೆಮಾ ವರದಿಗೆ ಹೋದ ಅನುಭವ. ಇಷ್ಟೇ ಅಲ್ಲ. ಇನ್ನು ಇದೆ. ಮತ್ತ್ಯಾವಾಗಾದರೂ ಬರೆಯುವ.

FEEDJIT Live Traffic Feed